ಸರ್ಕಾರಿ ಶಾಲೆಗಳ ಅಳಿವು ಉಳಿವು ಶಿಕ್ಷಕರ ಮೇಲೆ

| Published : Sep 24 2024, 01:48 AM IST

ಸಾರಾಂಶ

ಪ್ರಸ್ತುತ ಜ್ಞಾನಕೋಸ್ಕರ ಶಿಕ್ಷಣ ಪಡೆಯುತ್ತಿಲ್ಲ, ಉನ್ನತ ವೃತ್ತಿಗೋಸ್ಕರ ಮಕ್ಕಳಿಗೆ ಶಿಕ್ಷಣ ಕೊಡಿಸುವ ಅಗತ್ಯತೆ ಹೆಚ್ಚಾಗಿದ್ದು, ಮೊದಲೇ ನಿರ್ಧರಿಸಿ ಶಿಕ್ಷಣ ಕೊಡಿಸುತ್ತಿದ್ದಾರೆ.

ಜಿಲ್ಲೆಯ ಹಿಂದುಳಿದ,ಗ್ರಾಮೀಣ ಪ್ರತಿಭೆಗಳನ್ನು ಹೊರತನ್ನಿ: ಶಿಕ್ಷಕರಿಗೆ ಉಸ್ತುವಾರಿ ಸಚಿವ ವೆಂಕಟೇಶ್ ಸಲಹೆ । ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ, ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಇದು ಸ್ಪರ್ಧಾತ್ಮಕ ಜಗತ್ತು, ಬದಲಾವಣೆಗೆ ಹೊಂದಿಕೊಂಡು ಶಿಕ್ಷಣ ನೀಡಬೇಕಾಗಿದ್ದು, ಸರ್ಕಾರಿ ಶಾಲೆಗಳ ಅಳಿವು, ಉಳಿವಿನ ಮಹತ್ತರ ಜವಾಬ್ದಾರಿ ಸರ್ಕಾರಿ ಶಿಕ್ಷಕರ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಜ್ಞಾನಕೋಸ್ಕರ ಶಿಕ್ಷಣ ಪಡೆಯುತ್ತಿಲ್ಲ, ಉನ್ನತ ವೃತ್ತಿಗೋಸ್ಕರ ಮಕ್ಕಳಿಗೆ ಶಿಕ್ಷಣ ಕೊಡಿಸುವ ಅಗತ್ಯತೆ ಹೆಚ್ಚಾಗಿದ್ದು, ಮೊದಲೇ ನಿರ್ಧರಿಸಿ ಶಿಕ್ಷಣ ಕೊಡಿಸುತ್ತಿದ್ದಾರೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ನಡುವೆ ಅಜಗಜಾಂತರ ವ್ಯತ್ಯಾಸವಾಗುತ್ತಿದ್ದು, ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣವೇನು ಎಂಬುದನ್ನು ಹುಡುಕಿ ಕೆಲಸ ನಿರ್ವಹಿಸಬೇಕಾಗಿದೆ ಎಂದರು.

ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಶಿಕ್ಷಣ ನೀಡಿ, ಸರ್ಕಾರಿ ಶಾಲೆಗಳನ್ನು ಉಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಈ ನಿಟ್ಟಿನಲ್ಲಿ ಚಿಂತಿಸಿ ಮುನ್ನಡೆಯಿರಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳೇ ಹೆಚ್ಚಾಗಿದ್ದು, ಇವರಲ್ಲಿ ಅಗಾಧ ಪ್ರತಿಭೆಗಳಿವೆ, ಇವುಗಳನ್ನು ಹೊರ ತೆಗೆಯುವ ಜವಾಬ್ಧಾರಿ ಶಿಕ್ಷಕರ ಮೇಲಿದೆ, ಸರ್ಕಾರ ಶಿಕ್ಷಣದ ಅಭಿವೃದ್ಧಿಗೆ ಎಲ್ಲಾ ಸಹಕಾರವನ್ನು ಸರ್ಕಾರ ನೀಡುತ್ತಿದೆ ಎಂದರು.

ಜನಮಾನಸದಲ್ಲಿ ಉಳಿಯುವ ವೃತ್ತಿ ಶಿಕ್ಷಕ ವೃತ್ತಿ:

ಮುಖ್ಯ ಭಾಷಣಕಾರರಾಗಿದ್ದ ಮೈಸೂರು ಸೆಂಟ್‌ಫಿಲೋಮಿನಾ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ಕೃಷ್ಣೇಗೌಡ ಮಾತನಾಡಿ, ದೀರ್ಘಕಾಲ ಜನಮಾನಸದಲ್ಲಿ ಉಳಿಯುವ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ, ಆದರಲ್ಲೂ ಪ್ರೈಮರಿ ಶಾಲೆಯ ಶಿಕ್ಷಕ ವೃತ್ತಿ ಪ್ರಮುಖವಾಗಿದೆ. ದೇಶದ ಭವಿಷ್ಯ ಶಿಕ್ಷಣದಲ್ಲಿ ಅಡಗಿದೆ ಎಂಬುದನ್ನು ಅರಿತೇ ಸ್ವಾತಂತ್ರ್ಯ ನಂತರ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಕಡ್ಡಾಯ ಶಿಕ್ಷಣ ಜಾರಿಗೊಳಿಸಿವೆ, ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಕರು ಮತ್ತು ಮಕ್ಕಳು ಇಬ್ಬರು ಕಲಿಯುವ ಮನಸ್ಸಿನಿಂದ ಬರಬೇಕಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ವಹಿಸಿದ್ದರು.

ನಿವೃತ್ತ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಡಾ. ಎಸ್. ರಾಧಾಕೃಷ್ಣನ್ ಮತ್ತು ಸಾವಿತ್ರಿಬಾಯಿ ಫುಲೆ ರವರ ಭಾವಚಿತ್ರದ ಮೆರವಣಿಗೆಯು ನಗರದ ಸರ್ಕಾರಿ ಪೇಟೆ ಹಿರಿಯ ಪ್ರಾಥಮಿಕ ಶಾಲೆ ಆವರಣದಿಂದ ಆರಂಭವಾಗಿ ಅಂಬೇಡ್ಕರ್ ಭವನದವರೆಗೆ ನಡೆಯಿತು,

ಕಾರ್ಯಕ್ರಮದಲಿ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ನಗರಸಭೆ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತ ಬಾಲಸುಬ್ರಹ್ಮಣ್ಯಂ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನ), ನಗರಸಭಾ ನಗರಸಭಾ ಸದಸ್ಯ ಎಂ. ಮಹೇಶ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ ಚಂದ್ರು, ಜಿಲ್ಲಾಧಿಕಾರಿ ಶಿಲ್ಪನಾಗ್, ಎಸ್ಪಿ ಡಾ. ಬಿ.ಟಿ. ಕವಿತಾ, ಜಿಪಂ ಸಿಇಒ ಮೋನಾ ರೋತ್, ಡಿಡಿಪಿಐ ರಾಮಚಂದ್ರೇರಾಜ್ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಡಯಟ್ ಪ್ರಾಂಶುಪಾಲ ಎಂ. ಕಾಶಿನಾಥ್, ಜಿಲ್ಲಾ ಮತ್ತು ತಾಲೂಕು ಶಿಕ್ಷಕರ ಸಂಘದ ಪದಾಧಿಕಾರಿಗಳು, ಉಪಸ್ಥಿತರಿದ್ದರು.

--------

೨೩ಸಿಎಚ್‌ಎನ್೧

ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಉದ್ಘಾಟಿಸಿದರು.

--------

೨೩ಸಿಎಚ್‌ಎನ್೩

ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅತ್ಯುತ್ತಮ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.

------

೨೩ಸಿಎಚ್‌ಎನ್೨

ಸಮಾರಂಭದಲ್ಲಿ ಗಣ್ಯರು ಡಾ. ಸರ್ವಪಲ್ಲಿ ರಾಧಾಕೃಷ್ಣ ಮತ್ತು ಸಾವಿತ್ತಿಬಾಯಿ ಬಾಫುಲೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

-----

೨೩ಸಿಎಚ್‌ಎನ್೪

ಸಮಾರಂಭದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಡಾ. ಎಸ್. ರಾಧಾಕೃಷ್ಣನ್ ಮತ್ತು ಸಾವಿತ್ರಿಬಾಯಿ ಫುಲೆ ರವರ ಭಾವಚಿತ್ರದ ಮೆರವಣಿಗೆ ನಡೆಯಿತು.

--------ಬಾಕ್ಸ್.........

ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು

೨೦೨೪- ೨೫ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದ ೧೪ ಮಂದಿ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕೃಷ್ಣಮೂರ್ತಿ (ಸರ್ಕಾರಿ ಕಿರಿಯ ಪ್ರಾಥಮಿಕ ಅರ್ಬನ್ ಏರಿಯಾ, ಚಾಮರಾಜನಗರ), ಎಚ್.ಸಿ ಮಮತ (ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗರಗನಹಳ್ಳಿ, ಗುಂಡ್ಲುಪೇಟೆ ತಾಲೂಕು) ಮಣಿ (ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹುಣಸೇಪಾಳ್ಯ, ಹನೂರು ತಾಲೂಕು) ಎಚ್.ಮಮತ (ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸತ್ತೇಗಾಲ ಅಗ್ರಹಾರ, ಕೊಳ್ಳೇಗಾಲ ತಾಲೂಕು) ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದರು, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಿ.ಎಸ್. ಮಹದೇವಸ್ವಾಮಿ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಾನಗಳ್ಳಿ, ಚಾಮರಾಜನಗರ ತಾಲೂಕು) ದೊಡ್ಡಬಸವಯ್ಯ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬನ್ನಿತಾಳಪುರ, ಗುಂಡ್ಲುಪೇಟೆ ತಾಲೂಕು) ಕೆ. ಗೋವಿಂದ, (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೂಗ್ಯಂ, ಹನೂರು ತಾಲೂಕು) ಮುರುಳಿರಾಜು (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಡಿಗುಂಡ, ಕೊಳ್ಳೇಗಾಲ), ಆರ್. ಸುರೇಶ್ ಕುಮಾರ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವೈ.ಕೆ.ಮೋಳೆ, ಯಳಂದೂರು ತಾಲೂಕು) ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾದರು, ಪ್ರೌಢಶಾಲಾ ವಿಭಾಗದಲ್ಲಿ ಸಿ. ಸಿದ್ದರಾಜು (ಸರ್ಕಾರಿ ಪ್ರೌಢಶಾಲೆ, ಆಲೂರು, ಚಾಮರಾಜನಗರ ತಾಲೂಕು), ರಂಗೇಗೌಡ, (ಸರ್ಕಾರಿ ಪ್ರೌಢಶಾಲೆ, ಅಣ್ಣೂರುಕೇರಿ, ಗುಂಡ್ಲುಪೇಟೆ ತಾಲೂಕು), ಎಂ. ಶಾಂತರಾಜು (ಸರ್ಕಾರಿ ಪ್ರೌಢಶಾಲೆ, ಕೊಳ್ಳೇಗಾಲ ಪಟ್ಟಣ), ಡಾ. ಮಹೇಂದ್ರ, (ಸರ್ಕಾರಿ ಪ್ರೌಢಶಾಲೆ, ಗೋಪಿನಾಥಂ, ಹನೂರು ತಾಲೂಕು), ಆರ್. ಗುರುಮೂರ್ತಿ (ಸರ್ಕಾರಿ ಪ್ರೌಢಶಾಲೆ, ಆದರ್ಶ ವಿದ್ಯಾಲಯ, ಮೆಲ್ಲಹಳ್ಳಿ, ಯಳಂದೂರು ತಾಲೂಕು) ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪಡೆದರು.