ರಾಜ್ಯದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದ್ದು, ಸ್ಥಿರ ಸರ್ಕಾರ ಇಲ್ಲದೆ ನವೆಂಬರ್‌ನಲ್ಲಿ ಶಾಂತಿ, ಡಿಸೆಂಬರ್‌ನಲ್ಲಿ ಕ್ರಾಂತಿ, ಜನವರಿಯಲ್ಲಿ ವಾಂತಿಯಾಗುವ ಎಲ್ಲಾ ಸಾಧ್ಯತೆ ಇದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ರಾಜ್ಯದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದ್ದು, ಸ್ಥಿರ ಸರ್ಕಾರ ಇಲ್ಲದೆ ನವೆಂಬರ್‌ನಲ್ಲಿ ಶಾಂತಿ, ಡಿಸೆಂಬರ್‌ನಲ್ಲಿ ಕ್ರಾಂತಿ, ಜನವರಿಯಲ್ಲಿ ವಾಂತಿಯಾಗುವ ಎಲ್ಲಾ ಸಾಧ್ಯತೆ ಇದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಲೇವಡಿ ಮಾಡಿದರು.

ತಾಲೂಕಿನ ಮಾವತ್ತೂರು ಗ್ರಾಮದಲ್ಲಿ ನಡೆದ ವಿಘ್ನೇಶ್ವರ ಸೇವಾ ಸಮಿತಿ ಏರ್ಪಡಿಲಾಗಿದ್ದ ೧೨ನೇ ವರ್ಷದ ಶ್ರೀವಿಘ್ನೇಶ್ವರ ಸ್ವಾಮಿಗೆ ಆರತಿ ಮತ್ತು ಲಕ್ಷದೀಪೋತ್ಸವ, ಗಂಗಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಸರ್ಕಾರದ ಸ್ಥಿರತೆಗೆ ದೊಡ್ಡ ಪ್ರಶ್ನೆ ಮೂಡಿದ್ದು, ಸರ್ಕಾರಕ್ಕೆ ಆಯಸ್ಸೇ ಉಳಿದಿಲ್ಲ. ದಿನವೂ ಡಿ.ಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಬೀದಿ ಜಗಳವಾಡುತ್ತಿದ್ದಾರೆ. ಈ ಸರ್ಕಾರ ಮಂಚದ ಮೇಲೆ ಮಲಗಿರುವ ರೋಗಿಯಂತಾಗಿದೆ. ರಾಜ್ಯ ಸಾರಿಗೆ ವಿಭಾಗ ಸಂಪೂರ್ಣ ಕುಸಿತವಾಗಿದ್ದು, ೧೩ ಸಾವಿರಕ್ಕೂ ಹೆಚ್ಚು ಬಸ್ಸುಗಳು ಕೆಟ್ಟು ನಿಂತಿವೆ ಎಂದು ಗಂಭೀರ ಸ್ಥಿತಿಗತಿ ಬಹಿರಂಗಪಡಿಸಿದರು. ನಾರಿ ಶಕ್ತಿ ಯೋಜನೆ ಅಡಿ ಬೇಕಾಬಿಟ್ಟಿ ಉಚಿತ ಪ್ರಯಾಣ ಕೊಟ್ಟ ಪರಿಣಾಮ, ಇಂದು ವಿದ್ಯಾರ್ಥಿಗಳು-ಕಾರ್ಮಿಕರು ಬಸ್ಸಿಗೇ ವಂಚಿತರಾಗಿದ್ದಾರೆ. ರಸ್ತೆಗೆ ಮಣ್ಣು ಹಾಕಲು ಸಹ ಸರ್ಕಾರದ ಬಳಿ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಗೃಹ ಸಚಿವ ಪರಮೇಶ್ವರ್ ಎತ್ತಿನಹೊಳೆ ಯೋಜನೆಗೆ ಕೇವಲ ಪೈಪ್‌ಲೈನ್‌ಗೆ ಪೂಜೆ ಮಾಡಿದಷ್ಟೇ ಹೊರತು, ಯಾವುದೇ ಕಾರಣಕ್ಕೂ ಎರಡುವರೆ ವರ್ಷದಲ್ಲಿ ಇವರ ಸರ್ಕಾರ ಏತ್ತಿನಹೊಳೆ ನೀರು ತರಲು ಸಾಧ್ಯವೇ ಇಲ್ಲ. ಒಂದು ವೇಳೆ ನೀರು ತಂದರೆ ನಾನು ರಾಜಕೀಯನೇ ಬಿಟ್ಟು ಬಿಡುತ್ತೇನೆ. ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ೨೦೨೮ರಲ್ಲಿ ಬಿಜೆಪಿ-ಜೆಡಿಎಸ್ ಬರುತ್ತದೆ. ನಾವೇ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.