ಸಾರಾಂಶ
ಆನಂದ್ ಎಂ. ಸೌದಿ
ಯಾದಗಿರಿ : ಅನ್ನಭಾಗ್ಯದ ಅಕ್ಕಿ ಅಷ್ಟೇ ಅಲ್ಲ, ಸರ್ಕಾರದ ಜೋಳ ಹಾಗೂ ಬಡಮಕ್ಕಳ ಪೌಷ್ಟಿಕತೆ ಹೆಚ್ಚಿಸುವ ಕ್ಷೀರಭಾಗ್ಯ ಯೋಜನೆಯ, ಅವಧಿ ಮೀರಿದ ನಂದಿನಿ ಹಾಲಿನ ಪೌಡರ್‌ಗಳ ಪ್ಯಾಕೆಟ್‌ಗಳನ್ನೂ ವಿದೇಶಕ್ಕೆ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ.
ಗುರುಮಠಕಲ್‌ನ ಲಕ್ಷ್ಮೀ ತಿಮ್ಮಪ್ಪ ಹತ್ತಿ ಮಿಲ್‌ನ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಟನ್‌ಗಟ್ಟಲೇ ಪಡಿತರ ಅಕ್ಕಿ ದಾಸ್ತಾನು ಜಪ್ತಿ ಮಾಡಲು ತೆರಳಿದ್ದ ಸಿಐಡಿ ಇನ್‌ಸ್ಪೆಕ್ಟರ್ ಅನಿಲ್ ಹಾಗೂ ತಂಡ ಅಕ್ಕಿ ಜತೆಗೆ ಜೋಳ ಹಾಗೂ ಹಾಲಿನ ಪೌಡರ್‌ನ ಚೀಲಗಳನ್ನೂ ಕಂಡು ದಿಗ್ಭ್ರಮೆಗೊಂಡಿದೆ.
ಅಕ್ಕಿ ದಾಸ್ತಾನು ಜಪ್ತಿಯ ವೇಳೆ, ಗೋದಾಮಿನ ಮತ್ತೊಂದು ಭಾಗದಲ್ಲಿ ಸರ್ಕಾರಿ ಜೋಳ ಹಾಗೂ ನವೆಂಬರ್ 2024ರಲ್ಲೇ ಅವಧಿ ಮೀರಿದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ದಾಸ್ತಾನು ಸಿಕ್ಕಿದೆ. 200 ಕ್ವಿಂಟಾಲ್‌ನಷ್ಟು ಜೋಳದ ಚೀಲಗಳು ಹಾಗೂ 300 ಕೇಜಿಗೂ ಹೆಚ್ಚು ಹಾಲಿನ ಪೌಡರ್ ಹಾಗೂ 6 ಟನ್‌ಗೂ ಹೆಚ್ಚು ಅಕ್ಕಿ ದಾಸ್ತಾನು ಇರಬಹುದು ಅಂದಾಜಿಸಲಾಗಿದೆ. ಕಳೆದರಡು ದಿನಗಳಿಂದ ನಡೆಯುತ್ತಿರುವ ಎಣಿಕೆ ಗುರುವಾರ ಸಂಜೆವರೆಗೂ ಮುಂದುವರೆದಿತ್ತು.
ಏನಿದು ಪ್ರಕರಣ?:
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿಸಿ, ಪಾಲಿಶ್ ಮಾಡಿದ ನಂತರ ವಿವಿಧ ದೇಶಗಳ ಬ್ರ್ಯಾಂಡ್‌ಗಳಲ್ಲಿ ನಕಲು ಮಾಡಿ, ವಿದೇಶಗಳಿಗೆ ಮಾರಾಟ ಮಾಡುತ್ತಿರುವ ದಂಧೆ ಜಿಲ್ಲೆಯ ಗುರುಮಠಕಲ್‌ನಲ್ಲಿ ಸೆ.8 ರಂದು ಪತ್ತೆಯಾಗಿತ್ತು. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು. ತನಿಖೆ ನಡೆಸುತ್ತಿರುವ ಸಿಐಡಿ ತಂಡ, ಹತ್ತಿ ಮಿಲ್‌ನ ಸಮೀಪದ ಬ್ರಿಡ್ಜ್‌ಗೆ ತೆರಳಿದಾಗ ಅಲ್ಲಿನ ಗೋದಾಮುಗಳಲ್ಲಿ ಪಡಿತರ ಅಕ್ಕಿ ದಾಸ್ತಾನು ಕಂಡು ಪೊಲೀಸ್ ಹಾಗೂ ಆಡಳಿತಕ್ಕೆ ಮಾಹಿತಿ ನೀಡಿತ್ತು. ಸಿಐಡಿ ಅಧಿಕಾರಿಗಳ ಮಾಹಿತಿ ಮೇರೆಗೆ ತೆರಳಿದ್ದ ಸ್ಥಳೀಯ ಅಧಿಕಾರಿಗಳಿಗೆ ಅಕ್ಕಿ ಜೊತೆ ಜೋಳ ಹಾಗೂ ಹಾಲಿನ ಪೌಡರ್ ಅಕ್ರಮ ದಾಸ್ತಾನು ಸಿಕ್ಕಿದೆ.
ಕ್ಷೀರಭಾಗ್ಯಕ್ಕೂ ಕನ್ನ!
ಮಕ್ಕಳ ಅಪೌಷ್ಟಿಕತೆ ನಿವಾರಿಸಲೆಂದು, ರಾಜ್ಯ ಸರ್ಕಾರದ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ, 1ರಿಂದ 10ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಪ್ರತಿ ಶಾಲಾ ಮಕ್ಕಳಿಗಾಗಿ 150 ಮಿ.ಲೀ. ಕೆನೆಭರಿತ ಹಾಲು ಉಚಿತವಾಗಿ ನೀಡಲಾಗುತ್ತದೆ. ಈ ಹಾಲಿನ ಪುಡಿಯನ್ನು ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ ನಂದಿನಿ ಪೂರೈಸುತ್ತದೆ. ಪ್ರತಿ ಮಗುವಿಗೆ 89.64 ಕಿಲೋ ಕ್ಯಾಲೋರಿಯಷ್ಟು ಪೌಷ್ಟಿಕಾಂಶ ಇದರಿಂದ ಸಿಗುತ್ತದೆ.
ಎಣಿಕೆ ಕಾರ್ಯ ಎಲ್ಲವೂ ಮುಗಿದ ನಂತರ ಒಟ್ಟಾರೆ ಪಡಿತರ ಏನೇನಿದೆ ಅನ್ನೋದು ಗೊತ್ತಾಗುತ್ತದೆ. ಸದ್ಯ ಅಕ್ಕಿ ಜೊತೆಗೆ ಜೋಳ ಹಾಗೂ ಹಾಲಿನ ಪೌಡರ್ ಸಿಕ್ಕಿದೆ.
- ರಮೇಶ ಕೋಲಾರ, ಅಪರ ಜಿಲ್ಲಾಧಿಕಾರಿಗಳು, ಯಾದಗಿರಿ.
ಆಹಾರ ಇಲಾಖೆ ಅಧಿಕಾರಿಗಳಿಂದ ದೂರು ಪಡೆದು ಗುರುವಾರ ರಾತ್ರಿ ವೇಳೆ ಪ್ರಕರಣ ದಾಖಲಿಸಲಾಗುವುದು. ಎಣಿಕೆ ಕಾರ್ಯ ಮುಗಿದ ನಂತರ ಎಲ್ಲ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುವುದು.
- ಪೃಥ್ವಿಕ್ ಶಂಕರ್, ಎಸ್ಪಿ, ಯಾದಗಿರಿ.ಶಾಲಾ ಮಕ್ಕಳ ಕ್ಷೀರಭಾಗ್ಯ ಹಾಲಿನ ಪೌಡರ್ ಅಕ್ರಮದ ಬಗ್ಗೆ ಮಾಹಿತಿ ಬಂದಿದ್ದು, ಸ್ಥಳಕ್ಕೆ ತೆರಳಿ ವಿವರ ಪಡೆದು ಪ್ರಕರಣ ದಾಖಲಿಸಲಾಗುವುದು.
- ಚೆನ್ನಬಸಪ್ಪ ಮುಧೋಳ, ಡಿಡಿಪಿಐ, ಯಾದಗಿರಿ.ಅಕ್ಕಿ ಜೊತೆ ಜೋಳ, ರಾಗಿ
ಇದೇ ಮೇ 1ರಿಂದ ಬಿಪಿಎಲ್ ಕಾರ್ಡುದಾರಿಗೆ ಅಕ್ಕಿ ಜೊತೆಗೆ ಎರಡು ಅಥವಾ ಮೂರು ಕೆಜಿ ಜೋಳ ಅಥವಾ ರಾಗಿಯನ್ನು ನೀಡಲು ಸರ್ಕಾರ ಆದೇಶಿಸಿತ್ತು. ರಾಜ್ಯದ ದಕ್ಷಿಣದ ಜಿಲ್ಲೆಗಳಲ್ಲಿ ಅಕ್ಕಿ + ರಾಗಿ ಹಾಗೂ ಉತ್ತರದ ಜಿಲ್ಲೆಗಳಲ್ಲಿ ಅಕ್ಕಿ + ಜೋಳ ವಿತರಣೆಗೆ ಸರ್ಕಾರದ ಆದೇಶಿಸಿತ್ತು.