ಕ್ಯಾನ್ಸರ್, ಹೃದಯ, ಪಾರ್ಶ್ವವಾಯು, ಮೂತ್ರಪಿಂಡಗಳ ವೈಫಲ್ಯ, ಮಾನಸಿಕ ಅಸ್ವಸ್ಥೆಗಳಂತಹ ಗುಣಪಡಿಸಲಾಗದ ಕಾಯಿಲೆಗಳಿಗೆ ಒಳಗಾಗಿ ಶಾಶ್ವತವಾಗಿ ಬೆಡ್‌ ರೆಸ್ಟ್‌ಗೆ ಹೋಗಿರುವಂತಹ ರೋಗಿಗಳ ಮನೆಮನೆಗೆ ವೈದ್ಯರು ಮತ್ತು ದಾದಿಯರ ಮೂಲಕ ಭೇಟಿ ನೀಡಿ ಅವರ ಮನೆ ಬಾಗಿಲಿನಲ್ಲಿಯೇ ಚಿಕಿತ್ಸೆಯನ್ನು ನೀಡುವ ವಿವೇಕಾನಂದ ಯೂಥ್ ಮೂಮೆಂಟ್‌ನ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದೆ ಎಂದು ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ಕ್ಯಾನ್ಸರ್, ಹೃದಯ, ಪಾರ್ಶ್ವವಾಯು, ಮೂತ್ರಪಿಂಡಗಳ ವೈಫಲ್ಯ, ಮಾನಸಿಕ ಅಸ್ವಸ್ಥೆಗಳಂತಹ ಗುಣಪಡಿಸಲಾಗದ ಕಾಯಿಲೆಗಳಿಗೆ ಒಳಗಾಗಿ ಶಾಶ್ವತವಾಗಿ ಬೆಡ್‌ ರೆಸ್ಟ್‌ಗೆ ಹೋಗಿರುವಂತಹ ರೋಗಿಗಳ ಮನೆಮನೆಗೆ ವೈದ್ಯರು ಮತ್ತು ದಾದಿಯರ ಮೂಲಕ ಭೇಟಿ ನೀಡಿ ಅವರ ಮನೆ ಬಾಗಿಲಿನಲ್ಲಿಯೇ ಚಿಕಿತ್ಸೆಯನ್ನು ನೀಡುವ ವಿವೇಕಾನಂದ ಯೂಥ್ ಮೂಮೆಂಟ್‌ನ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದೆ ಎಂದು ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದರು.

ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಸನ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಲೂರು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಆಲೂರು ಘಟಕ, ಲಯನ್ಸ್ ಸೇವಾ ಸಂಸ್ಥೆ ಆಲೂರು, ಸ್ವಾಮಿ ವಿವೇಕಾನಂದ ಯೂತ್‌ ಮೂಮೆಂಟ್ ಹಾಸನ, ಪಟ್ಟಣ ಪಂಚಾಯಿತಿ ಆಲೂರು, ಆಲೂರು ಪೊಲೀಸ್ ಠಾಣೆ ಇವರ ಸಹಭಾಗಿತ್ವದಲ್ಲಿ ಆಯೋಜಿಸಿದ್ದ "ವರ್ಲ್ಡ್ ಹಾಸ್ಪೆಯ್ಸ್ ಪ್ಯಾಲಿಯೇಟಿವ್ ಕೇರ್ ಡೇ 2025 "ರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಹಾಸನದ ಹಿಮ್ಸ್ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್‌ನವರು ಮನೆ ಆಧಾರಿತ ಉಪಶಮನ ಕಾರ್ಯಕ್ರಮವನ್ನು ಮಾಡುತ್ತಿರುವುದು ಶಾಶ್ವತ ವಿಶ್ರಾಂತಿಯಲ್ಲಿರುವ ಅದೆಷ್ಟೋ ರೋಗಿಗಳಿಗೆ ವರದಾನವಾಗಿದೆ. ನಮ್ಮ ತಾಲೂಕಿನ ಎಲ್ಲಾ ಗ್ರಾಮದಲ್ಲಿ ಇರುವ ಇಂತಹ ರೋಗಿಗಳನ್ನು ಆಶಾ ಕಾರ್ಯಕರ್ತರ ಮೂಲಕ ಗುರುತಿಸಿ ಚಿಕಿತ್ಸೆ ನೀಡಿದರೆ ಅವರು ಮತ್ತಷ್ಟು ದಿನಗಳ ಕಾಲ ಬದುಕುವ ಅವಕಾಶವಿರುತ್ತದೆ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್‌ನ ಜಿಲ್ಲಾ ಸಂಯೋಜಕ ಎಂ. ಎಚ್ ಯೋಗನಾಥ್ ಮಾತನಾಡಿ 2018ನೇ ಇಸ್ವಿಯಲ್ಲಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಭಾಗಿತ್ವದಲ್ಲಿ ಹಾಸನ ತಾಲೂಕು ಮತ್ತು ನಗರದಲ್ಲಿ ಮನೆ ಆಧಾರಿತ ಉಪಶಮನ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಸುಮಾರು ನಾಲ್ಕು ಐದು ವರ್ಷಗಳಲ್ಲಿ 2,000ಕ್ಕೂ ಹೆಚ್ಚಿನ ಕ್ಯಾನ್ಸರ್‌, ಹೃದಯ, ಕಿಡ್ನಿ, ಪಾರ್ಶ್ವವಾಯು, ಬುದ್ಧಿಮಾಂದ್ಯದಂತಹ ಗುಣಪಡಿಸಲಾಗದ ಕಾಯಿಲೆಗಳಿಗೆ ತುತ್ತಾಗಿರುವ ರೋಗಿಗಳನ್ನು ಅವರ ಮನೆಯ ಬಾಗಿಲಿಗೆ ಭೇಟಿ ನೀಡಿ ಆರೈಕೆಯನ್ನು ಹಾಗೂ ಚಿಕಿತ್ಸೆಯನ್ನು ನೀಡಿ ರೋಗಿಗಳ ಆಪ್ತ ಸಮಾಲೋಚನೆ, ಡ್ರೆಸ್ಸಿಂಗ್ ಮಾಡುವುದು, ಮೂತ್ರದ ಬ್ಯಾಗ್‌ಗಳನ್ನು ಬದಲಾಯಿಸುವುದು, ಅವರಿಗೆ ಮಾನಸಿಕವಾಗಿ ಧೈರ್ಯ ತುಂಬುವುದು ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಸಾವು ಕೂಡ ಗೌರವಯುತವಾಗಿರಬೇಕು ಎಂಬುದು ನಮ್ಮ ಸಂಸ್ಥೆಯ ಮೂಲ ಉದ್ದೇಶವಾಗಿದ್ದು ನಮ್ಮ ಸಂಸ್ಥೆಯ ಎರಡು ವಾಹನಗಳ ಮೂಲಕ ವೈದ್ಯಾಧಿಕಾರಿಗಳು ಹಾಗೂ ದಾದಿಯರ ಮೂಲಕ ರೋಗಿಗಳ ಮನೆ ಮನೆಗೆ ಭೇಟಿ ನೀಡಿ ಅವರಿಗೆ ಚಿಕಿತ್ಸೆಯನ್ನು ನೀಡುವ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದೇವೆ. ಪ್ರಸ್ತುತ ಈಗಿನಿಂದ ನಾವು ಆಲೂರು ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಈ ರೀತಿಯಾದ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳನ್ನು ಗುರುತಿಸಿ ಚಿಕಿತ್ಸೆಯನ್ನು ನೀಡಲು ಬದ್ಧರಾಗಿದ್ದೇವೆ ಎಂದರು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಆಲೂರು ಘಟಕದ ಸಭಾಪತಿ ಕೆ.ಎನ್ ಕಾಂತರಾಜು, ಕಾರ್ಯದರ್ಶಿ ಬಿ.ಎಸ್ ವೀರಭದ್ರಸ್ವಾಮಿ ಉಪ ಸಭಾಪತಿ ಶಶಿಧರ್ ಬೆಕ್ಕಡಿ ಇವರುಗಳು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿ ಡಾ.ಕಿಶೋರ್ ಕುಮಾರ್, ಸ್ವಾಮಿ ವಿವೇಕಾನಂದ ಯೂತ್‌ ಮೂಮೆಂಟ್‌ನ ಜಿಲ್ಲಾ ಸಂಯೋಜಕ ಯೋಗನಾಥ್, ರೆಡ್‌ಕ್ರಾಸ್ ತಾಲೂಕು ಸಭಾಪತಿ ಕೆ.ಎನ್ ಕಾಂತರಾಜು, ಕಾರ್ಯದರ್ಶಿ ವೀರಭದ್ರ ಸ್ವಾಮಿ ಉಪ ಸಭಾಪತಿ ಶಶಿಧರ್ ಬೆಕ್ಕಡಿ, ಲಯನ್ಸ್ ಕಾರ್ಯದರ್ಶಿ ಶಾಂತಕುಮಾರ್, ಪಿಎಸಿಸಿ ಹಂಚೂರು ಅಧ್ಯಕ್ಷ ಮಂಜೇಗೌಡ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರ ಸಂಘದ ಅಧ್ಯಕ್ಷ ರಾಜೇಗೌಡ, ಬೈರಾಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸತೀಶ್, ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‌ನ ಪದಾಧಿಕಾರಿಗಳಾದ ಡಾ.ವೈಷ್ಣವಿ, ರಮೇಶ್, ಬಸವರಾಜು, ಪೃಥ್ವಿನಿ ಸೇರಿದಂತೆ ತಾಲೂಕಿನ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.