ಹೆಚ್ಚುವರಿ ಗೋಶಾಲೆ ಸ್ಥಾಪನೆ ಶಿಫಾರಸ್ಸಿಗೆ ಸೂಚನೆ

| Published : Oct 17 2025, 01:00 AM IST

ಹೆಚ್ಚುವರಿ ಗೋಶಾಲೆ ಸ್ಥಾಪನೆ ಶಿಫಾರಸ್ಸಿಗೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹೇಶ್ವರಪ್ಪ ಹೇಳಿಕೆ

ಕನ್ನಡಪ್ರಭ ವಾರ್ತೆಚಿತ್ರದುರ್ಗ :

ನಗರದಲ್ಲಿ 100 ರಾಸುಗಳ ಸಾಮರ್ಥ್ಯದ ಹೆಚ್ಚುವರಿ ಗೋಶಾಲೆ ಸ್ಥಾಪನೆಗೆ ಪಶು ಇಲಾಖೆಯಿಂದ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್.ಆರ್.ಮಹೇಶ್ವರಪ್ಪ ಪಶು ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಿಡಾಡಿ ದನಗಳು ಬೀದಿನಾಯಿಗಳ ದಾಳಿಗೆ ಸಿಕ್ಕು ಸಂಕಟ ಪಡುವ ಸಾಕಷ್ಟು ಪ್ರಕರಣಗಳು ಜಿಲ್ಲೆಯ ನಾನಾ ಕಡೆ ಕಂಡು ಬರುತ್ತವೆ. ಇಂತಹ ಬಿಡಾಡಿ ದನಗಳಿಗೆ ಪಶು ಇಲಾಖೆಯಿಂದ ಚಿಕಿತ್ಸೆ ನೀಡಬೇಕು. ದನಗಳ ಆರೋಗ್ಯ ಸುಧಾರಿಸಿದ ಬಳಿಕ ಮತ್ತೆ ಇವುಗಳನ್ನು ಬೀದಿಗೆ ಬಿಡದೆ ಗೋಶಾಲೆಗೆ ಕಳುಹಿಸಿ ಹಾರೈಕೆ ಮಾಡಬೇಕು. ಆದರೆ ಗೋಶಾಲೆಯಲ್ಲಿ ಈಗಾಗಲೇ ಹೆಚ್ಚಿನ ರಾಸುಗಳು ಇವೆ ಎಂದು ಮತ್ತೆ ಇವುಗಳನ್ನು ಬೀದಿಗೆ ಬಿಡುವ ಕೆಲಸವಾಗುತ್ತಿದೆ. ಇದಕ್ಕೆ ಅಂತ್ಯ ಹಾಡುವ ಸಲುವಾಗಿ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಗೋಶಾಲೆಗಳಲ್ಲಿ ಹೆಚ್ಚುವರಿಯಾಗಿ ಗೋಶಾಲೆ ತೆರೆಯಲು ರಾಜ್ಯ ಕೃಷಿಕ ಸಮಾಜದ ವತಿಯಿಂದಲೂ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಎನ್.ಆರ್.ಮಹೇಶ್ವರಪ್ಪ ತಿಳಿಸಿದರು.

ಜಿಲ್ಲೆಯಾದ್ಯಂತ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 240 ಶಾಲೆಗಳಲ್ಲಿ ರೇಬಿಸ್ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಲಾಗಿದೆ. ನ.3 ರಿಂದ ಕಾಲುಬಾಯಿ ರೋಗ ಲಸಿಕೆ ಅಭಿಯಾನವನ್ನು ಪ್ರಾರಂಭಿಸಲಾಗುವುದು. ಹೆಚ್ಚುವರಿ ಗೋಶಾಲೆ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗುವುದು. ಅಗತ್ಯ ಇರುವ ಕಡೆ ಮೇವು ಬ್ಯಾಂಕ್ ಸ್ಥಾಪಿಸುವುದಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎನ್.ಕುಮಾರ್ ತಿಳಿಸಿದರು.

ರೈತರ ಯೋಜನೆಗಳು, ಸಾಲ-ಸೌಲಭ್ಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಲೀಡ್ ಬ್ಯಾಂಕ್ ಹಾಗೂ ನಬಾರ್ಡ್ ಜಿಲ್ಲಾ ವ್ಯವಸ್ಥಾಪಕರನ್ನು ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಗೆ ಆಹ್ವಾನಿಸಲು ತೀರ್ಮಾನಿಸಲಾಯಿತು.

ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ವೇಮಣ್ಣ ಮಾತನಾಡಿ, ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ 7376 ಫಲಾನುಭವಿಗಳು ನೊಂದಣಿಯಾಗಿದ್ದಾರೆ. ಇವರೆಲ್ಲರಿಗೂ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು. ಗ್ರಾಮೀಣ ಭಾಗ ಮಹಿಳೆಯರಿಗೆ ನಲ್ ಜಲ್ ಮಿತ್ರ ತರಬೇತಿ ನೀಡಲಾಗುತ್ತಿದೆ. ಇದರೊಂದಿಗೆ ವಿದೇಶದಲ್ಲಿ ಕೆಲಸ ನಿರ್ವಹಿಸಲು ಆಸಕ್ತಿ ತೋರುವ ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿದೇಶ ಭಾಷೆ ಕಲಿಕೆ ಕುರಿತು ತರಬೇತಿ ನೀಡಲಾಗುವುದು. ಕೌಶಲ್ಯಾಭಿವೃದ್ಧಿ ಇಲಾಖೆಯಡಿ ಬರುವ ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ ಇ.ಡಬ್ಲ್ಯೂ.ಎಸ್. ಅಡಿ ಬರುವ ಬ್ರಾಹ್ಮಣ ನಿರುದ್ಯೋಗಿಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ತರಬೇತಿ ಕೇಂದ್ರ, ರೇಷ್ಮೆ, ತೋಟಗಾರಿಕೆ, ಕೃಷಿ ಇಲಾಖೆ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಕೃಷಿ ಮಾರುಕಟ್ಟೆ ಸೌಲಭ್ಯಗಳ ಕುರಿತು ವಿಸ್ತøತವಾಗಿ ಚರ್ಚೆ ನಡೆಸಲಾಯಿತು. ಜಂಟಿ ಕೃಷಿ ನಿರ್ದೇಶಕ ಕಚೇರಿ ಆಡಳಿತಾಧಿಕಾರಿ ಮಿಥುನ್ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಧರಣೇಶ್, ರಾಜ್ಯ ಪ್ರತಿನಿಧಿ ವಿ.ಜಿ. ಪರಮೇಶ್ವರಪ್ಪ, ಖಜಾಂಚಿ ಭಕ್ತ ಪ್ರಹ್ಲಾದ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರುಗಳಾದ ಜಗದೀಶ್ ಕಂದಿಕೆರೆ, ಎಂ.ಎಸ್.ನವೀನ್, ಸಿ.ಹೆಚ್.ಕಾಂತರಾಜ್, ಬಿ.ಟಿ.ಜಗದೀಶ್, ಜಿಲ್ಲಾ ಪ್ರತಿನಿಧಿಗಳಾದ ಕೇಶವ, ಶಶಿಧರ್, ಎಸ್.ರಮೇಶಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.