ಕುಂದಾಪುರ: ರೋಗ ಬಂದ ಬಳಿಕ ಔಷಧಿ ಹುಡುಕುವುದಕ್ಕಿಂತ ಮೊದಲು ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಸರಿಪಡಿಸಿಕೊಳ್ಳುವುದು ಮುಖ್ಯ ಎಂದು ಮಣಿಪಾಲದ ತಪೋವನ ಲೈಫ್ ಸ್ಪೇಸ್ ಪ್ರೈವೇಟ್ ಲಿಮಿಟೆಡ್‌ ಮುಖ್ಯ ವೈದ್ಯಕೀಯ ಸಲಹೆಗಾರ್ತಿ ಡಾ. ವಾಣಿಶ್ರೀ ಐತಾಳ್ ಹೇಳಿದರು.ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನ ಯಾಜ್ಞವಲ್ಕ್ಯ ಸಭಾಂಗಣದಲ್ಲಿ ಭಾನುವಾರ ನಡೆದ ಸಸ್ಯಾಮೃತ ಸಾಂಪ್ರದಾಯಿಕ ಸಸ್ಯ ಪದಾರ್ಥಗಳ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಋತುಮಾನಕ್ಕೆ ಅನುಗುಣವಾಗಿ ಆಯುರ್ವೇದದಲ್ಲಿ ನೀಡುವ ಔಷಧಿಗಳು ಉತ್ತಮ ಪರಿಣಾಮ ನೀಡುತ್ತವೆ. ನಿಯಮಿತವಲ್ಲದ ಜೀವನಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಇಂದು ಹಲವು ರೋಗಗಳು ಹೆಚ್ಚಾಗುತ್ತಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಮಳೆಗಾಲದಲ್ಲಿ ಸಹಜವಾಗಿ ದೊರೆಯುವ ಆರೋಗ್ಯವರ್ಧಕ ಸಸ್ಯಗಳು ಹಾಗೂ ತರಕಾರಿಗಳನ್ನು ಆಹಾರದಲ್ಲಿ ಬಳಸುವ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸಸ್ಯಾಮೃತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಾರಂಪರಿಕ ಆಹಾರ ಪದ್ಧತಿಯನ್ನು ಕಡೆಗಣಿಸಿ ರಾಸಾಯನಿಕಯುಕ್ತ ಹಾಗೂ ಅತಿಯಾಗಿ ಸಂಸ್ಕರಿಸಿದ ಆಧುನಿಕ ಆಹಾರ ಪದ್ಧತಿಗೆ ಮೊರೆ ಹೋಗುತ್ತಿರುವುದು ಅನಾರೋಗ್ಯಕ್ಕೆ ಪ್ರಮುಖ ಕಾರಣ ಎಂದರು.

ಶಿಕ್ಷಕಿ ಸುಷ್ಮಾ ಪರಿಚಯಿಸಿದರು. ನಾಗರತ್ನ ನಿರೂಪಿಸಿದರು. ಪ್ರಾಂಶುಪಾಲೆ ಡಾ. ರೂಪಾ ಶೆಣೈ ವಂದಿಸಿದರು.

ಆಷಾಢದ ನೆನಪು: 31 ಬಗೆಯ ಔಷಧೀಯ ಖಾದ್ಯ: ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದು, ಸ್ಥಳೀಯ ಸಸ್ಯ ಹಾಗೂ ಸೊಪ್ಪು-ತರಕಾರಿಗಳನ್ನು ಬಳಸಿ ತಯಾರಿಸಿದ 31 ಬಗೆಯ ಪಾರಂಪರಿಕ ಹಾಗೂ ಔಷಧೀಯ ಖಾದ್ಯಗಳ ಸವಿಯೂಟ ಸಿದ್ಧಪಡಿಸಲಾಗಿತ್ತು. ಬಸ್ರೂರಿನ ಬಾಣಸಿಗ ಮಹಾಬಲ ಹರಿಕಾರ್ ನೇತೃತ್ವದ ತಂಡ ಈ ವಿಶೇಷ ಖಾದ್ಯಗಳನ್ನು ತಯಾರಿಸಿತ್ತು. ಮುರಿಯ ಕಷಾಯ, ದುಡ್ಲಿ ಉಪ್ಪಿನಕಾಯಿ, ಬಾಳೆದಿಂಡಿನ ಕೋಸಂಬರಿ, ಕೆಸುವಿನ ಚಟ್ನಿ, ಕಿಸ್ಕಾರೆ ಹೂವಿನ ಚಟ್ನಿ, ವಾತಂಗಿ ಸೊಪ್ಪಿನ ಚಟ್ನಿ, ಕಾಡು ಬದನೆ ಚಟ್ನಿ, ಕಣಿಲೆ ಪಲ್ಯ, ಬಾಳೆದಿಂಡಿನ ಪಲ್ಯ, ಪತ್ರೊಡೆ ಪಲ್ಯ, ಚಗತೆ ಸೊಪ್ಪಿನ ಪಲ್ಯ, ಬೂದು ನೇರಳೆ ಚಿತ್ರಾನ್ನ, ಬಿಲ್ವಪತ್ರೆ ತಂಬುಳಿ, ಉರಗನ ತಂಬುಳಿ, ಅರಿಶಿನ ಕೊಂಬಿನ ತಂಬುಳಿ, ನೆಲಬಸಲೆ ಸಾಸಿವೆ, ಗೋವೆ ಕೆಸುವಿನ ಸಾಸಿವೆ, ವೀಳ್ಯದೆಲೆ ಸಾರು, ಪಾಂಡವ ಹರಿವೆ ಸಾಂಬಾರ್, ಪತ್ರೊಡೆ ಗಾಲಿ, ನುಗ್ಗೆ ಸೊಪ್ಪಿನ ಬೋಂಡ, ಬಾಳೆಕುಂಡಿಗೆ ಬೋಂಡ, ಅಳವಿ ಬೀಜದ ಪಾಯಸ, ಹಲಸಿನ ಬೀಜದ ಹೋಳಿಗೆ, ಗೆಣಸಲೆ, ಹಾಲುಬಾಯಿ, ತೊಡದೇವು, ಅನ್ನ, ಮಜ್ಜಿಗೆ ಹುಲ್ಲಿನ ಮಜ್ಜಿಗೆ, ಪಳದ್ಯ ಉಣಬಡಿಸಲಾಯಿತು.