ಹುಣ್ಣಿಮೆ ಅಂಗವಾಗಿ ಕಾವೇರಿ ನದಿಯಲ್ಲಿ 181 ನೇ ಮಹಾ ಆರತಿ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ಅದ್ಧೂರಿಯಾಗಿ ನೆರವೇರಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇಗುಲದ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ಕಾವೇರಿ ಮಹಾ ಆರತಿ ಬಳಗ ಮತ್ತು ಕುಶಾಲನಗರ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ ಟ್ರಸ್ಟ್ ಆಶ್ರಯದಲ್ಲಿ ಹುಣ್ಣಿಮೆ ಅಂಗವಾಗಿ ಕಾವೇರಿ ನದಿಯಲ್ಲಿ 181 ನೇ ಮಹಾ ಆರತಿ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ಅದ್ಧೂರಿಯಾಗಿ ನೆರವೇರಿತು.ಕಾರ್ಯಕ್ರಮದಲ್ಲಿ ಕೊಡಗು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಡಾ. ಮಂತರ್ ಗೌಡ, ಮಾಜಿ ಸಚಿವ ಎಂ ಪಿ ಅಪ್ಪಚ್ಚು ರಂಜನ್ ಸೇರಿದಂತೆ ಗಣ್ಯರು ಪಾಲ್ಗೊಂಡು ನದಿಗೆ ಆರತಿ ಬೆಳಗಿದರು.
ದೇಶ ಸಪ್ತ ನದಿಗಳು ಹರಿವ ನೆಲ:ಈ ಸಂದರ್ಭ ಮಾತನಾಡಿದ ಯದುವೀರ್ ಒಡೆಯರ್ ಅವರು, ಭಾರತ ದೇಶ ಸಪ್ತ ನದಿಗಳು ಹರಿವ ನೆಲವಾಗಿದ್ದು ಅದರಲ್ಲಿ ಕರ್ನಾಟಕ ರಾಜ್ಯದಲ್ಲಿ ಜೀವನದಿ ಕಾವೇರಿ ಹರಿಯುತ್ತಿದೆ. ಕಾವೇರಿಯನ್ನು ತಾಯಿಯ ರೂಪ ಕೊಟ್ಟು ಆರಾಧಿಸಲಾಗುತ್ತಿದೆ ಎಂದರು.
ಪುರಾತನ ಕಾಲದ ವೇದಗಳು, ತರ್ಕಶಾಸ್ತ್ರದ ಗ್ರಂಥಗಳು ಪ್ರಕೃತಿಯ ಬಗ್ಗೆ ಬಹಳಷ್ಟು ವಿಷಯಗಳನ್ನು ಉಲ್ಲೇಖಿಸಲಾಗಿದೆ. ಇಂದಿನ ದಿನಗಳಲ್ಲಿ ಅವೆಲ್ಲವನ್ನು ನಾವು ಮರೆತಿದ್ದೇವೆ. ಭಾರತೀಯ ಸಂಸ್ಕೃತಿಯ ಬಗ್ಗೆ ಭಾವನಾತ್ಮಕವಾದ ಸಂಬಂಧ ಇರುವ ನದಿ ಹಾಗೂ ಪ್ರಕೃತಿಯನ್ನು ನಾವೆಲ್ಲರೂ ನಿರಂತರವಾಗಿ ಆರಾಧಿಸಬೇಕಾಗಿದೆ ಎಂದರು.ಸಂಸ್ಕೃತಿಯ ಕುರುಹುಗಳಾದ ನದಿಗಳ ಮಹತ್ವದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಅಗತ್ಯ ಎಂದ ಒಡೆಯರ್ ಭಾರತೀಯ ಪರಂಪರೆಗಳನ್ನು ಉಳಿಸುವ ಕೆಲಸವಾಗಬೇಕಾಗಿದೆ ಎಂದು ಕರೆಕೊಟ್ಟರು.ಸಂಖ್ಯೆಯಲ್ಲಿ ಶೇ.1 ಇದ್ದರೂ ಕೂಡ ಧರ್ಮದ ಪಾಲನೆ ಮಾಡುವಲ್ಲಿ ಆರ್ಯವೈಶ್ಯ ಸಮಾಜ ಮಂಚೂಣಿಯಲ್ಲಿರುವುದು ಶ್ಲಾಘನೀಯ ಎಂದರು.ಪ್ರವಾಸೋದ್ಯಮ ಒಂದು ಶಕ್ತಿ:
ಪ್ರವಾಸೋದ್ಯಮ ಒಂದು ಶಕ್ತಿ ಆಗಬೇಕು. ಅದರ ಮೂಲಕ ಎಲ್ಲರ ಅಭ್ಯುದಯವಾಗುತ್ತದೆ. ಆದರೆ ಪ್ರವಾಸೋದ್ಯಮವನ್ನು ವಿರೋಧಿಸದೆ ಸಮರ್ಪಕವಾಗಿ ನಡೆಸುವ ಕೆಲಸ ಆಗಬೇಕಿದೆ ಎಂದರು.ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಕಾವೇರಿಗೆ ಮಹಾ ಆರತಿ ಅದೊಂದು ಪವಿತ್ರ ಕಾರ್ಯವಾಗಿದೆ ಎಂದರಲ್ಲದೇ ನಿರಂತರವಾಗಿ ಕಾವೇರಿಗೆ ಆರತಿ ಮಾಡಿಕೊಂಡು ಬರುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.ಆರತಿ ಮೂಲಕ ನದಿಯ ಬಗ್ಗೆ ಜನ ಜಾಗೃತಿ ಮೂಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.ಪ್ರಕೃತಿಗೆ ಅಪಚಾರ ಮಾಡುತ್ತಾ ಅಭಿವೃದ್ಧಿಗೆ ಒತ್ತು ಕೊಡುತ್ತಿರುವುದು ವಿನಾಶಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದ ಶ್ರೀಗಳು, ನದಿ ಹಾಗೂ ಪರಿಸರದ ಸ್ವಚ್ಛತೆಗೆ ಎಲ್ಲರೂ ಕಟಿಬದ್ಧರಾಗಲು ಕರೆಕೊಟ್ಟರು.
ಮಡಿಕೇರಿ ಶಾಸಕ ಡಾ.ಮಂತರಗೌಡ ಮಾತನಾಡಿ, ಹುಣ್ಣಿಮೆಯಲ್ಲಿ ಬ್ರಹ್ಮಾಂಡದ ಶಕ್ತಿ ಜಾಸ್ತಿಯಾಗುತ್ತದೆ ಎಂಬ ಕಾರಣಕ್ಕೆ ನದಿಯಲ್ಲಿ ಆರತಿ ಕಾರ್ಯಕ್ರಮ ಮಾಡಲಾಗುತ್ತದೆ. ಆರತಿಯ ಜೊತೆಗೆ ಸ್ವಚ್ಛತೆಗೆ ಒತ್ತು ಕೊಡಬೇಕು. ಜೀವ ಸಂಕುಲಕ್ಕೆ ಎಲ್ಲವನ್ನು ಧಾರೆ ಎರೆದಿರುವ ಕಾವೇರಿ, ಗಂಗಾ ಮೊದಲಾದ ನದಿಗಳಿಗೆ ಮನುಷ್ಯರಾದ ನಾವು ಏನು ಕೊಡುಗೆ ಕೊಟ್ಟಿದ್ದೇವೆ. ಸರ್ಕಾರಗಳ ಮೂಲಕ ಕಾನೂನಿನ ಅಗತ್ಯ ಇದೆ ಎಂದು ಎಂದು ಹೇಳಿದ ಶಾಸಕರು, ನದಿಯ ಅತಿಕ್ರಮಣ ಹಾಗೂ ಒತ್ತುವರಿ ತಡೆಯಲು ಬಫರ್ ಜೋನ್ ಸಂರಕ್ಷಣೆಗೆ ವಿಶೇಷ ಒತ್ತು ಕೊಡುವ ಬಗ್ಗೆ ಘೋಷಿಸಿದರು.ಕಾನೂನು ತರಬೇಕು;
ಸರ್ಕಾರ ಏನೇ ಕಾನೂನು ತಂದು ದಂಡ ವಿಧಿಸಿದರೂ ಕೂಡ, ಮನುಷ್ಯನಲ್ಲಿ ನದಿಯ ಸ್ವಚ್ಛತೆಯ ಬಗ್ಗೆ ಸಾಮಾನ್ಯ ಜ್ಞಾನ ಹಾಗೂ ಪೂಜ್ಯ ಭಾವ ಮೂಡಬೇಕಾಗಿದೆ ಎಂದರಲ್ಲದೇ ರಾಜಕಾರಣಿಗಳು ಕೂಡ ನದಿ ಜಲಮೂಲಗಳ ವಿಚಾರದಲ್ಲಿ ಜನ ಹಾಕಬಹುದಾದ ವೋಟುಗಳ ಚಿಂತೆ ಬಿಟ್ಟು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಕಾನೂನು ತರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ನದಿ ತೀರದಲ್ಲಿ ಅವೈಜ್ಞಾನಿಕ ಬಡಾವಣೆಗಳನ್ನು ನಿರ್ಮಾಣ ಮಾಡದಿರಲು ಹಾಗೂ ಕುಶಾಲನಗರದ ಸಾಯಿ ಬಡಾವಣೆಯ ಪ್ರವಾಹ ಸ್ಥಿತಿ ಗತಿಗಳನ್ನು ಸೃಷ್ಟಿಸಿರುವ ಬಗ್ಗೆ ಉದಾಹರಿಸಿದರು.ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಕಾವೇರಿ ಉಳಿದರೆ ನಾಡು ಉಳಿಯುತ್ತದೆ. ಕಾವೇರಿ ಕೇವಲ ನದಿಯಲ್ಲ. ಅದು ಇಡೀ ಮನುಕುಲದ ಸಂಜೀವಿನಿ. ಹಾಗಾಗಿ ನದಿ ಹಾಗೂ ಪರಿಸರವನ್ನು ಉಳಿಸಲು ಎಲ್ಲರು ಶ್ರಮ ವಹಿಸಬೇಕು ಎಂದರು.
ಕುಶಾಲನಗರದ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗಿನಲ್ಲಿ ಆರ್ಯವೈಶ್ಯ ಸಮಾಜದವರು ಕೇವಲ 500 ಮಂದಿ ಇದ್ದು, ಕುಶಾಲನಗರದಲ್ಲಿ 115 ಕುಟುಂಬಗಳಿವೆ. ಕುಶಾಲನಗರ ಪಟ್ಟಣದ ಅಭಿವೃದ್ಧಿಗೆ ಆರ್ಯವೈಶ್ಯ ಮಂಡಳಿಯವರ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿ, ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯ ಬ್ರಹ್ಮಕಲಶೋತ್ಸವ ಅಂಗವಾಗಿ ವಾಸವಿ ಸಪ್ತಾಹದ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಈ ಹಿನ್ನೆಲೆಯಲ್ಲಿ ವಿಶೇಷ ಕಾವೇರಿ ಆರತಿ ಕಾರ್ಯಕ್ರಮ ನಡೆಸಲಾಯಿತು ಎಂದರು.ನದಿ ಸಂರಕ್ಷಣೆಗೆ ವಿಶೇಷ ಕಾನೂನು:
ಕಾವೇರಿ ನದಿ ಸಂರಕ್ಷಣಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್, ಕಳೆದ 40 ವರ್ಷಗಳ ಹಿಂದೆ ನೇರವಾಗಿ ಬೊಗಸೆಯಲ್ಲಿ ಕುಡಿಯುತ್ತಿದ್ದ ಕಾವೇರಿ ನೀರು ಇಂದು ಕುಡಿಯಲು ಯೋಗ್ಯವಲ್ಲ ಎಂದು ಸರ್ಕಾರವೇ ಹೇಳುವ ಪರಿಸ್ಥಿತಿಗೆ ನಾವೆಲ್ಲಾ ಕಾರಣರಾಗಿದ್ದೇವೆ. ಹಾಗಾಗಿ ಪ್ರಕೃತಿಯನ್ನು ವಿಕೃತಿಯಾಗಿಸಿರುವ ನಾವು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಜೀವನದಿ ಕಾವೇರಿ ಅಸ್ತಿತ್ವಕ್ಕೆ ಧಕ್ಕೆಯಾಗುವ ಆತಂಕವಿದೆ. ನದಿಯ ಬಳಿ ಪ್ಲಾಸ್ಟಿಕ್ ಬಾಟಲಿ ನೀರು ತಂದು ಕುಡಿಯುವ ಪರಿಸ್ಥಿತಿ ತಪ್ಪಿಸಲು ಎಲ್ಲರೂ ನದಿಯ ಸಂರಕ್ಷಣೆಗೆ ಕೈ ಜೋಡಿಸಬೇಕು ಹಾಗೂ ಸರ್ಕಾರದ ಮೂಲಕ ನದಿ ಸಂರಕ್ಷಣೆಗೆ ವಿಶೇಷ ಕಾನೂನು ರೂಪಿಸಬೇಕಿದೆ ಎಂದರು.ಕಾವೇರಿ ಆರತಿ ಬಳಗದ ವತಿಯಿಂದ ಸಂಸದ ಒಡೆಯರ್ ಕ್ಷೇತ್ರ ಶಾಸಕ ಮಂತರ್ ಗೌಡ ಸೇರಿದಂತೆ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಅರ್ಚಕರಾದ ಕೃಷ್ಣಮೂರ್ತಿ ಭಟ್, ಗಿರೀಶ್ ಭಟ್, ಮತ್ತು ಯೋಗೇಶ್ ಭಟ್ ನೇತೃತ್ವದಲ್ಲಿ ಗಂಗಾ ಆರತಿ ಮಾದರಿಯಲ್ಲಿ ಕಾವೇರಿಗೆ ಆರತಿ ಬೆಳಗಾಯಿತು.
ಕಾರ್ಯಕ್ರಮಕ್ಕೂ ಮುನ್ನ ಸಮಸ್ತ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ವಂದೇ ಮಾತರಂ ರಾಷ್ಟ್ರೀಯ ಗೀತೆಯ 150ನೇ ವರ್ಷದ ಅಂಗವಾಗಿ ಗೀತೆ ಹಾಡಲಾಯಿತು.ಆರ್ಯವೈಶ್ಯ ಸಮಾಜದ ಪ್ರಮುಖರಾದ ವಿ.ಎನ್.ವಸಂತಕುಮಾರ್, ಉದಯಕುಮಾರ್, ಬಿ ಎಲ್ ಅಶೋಕ್ ಕುಮಾರ್, ಬಿ ಆರ್ ನಟರಾಜ್, ಕೆ.ಜೆ.ಸತೀಶ್, ವೈಶಾಕ್, ಪ್ರಶಾಂತ್, ಕೆ. ಪ್ರವೀಣ್, ಅಂಜನ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಮಹೇಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೂಡ ಅಧ್ಯಕ್ಷ ಪ್ರಮೋದ್, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಮಾಜಿ ಸದಸ್ಯ ಬಿ.ಬಿ.ಭಾರತೀಶ್, ಹಿರಿಯ ಸಹಕಾರಿ ಎಂ.ಎನ್.ಕುಮಾರಪ್ಪ, ಪತ್ರಕರ್ತೆ ಸವಿತಾ ರೈ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೊಡಗು ನಿರ್ದೇಶಕಿ ಲೀಲಾವತಿ, ಕಾವೇರಿ ಮಹಾ ಆರತಿ ಬಳಗದ ಪ್ರಮುಖರಾದ ಮಂಡೆಪಂಡ ಬೋಸ್ ಮೊಣ್ಣಪ್ಪ, ಧರಣಿ ಸೋಮಯ್ಯ, ಮತ್ತು ವಾಸವಿ ಸಪ್ತಾಹ ಸಮಿತಿ, ವಿವಿಧ ಸಂಘಟನೆಗಳ ಪ್ರಮುಖರು, ಪದಾಧಿಕಾರಿಗಳು ಇದ್ದರು.