ಆರ್‌ಎಂಎಸ್‌ಎ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭ?

| Published : Feb 17 2025, 12:31 AM IST

ಸಾರಾಂಶ

ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಗುಂಡ್ಲುಪೇಟೆ ಬಳಿಯ ಸರ್ಕಾರಿ ಆದರ್ಶ ವಿದ್ಯಾಲಯ (ಆರ್‌ಎಂಎಸ್‌ಎ) ಇನ್ನುಮುಂದೆ ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳೊಂದಿಗೆ ಪದವಿ ಪೂರ್ವ ಕಾಲೇಜಾಗಿ ಆರಂಭವಾಗಲಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಗುಂಡ್ಲುಪೇಟೆ ಬಳಿಯ ಸರ್ಕಾರಿ ಆದರ್ಶ ವಿದ್ಯಾಲಯ (ಆರ್‌ಎಂಎಸ್‌ಎ) ಇನ್ನುಮುಂದೆ ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳೊಂದಿಗೆ ಪದವಿ ಪೂರ್ವ ಕಾಲೇಜಾಗಿ ಆರಂಭವಾಗಲಿದೆ.

ರಾಜ್ಯ ಸರ್ಕಾರ ೧೦೨೪-೨೫ ನೇ ಸಾಲಿನ ಶಾಲಾ ಶಿಕ್ಷಣ ಲಾಖೆ (ಪದವಿ ಪೂರ್ವ) ಸಂಬಂಧಿಸಿದ ಆಯವ್ಯಯ ಘೋಷಿತ ಕಂಡಿಕೆ ೯೯(೧) ರಲ್ಲಿನ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸರ್ಕಾರಿ ಆದರ್ಶ ವಿದ್ಯಾಲಯಗಳನ್ನು ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳ ಸಂಯೋಜನೆಯೊಂದಿಗೆ (K,E PCMB/PCMCs & EBACs) ಪದವಿ ಪೂರ್ವ ಕಾಲೇಜಾಗಿ ಉನ್ನತೀಕರಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.

೨೦೨೪-೨೫ ನೇ ಶೈಕ್ಷಣಿಕ ಸಾಲಿನಿಂದ ಆದರ್ಶ ವಿದ್ಯಾಲಯವನ್ನುವಾಣಿಜ್ಯ ಮತ್ತು ವಿಜ್ಞಾನ ವಿಷಯಗಳ ಸಂಯೋಜನೆಯೊಂದಿಗೆ (K,E PCMB/PCMCs & EBACs) ಆದರ್ಶ ಸರ್ಕಾರಿ ಪದವಿ ಪೂರ್ವ ಕಾಲೇಜಾಗಿ ಪ್ರಾರಂಭಿಸಲು ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿ ಆದೇಶ ಹೊರ ಬಿದ್ದಿದೆ.ಷರತ್ತುಗಳೇನು?:

ಖರೀದಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಖರೀದಿ ನಿಯಮಗಳನ್ನು ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿ ನಿಯಮ ೧೯೯೯ ಮತ್ತು ಅದರಡಿ ಹೊರಡಿಸಲಾದ ನಿಯಮಗಳನ್ನು ಪಾಲಿಸಬೇಕು. ೨೦೨೪-೨೫ ನೇ ಸಾಲಿಗೆ ಕಾಲೇಜಿಗೆ ಮಂಜೂರು ಮಾಡಲಾದ ಭಾಷಾ ವಿಷಯ ಹಾಗೂ ಸಂಯೋಜನೆಗಳಿಗೆ ಸಂಬಂಧಿಸಿದಂತೆ ಕಡಿಮೆ ಕಾರ್ಯ ಭಾರವಿರುವ ಉಪನ್ಯಾಸಕರ ನಿಯೋಜಿಸಬೇಕು. ನಿಯೋಜನೆಗೆ ಉಪನ್ಯಾಸಕರು ಲಭ್ಯವಿಲ್ಲದಿದ್ದಲ್ಲಿ ಎಲ್ಲಾ ೯ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ಪಡೆದ ತರಗತಿ ಆರಂಭಿಸಲು ಸೂಚನೆ ನೀಡಲಾಗಿದೆ. ಹೊಸದಾಗಿ ಆರಂಭವಾಗಲಿರುವ ಆದರ್ಶ ಪದವಿ ಪೂರ್ವ ಕಾಲೇಜಿಗೆ ಪ್ರಭಾರ ಪ್ರಾಂಶುಪಾಲರಾಗಿ ಕಬ್ಬಹಳ್ಳಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಬಸವನಾಯಕ ನೇಮಕವಾಗಿದ್ದಾರೆ.

ವರದಿ ಸಲ್ಲಿಕೆ:

ಪ್ರಭಾರ ಪ್ರಾಂಶುಪಾಲ ಬಸವನಾಯಕ ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿ ಕ್ಲಾಸ್‌ರೂಂ , ಲ್ಯಾಬ್‌ ರೂಂ, ಸ್ಟಾಪ್‌ ರೂಂ, ಕಚೇರಿ ರೂಂ ಗುರುತಿಸಿ ಉಪ ನಿರ್ದೇಶಕರಿಗೆ ವರದಿ ಕೂಡ ಸಲ್ಲಿಸಿದ್ದಾರೆ. ಪ್ರಸಕ್ತ ಆದರ್ಶ ವಿದ್ಯಾಲಯದಲ್ಲಿ ಎಸ್‌ಎಸ್ಎಲ್‌ಸಿ ಓದುತ್ತಿರುವ ವಿದ್ಯಾರ್ಥಿಗಳೊಂದಿಗೆ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಎಂ.ಸುಕನ್ಯ ಜೊತೆಗೂಡಿ ಪ್ರಭಾರ ಪ್ರಾಂಶುಪಾಲರು ಚರ್ಚಿಸಿ ಹೊಸದಾಗಿ ಆರಂಭವಾಗುವ ಕಾಲೇಜಿನಲ್ಲೇ ಓದಿ ಎಂದು ಮನವಿ ಮಾಡಿ ಕೊಟ್ಟಿದ್ದಾರೆ.

ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದಂತೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಆದರ್ಶ ಪದವಿ ಪೂರ್ವ ಕಾಲೇಜು ಆರಂಭಕ್ಕೆ ತಯಾರಿ ನಡೆದಿದೆ. ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ.-ಎಚ್.ಎಂ.ಗಣೇಶ್‌ ಪ್ರಸಾದ್‌, ಶಾಸಕಆದರ್ಶ ವಿದ್ಯಾಲಯದ ಮೇಲಂತಸ್ತಿನ ಕಟ್ಟಡದಲ್ಲಿ ಹತ್ತಕ್ಕೂ ಹೆಚ್ಚು ಕೊಠಡಿಗಳಿವೆ. ಇನ್ನಿತರ ಮೂಲಭೂತ ಸೌಕರ್ಯ, ಪೀಠೋಪಕರಣಗಳನ್ನು ಅಳವಡಿಸಿಕೊಳ್ಳಬೇಕಿದೆ.-ಎಂ.ಸುಕನ್ಯ,ಮುಖ್ಯ ಶಿಕ್ಷಕಿ,ಆರ್‌ಎಂಎಸ್‌ಎ

ಆದರ್ಶ ವಿದ್ಯಾಲಯ ಇನ್ನುಮುಂದೆ ಆದರ್ಶ ಪದವಿ ಪೂರ್ವ ಕಾಲೇಜು ಆಗಲಿದ್ದು ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಮತ್ತೊಮ್ಮೆ ಚರ್ಚಿಸಿ ಕಾಲೇಜಿಗೆ ಸೇರಿಸಲು ಮನವೊಲಿಸಲಾಗುವುದು.

-ಬಸವನಾಯಕ, ಪ್ರಭಾರ ಪ್ರಾಂಶುಪಾಲ