ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಗುಂಡ್ಲುಪೇಟೆಯಿಂದ ಚಾಮರಾಜನಗರದವರೆಗಿನ ಮುಖ್ಯ ರಸ್ತೆಯನ್ನು ಅಗಲೀಕರಣಗೊಳಿಸಿ, ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಗುಂಡ್ಲುಪೇಟೆಯಿಂದ ಚಾಮರಾಜನಗರದ ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ನಡೆಸಿ, ಕೆಲಕಾಲ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಗುಂಡ್ಲುಪೇಟೆಯಿಂದ ಚಾಮರಾಜನಗರದ ವರೆಗೆ ಪಾದಯಾತ್ರೆ ಹಮ್ಮಿಕೊಂಡ ಪ್ರತಿಭಟನಾಕಾರರು ರಸ್ತೆ ಅಗಲೀಕರಣ ಮತ್ತು ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಬೇಕೆಂದು ಘೋಷಣೆಗಳನ್ನು ಕೂಗಿದರು.ಈ ವೇಳೆ ಮಾತನಾಡಿದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಂಬರೀಶ್, ಈ ರಸ್ತೆ ಹಾಳಾಗಿದ್ದು ಹೆಚ್ಚು ಅಪಘಾತಗಳು ನಡೆದು ಅಮಾಯಕ ಜೀವಗಳು ಬಲಿಯಾಗುತ್ತಿವೆ, ಆದ್ದರಿಂದ ತ್ವರಿತವಾಗಿ ಈ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿದರು.
ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ದಿವಂಗತ ಹೆಚ್.ಎಸ್. ಮಹದೇವಪ್ರಸಾರ್ ಅವಧಿಯಲ್ಲೇ ಈ ರಸ್ತೆಯನ್ನು ಅಗಲೀಕರಣ ಮಾಡುವುದಕ್ಕಾಗಿ ರಸ್ತೆ ಬದಿಯಲ್ಲಿದ್ದ ನೂರಾರು ವರ್ಷಗಳ ಹಳೆಯ ಮರಗಳನ್ನು ಬುಡಸಮೇತ ಕಿತ್ತು ಹಾಕಲಾಯಿತು, ನಂತರ ಅನುದಾನದ ಕೊರತೆಯಿಂದಲೋ ಅಥವಾ ಅವರಲ್ಲಿನ ಜನಪರವಾದ ಸೇವಾ ನಿಲುವಿನ ಕೊರತೆಯಿಂದಲೋ ಇಂದಿನವರೆಗೂ ಈ ರಸ್ತೆಯ ಕಾಮಗಾರಿ ಆಗೇ ಬಿದ್ದಿದೆ ಎಂದು ಆರೋಪಿಸಿದರು,ಈ ರಸ್ತೆಯಲ್ಲಿ ನೂರಾರು ಭಾರಿ ವಾಹನಗಳು ಹಗಲಿರುಳೆಲ್ಲ ಸಂಚರಿಸುತ್ತವೆ. ಸುತ್ತಮುತ್ತ ಹತ್ತಾರು ಮೈನ್‌ಗಳಿವೆ ಈ ರಸ್ತೆಯನ್ನು ದಾಟಿದ ಬಳಿಕ ಗುಂಡ್ಲುಪೇಟೆಯಲ್ಲಿ ಮೂರು ರಾಜ್ಯಗಳನ್ನು ಸಂದಿಸುವ ಮಾರ್ಗಗಳಿವೆ. ಇವೆಲ್ಲದರ ನಿಮಿತ್ತ ಈ ರಸ್ತೆಯು ಅತಿ ಹೆಚ್ಚು ವಾಹನಗಳು ಚಲಿಸುವ ರಸ್ತೆಯಾಗಿ ಮಾರ್ಪಟ್ಟಿದೆ ಎಂದರು,
ಚಾಮರಾಜನಗರದ ಯಡಪುರದ ಬಳಿ ಇದೇ ರಸ್ತೆ ಹೊಂದಿಕೊಂಡಂತೆ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಅಲ್ಲೂ ಸಹ ಸಣ್ಣ ಪುಟ್ಟ ವಾಹನಗಳಿಂದ ದೊಡ್ಡ ವಾಹನಗಳವರೆಗೆ ಸಂಚಾರ ದಟ್ಟಣೆಯಾಗಿದೆ.ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ಜನಸಾಮಾನ್ಯರ ಮೇಲೆ ಬೀರುತ್ತಿರುವ ಪರಿಣಾಮವನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸರ್ಕಾರದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ದಾಖಲೆಗಳನ್ನು ಅಂಕಿ ಅಂಶಗಳನ್ನು ದಾಖಲಿಸುವ ಪೋಲೀಸ್ ಇಲಾಖೆಯೇ ಅಪಘಾತವಾದರೆ ಜನರದ್ದೆ ತಪ್ಪು ಎಂಬಂತೆ ಕೇಸುಗಳು ದಾಖಲಾಗಿವೆ. ಆದರೆ, ರಸ್ತೆಯ ಮೇಲೆ ಕೇಸುಗಳು ಬೀಳುವುದಿಲ್ಲ. ತಕ್ಷಣ ಈ ರಸ್ತೆಯ ಕಾಮಗಾರಿಯನ್ನು ಮತ್ತು ಆಗಲೀಕರಣವನ್ನು ತ್ವರಿತವಾಗಿ ನೆರವೇರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿ. ಶಂಕರ, ಎಂ. ಮಹೇಶ್, ಗವಿಸ್ವಾಮಿ, ಅಸಾದುಲ್ಲಾ, ನಮ್ಮನೆ ಪ್ರಶಾಂತ್, ಕಾಂತರಾಜ್, ನಿಂಗರಾಜು, ಸಿದ್ದಾರ್ಥ ಭಾಗವಹಿಸಿದ್ದರು.