ಸಾರಾಂಶ
ಕನಕಗಿರಿ: ಅಯೋಧ್ಯೆಯ ಶ್ರೀರಾಮಮಂದಿರ ಹೋರಾಟದಲ್ಲಿ ಬಲಿದಾನಗೈದ ಕರಸೇವಕರ ಮೋಕ್ಷ ಪ್ರಾಪ್ತಿಗಾಗಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಹೇಶ ನೇತಾಜಿ ಪಾದಯಾತ್ರೆ ಕೈಗೊಂಡಿದ್ದು, ಶುಕ್ರವಾರ ಪಟ್ಟಣಕ್ಕೆ ಆಗಮಿಸಿದರು. ಅವರು ಕನಕಾಚಲಪತಿ, ತೊಂಡಿತೇವರಪ್ಪ, ಕಂಠಿ ತಿಮ್ಮಣ್ಣ ದೇಗುಲಗಳಿಗೆ ಭೇಟಿ ನೀಡಿ ದರ್ಶನ ಪಡೆದರು.ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ನೇತಾಜಿ, ದೇಶದೆಲ್ಲೆಡೆ ಅಯೋಧ್ಯೆಯ ಶ್ರೀರಾಮಮಂದಿರ ಹೋರಾಟದಲ್ಲಿ ಸಕ್ರಿಯರಾಗಿ ಕೆಲಸ ಮಾಡಿದ್ದಾರೆ. ರಾಮಮಂದಿರ ಬಾಬ್ರಿ ಮಸೀದಿಯಾಗಿ ಬದಲಾದ ಸಂದರ್ಭದಲ್ಲಿ ಅದೆಷ್ಟೋ ಕರಸೇವಕರು ಹೋರಾಟದಲ್ಲಿ ಪ್ರಾಣತೆರಬೇಕಾಯಿತು. ಇಂದು ದೇಶದ ಭಕ್ತರಿಂದ ಸಾವಿರಾರು ಕೋಟಿ ರುಪಾಯಿ ವೆಚ್ಚದಲ್ಲಿ ಶ್ರೀರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಗೊಂಡಿದೆ. ಮಂದಿರದ ಪೂರ್ಣ ಕಾಮಗಾರಿ ನಡೆಯುತ್ತಿದೆ. ಅಂದು ನಡೆದ ಹಲವು ಹೋರಾಟದಲ್ಲಿ ಪ್ರಾಣತೆತ್ತ ಕರಸೇವಕರ ಮೋಕ್ಷ ಪ್ರಾಪ್ತಿಗಾಗಿ ಈ ಯಾತ್ರೆ ಕೈಗೊಂಡಿದ್ದೇನೆ ಎಂದರು.ಜ.೨೩ರಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನಿಂದ ಪಾದಯಾತ್ರೆ ಆರಂಭಿಸಿದ್ದು, ೮೪ ದಿನಗಳ ಯಾತ್ರೆ ನಡೆಯಲಿದೆ. ಶ್ರೀರಾಮನವಮಿ ದಿನ ಅಯೋಧ್ಯೆ ತಲುಪಲಿದ್ದೇನೆ. ೧೨ನೇ ದಿನ ಪಾದಯಾತ್ರೆ ಕನಕಗಿರಿ ಬಂದಿದ್ದೇನೆ. ತಾವರಗೇರಾ ಕಡೆಗೆ ಪಯಣ ಬೆಳೆಸಿದ್ದೇನೆ. ಶ್ರೀರಾಮಭಕ್ತರಿಂದ ವಸತಿ, ಪ್ರಸಾದ ವ್ಯವಸ್ಥೆ ಸ್ವಯಂ ಪ್ರೇರಿತವಾಗಿ ಮಾಡುತ್ತಿದ್ದಾರೆಂದು ತಿಳಿಸಿದರು.ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಚಾಲಕ ಅಯ್ಯನಗೌಡರೆಡ್ಡಿ ಅಳ್ಳಳ್ಳಿ, ರಾಘವೇಂದ್ರ ಭಜನಾ ಮಂಡಳಿಯ ಅಧ್ಯಕ್ಷ ವಿಜಯಕುಮಾರ, ಸದಸ್ಯರಾದ ಭೀಮರಾವ್ ಮರಾಠಿ, ಮೋಹನ ಅಚ್ಚಲಕರ, ಶ್ರೀನಿವಾಸರೆಡ್ಡಿ, ವಿನಯ ಪತ್ತಾರ, ವೀರೇಶ ವಸ್ತ್ರದ, ಅಶೋಕ ನಾಯಕ, ರಾಮಣ್ಣ ಗುಂಜಳ್ಳಿ, ಈರಣ್ಣ ಶ್ರೇಷ್ಠಿ, ಭೀಮರೆಡ್ಡಿ ಓಣಿಮನಿ ಇದ್ದರು.