ಗುತ್ತಲ: ಪಟ್ಟಣ ಪಂಚಾಯತಿ ಸಾಮಾನ್ಯ ಸಭೆ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಪಟ್ಟಣಕ್ಕೆ ಆಗಮಿಸುತ್ತಿದ್ದ, ಶಾಸಕ ಹಾಗೂ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಮಾರ್ಗ ಮಧ್ಯ ಅಕ್ರಮ ಮಟ್ಕಾ ದಂಧೆಯ ಅಡ್ಡೆಯ ಮೇಲೆ ದಾಳಿ ಮಾಡಿ, ಓರ್ವ ಮಟ್ಕಾ ಬುಕ್ಕಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಪಟ್ಟಣದ ಹಳೆಯ ಪಟ್ಟಣ ಪಂಚಾಯಿತಿ ಕಟ್ಟಡವನ್ನು ನಾಡಕಚೇರಿಗೆ ಹಸ್ತಾಂತರಿದ ರುದ್ರಪ್ಪ ಲಮಾಣಿ ಅವರನ್ನು ಸ್ಥಳೀಯ ಮಹಿಳೆಯರು, ಸಾರ್ವಜನಿಕರು ಅನಧಿಕೃತ ಮೀನು ಮಾರುಕಟ್ಟೆ, ಕುರಿ-ಕೋಳಿ ಮೌಂಸದ ಅಂಗಡಿಗಳ ತ್ಯಾಜ್ಯದಿಂದ ನಾಯಿಗಳು ಹೆಚ್ಚಾಗಿ ತೀವ್ರವಾದ ಅನಾನುಕೂಲವಾಗಿದ್ದು, ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿ ಮಾರುಕಟ್ಟೆ ಸ್ಥಳಕ್ಕೆ ಕರೆದೊಯ್ಯುತ್ತಿದ್ದರು.

ಆಗ ಪಕ್ಕದಲ್ಲಿಯೇ ಕಾನೂನು ಬಾಹಿರವಾದ ಮಟ್ಕಾ ದಂಧೆ ನಡೆಯುವ ಶೆಡ್‌ನೊಳಗೆ ಏಕಾಏಕಿ ನುಗ್ಗಿದ ಶಾಸಕ ರುದ್ರಪ್ಪ ಲಮಾಣಿ, ಅಲ್ಲಿಯ ವ್ಯವಸ್ಥೆಯನ್ನು ಕಂಡು ಅಚ್ಚರಿಯಾದರು. ಪೊಲೀಸ್‌ ಸೇರಿದಂತೆ ಯಾವ ಅಧಿಕಾರಿಗಳ ಭಯವಿಲ್ಲದೇ ರಾಜಾರೋಷವಾಗಿ ಶಾಲೆಯ ಎದುರಗಡೆಯ ಶೆಡ್‌ನಲ್ಲಿ ಮಟ್ಕಾ ನಂಬರ್‌ ಬರೆಯುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಗುತ್ತಲ ಪೊಲೀಸ್‌ ಠಾಣೆಗೆ ಕರೆ ಮಾಡಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.ಈ ಸಂದರ್ಭದಲ್ಲಿ ತಹಸೀಲ್ದಾರ್ ಶರಣಮ್ಮ ಕಾರಿ, ಮುಖ್ಯಾಧಿಕಾರಿ ದೇವಾನಂದ ದೊಡ್ಮನಿ ಸೇರಿದಂತೆ ಅನೇಕರಿದ್ದರು.

ಮಟ್ಕಾ ದಂಧೆ ಕಾನೂನು ಬಾಹಿರ, ರಾಜಾರೋಷವಾಗಿ ಹಾಡು ಹಗಲೇ ಶಾಲೆಯ ಹೊರಗಡೆ ಇಂತಹ ಅಕ್ರಮ ದಂಧೆ ನಡೆಯುತ್ತಿರುವುದು ಕಣ್ಣಾರೆ ನೋಡಿ ದಿಗ್ಭ್ರಮೆಯಾಗಿದೆ. ಈಗಾಗಲೇ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಪೋನ್ ಮೂಲಕ ತಿಳಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಅದರಂತೆ ವಿಶೇಷ ತನಿಖಾ ತಂಡದಿಂದ ಆದಷ್ಟೂ ಶೀಘ್ರದಲ್ಲಿಯೆ ಇನ್ನುಳಿದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವ ಮೂಲಕ ಮಟ್ಕಾ ದಂಧೆ ನಿರ್ಮೂಲನೆ ಮಾಡಲಾಗುವುದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.