ಕನ್ನಡಪ್ರಭ ವಾರ್ತೆ ಕಾರವಾರ
ಜಿಲ್ಲೆಯ ಯಾವುದೇ ಸರಕಾರಿ ವೈದ್ಯಕೀಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡುವ ಔಷಧಗಳ ವಿತರಣೆಯಲ್ಲಿ ಕೊರತೆಯಾಗದಂತೆ ಎಚ್ಚರವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಳಾ ಎಸ್. ವೈದ್ಯ ಸೂಚನೆ ನೀಡಿದರು.ಸೋಮವಾರ ಜಿಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಕ್ಕಳ ಕೊರತೆಯಿಂದ ಈಗಾಗಲೇ ಮುಚ್ಚಿರುವ ಸರಕಾರಿ ಶಾಲೆಗಳನ್ನು ಸರ್ವೇ ಮಾಡಿಸಿ, ಅವುಗಳನ್ನು ಸ್ಥಳೀಯ ಗ್ರಾಪಂಗಳಿಗೆ ಹಸ್ತಾಂತರಿಸಬೇಕು ಎಂದರು.ಈ ಬಾರಿಯ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಜಿಲ್ಲೆಗೆ ಶೇ.100 ಫಲಿತಾಂಶ ಬರುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಶಿಕ್ಷಕರು ಕಾರ್ಯನಿರ್ವಹಿಸಬೇಕು, ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಎಲ್ಲಾ ಶಾಸಕರು ತಮ್ಮ ಅನುದಾನ ನೀಡಲಿದ್ದೇವೆ ಎಂದರು.
ಪ್ರಸ್ತುತ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸಮರ್ಪಕವಾಗಿ ನಡೆಯಬೇಕು, ಜಿಲ್ಲೆಗೆ ಬಂದಿರುವ ಹೊಸ ಬಸ್ ಗಳನ್ನು ಅಗತ್ಯವಿರುವೆಡೆಗಳಲ್ಲಿ ಕಾರ್ಯಚರಣೆಗೆ ನಿಯೋಜಿಸಬೇಕು, ಕಾರವಾರ- ಬೆಂಗಳೂರು ನಡುವೆ ಬಸ್ ಸ್ಥಗಿತಗೊಳಿಸುವ ಬಸ್ ಸಂಚಾರವನ್ನು ಪುನಾರಂಭಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಸಾರಿಗೆ ಬಸ್‌ಗಳ ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದು, ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸಿ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ಎಲ್ಲ ಕಡೆ ಗುಜರಿ ಬಸ್‌ಗಳು ಓಡಾಡುತ್ತಿವೆ. ಬಸ್‌ಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಕಾರವಾರ, ಅಂಕೋಲಾ ಬಸ್ ಘಟಕಗಳು ದುರ್ಬಲವಾಗಿವೆ ಎಂದು ಶಾಸಕ ಸತೀಶ ಸೈಲ್ ಆರೋಪಿಸಿದರು.
ಜಿಲ್ಲೆಯಲ್ಲಿನ ಜಲಪಾತಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಜೀವಹಾನಿಯಾಗುತ್ತಿದ್ದು, ಈ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳು, ಮುನ್ನೆಚ್ಚರಿಕೆ ಸೂಚನಾ ಫಲಕಗಳು ಮತ್ತು ಹೋಂ ಗಾರ್ಡ್‌ಗಳನ್ನು ನಿಯೋಜಿಸಬೇಕು, ಹಾವೇರಿ-ಶಿರಸಿ ರಸ್ತೆ ಕಾಮಗಾರಿಯಿಂದ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಧೂಳಿನಿಂದ ನರಳುತ್ತಿದ್ದು, ಈ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದ್ದು, ಪ್ರಸ್ತುತ ಕಿತ್ತು ಹಾಕಿರುವ ರಸ್ತೆಯನ್ನು ಆದ್ಯತೆಯಲ್ಲಿ ನಿರ್ಮಾಣ ಮಾಡುವಂತೆ ಭೀಮಣ್ಣ ನಾಯ್ಕ ಒತ್ತಾಯಿಸಿದರು.ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ. ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಇದ್ದರು.