ಕನ್ನಡಪ್ರಭ ವಾರ್ತೆ ಸೊರಬ
ಆಧುನಿಕತೆಯ ಅಬ್ಬರದಲ್ಲಿ ಟಿವಿ ಮತ್ತು ಮೊಬೈಲ್‌ಗಳು ಮನುಷ್ಯನನ್ನು ಆವರಿಸಿಕೊಂಡಿದ್ದರೂ ಸಹ ಗ್ರಾಮೀಣ ಭಾಗದ ಸಂಸ್ಕೃತಿಯಲ್ಲಿ ಸಾಮಾಜಿಕ ನಾಟಕಗಳು ಇಂದಿಗೂ ಜೀವಂತವಾಗಿ ತನ್ನತನ ಉಳಿಸಿಕೊಂಡಿವೆ ಎಂದು ತಾಪಂ ಮಾಜಿ ಸದಸ್ಯ ಸುನೀಲ್‌ಗೌಡ ಹೇಳಿದರು.ತಾಲೂಕಿನ ಹಿರೇಕಲಗೋಡು ಗ್ರಾಮದಲ್ಲಿ ಶ್ರೀ ಈಶ್ವರ ಬಸವೇಶ್ವರ ದೇವರ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಬಸವೇಶ್ವರ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಅಣ್ಣನ ಅರಮನೆ ಅರ್ಥಾತ್ ಕರ್ನಾಟಕದ ಹುಲಿ ಎಂಬ ಸಾಮಾಜಿಕ ನಾಟಕದ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಳ್ಳಿಗಳಲ್ಲಿ ಜಾತಿ-ಧರ್ಮದ ಹಂಗಿಲ್ಲದೆ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುವುದು ಶ್ಲಾಘನೀಯ. ನಾಟಕ, ಕ್ರೀಡೆಯಂತಹ ಕಾರ್ಯಕ್ರಮಗಳು ಗ್ರಾಮದ ಸಂಘಟನೆಗೆ ಪೂರಕವಾಗಿವೆ. ನಮ್ಮ ಮಣ್ಣಿನ ಪ್ರತಿಭೆಗಳಿಗೆ ವೇದಿಕೆ ನೀಡಿ ಪ್ರೋತ್ಸಾಹಿಸುವುದು ಅಗತ್ಯವಿದ್ದು, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಗ್ರಾಮದ ಸಮಸ್ಯೆಗಳನ್ನು ಅರಿಯಲು ನೆರವಾಗುತ್ತವೆ ಎಂದರು.ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಎಸ್. ಮಧು ಬಂಗಾರಪ್ಪ ಅವರ ಪ್ರಯತ್ನದಿಂದ ಗುಡ್ನಾಪುರದಿಂದ ಹಿರೇಕಲಗೋಡು ಗ್ರಾಮದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ೧ ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ. ಗ್ರಾಮದಲ್ಲಿ ಸಮುದಾಯ ಭವನ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಯನ್ನು ಸಚಿವರ ನೇತೃತ್ವದಲ್ಲಿ ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ೫ ಗ್ಯಾರೆಂಟಿ ಯೋಜನೆಗಳ ಮೂಲಕ ವಾರ್ಷಿಕ ೫೮,೦೦೦ ಕೋಟಿ ರು. ಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಜನರಿಗೆ ತಲುಪಿಸುತ್ತಿದೆ. ಅಭಿವೃದ್ಧಿ ಮತ್ತು ಸಾಮಾಜಿಕ ಭದ್ರತೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ಮಲ್ಕಪ್ಪಗೌಡ್ರು ವಹಿಸಿದ್ದರು. ಕಾರ್ಯಕ್ರಮದ ಸಂಚಾಲಕರಾದ ಗಿರೀಶ ಎಂ. ಗೌಡ್ರು, ಗ್ರಾಪಂ ಸದಸ್ಯೆ ಮಂಜುಳಮ್ಮ, ಮುಖಂಡರಾದ ವಿಶ್ವೇಶ್ವರ ಸುಂಟ್ರಳ್ಳಿ, ಶಂಕರ್ ಈ. ನಾಯ್ಕ ಕೆಂಚಿಕೊಪ್ಪ, ರಾಜು ಕೆಂಚಿಕೊಪ್ಪ, ಪ್ರಶಾಂತ್, ಅಣ್ಣಪ್ಪಗೌಡ್ರು ಈಡೂರು, ಯುವ ಮುಖಂಡ ರಾಘವೇಂದ್ರ ಸುಂಟ್ರಳ್ಳಿ, ಜಗದೀಶ್‌ಗೌಡ್ರು, ಚಂದ್ರು ನಾಯ್ಕ, ಚನ್ನಬಸವೇಶ್ವರಗೌಡ್ರು, ದೇವಸ್ಥಾನ ಸಮಿತಿ ಅಧ್ಯಕ್ಷ ಕೆ. ಅಭಿಷೇಕ್, ಮಂಜುನಾಥ್‌ಗೌಡ್ರು, ಅಣ್ಣಪ್ಪ ನಾಯ್ಕ ಕೆಂಚಿಕೊಪ್ಪ ಸೇರಿದಂತೆ ಬಸವೇಶ್ವರ ಗೆಳೆಯರ ಬಳಗದ ಪದಾಧಿಕಾರಿಗಳು ಹಾಜರಿದ್ದರು.