ಆರ್.ವಿ.ಆರ್. ಹೆಲ್ತ್‌ಕೇರ್ ನಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಆಸ್ತಿ ಮತ್ತು ಅಂತಸ್ತಿಗಿಂತ ಆರೋಗ್ಯ ಮನುಷ್ಯನ ಅತಿದೊಡ್ಡ ಸಂಪತ್ತು. ಈ ಆರೋಗ್ಯಯುತ ಬದುಕು ಸಂಪಾದಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ಸೂಕ್ತ ಸಮಯಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಹಿರೇಮಗಳೂರು ಸಮೀಪದ ಆರ್.ಸಿ.ಕಂಫಟ್ಸ್ ಕಟ್ಟಡದಲ್ಲಿ ಭಾನುವಾರ ಆರ್.ವಿ.ಆರ್. ಹೆಲ್ತ್‌ಕೇರ್ ನಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಐವತ್ತರ ಆಸುಪಾಸಿನಲ್ಲಿ ಸಣ್ಣಪುಟ್ಟ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಇದು ಭವಿಷ್ಯದಲ್ಲಿ ಅನಾರೋಗ್ಯಕ್ಕೆ ತುತ್ತಾವುದನ್ನು ತಪ್ಪಿಸುವ ಒಂದು ಕ್ರಿಯೆಯಾಗಿದೆ. ಹೀಗಾಗಿ ಪ್ರತಿಯೊಬ್ಬರು ವಯೋ ಸಹಜದಲ್ಲಿ ದೇಹ ಸ್ಥಿತಿಗತಿ ಅರಿತು ತಪಾಸಣೆ ನಡೆಸಿ, ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದರು.

ಉಚಿತ ಶಿಬಿರದಲ್ಲಿ ಖ್ಯಾತ ವೈದ್ಯರ ತಂಡ ಭಾಗವಹಿಸಿ ಸಾರ್ವಜನಿಕರ ತಪಾಸಣೆಗೆ ಮುಂದಾಗುತ್ತಿರುವುದು ಶ್ಲಾಘನೀಯ ಎಂದರು.


ಮುಂದಿನ ದಿನಗಳಲ್ಲಿ ಮಂಗಳೂರಿನ ಆರ್.ವಿ.ಆರ್. ಹೆಲ್ತ್‌ಕೇರ್ ಜಿಲ್ಲಾ ಕೇಂದ್ರದಲ್ಲಿ ಆಸ್ಪತ್ರೆ ತೆರೆಯುವ ಆಕಾಂಕ್ಷೆ ಹೊಂದಿದ್ದು, ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ, ತಪಾಸಣೆ ಹಾಗೂ ಅಗತ್ಯಗನುಸಾರ ಸೇವೆ ಕಲ್ಪಿಸುವ ಮೂಲಕ ಜಿಲ್ಲೆಯ ಜನರಿಗೆ ಆರೋಗ್ಯಯುತ ಬದುಕಿಗೆ ನಾಂದಿಹಾಡಲಿ ಎಂದರು.

ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಹಾಗೂ ಆರ್.ವಿ.ಆರ್. ಹೆಲ್ತ್‌ಕೇರ್ ಮಾಲೀಕ ಎಂ.ಎನ್.ವಿಜಯ್‌ಶೆಟ್ಟಿ ಮಾತನಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಮಂಜುನಾಥ್, ಆರ್.ವಿ.ಆರ್. ಹೆಲ್ತ್‌ಕೇರ್ ವೈದ್ಯರಾದ ಡಾ. ಬಿ.ಎಸ್.ರಾಘವೇಂದ್ರ, ಡಾ.ನಿಶಿತಾ ಶೆಟ್ಟಿ, ಡಾ.ಸಹನಾ ಜಿ.ಬಾಳಿಗಾ, ಡಾ.ಅಂಜನ್‌ಕುಮಾರ್, ಡಾ.ವಿಘ್ನೇಶ್‌ ಸಂಪತ್ ಅಯ್ಯರ್ ಉಪಸ್ಥಿತರಿದ್ದರು.