- ಚಾಮರಾಜನಗರ ಹಿರಿಯ ಶಾಸಕಗೆ ಸಂಪುಟದಲ್ಲಿ ಅವಕಾಶ ಕೊಡಲಿ: ಎಂ.ಸಿ.ರಮೇಶ ಹದಡಿ, ನಲ್ಕುಂದ ಹಾಲೇಶ - - -
ಕನ್ನಡಪ್ರಭ ವಾರ್ತೆ ದಾವಣಗೆರೆಹಳೇ ಮೈಸೂರು ಭಾಗದ ಚಾಮರಾಜನಗರದ ಹಿರಿಯ ಶಾಸಕ, ಮಾಜಿ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರಿಗೆ ಸಚಿವ ಸ್ಥಾನ ಹಾಗೂ ಉಪ್ಪಾರ ಸಮುದಾಯಕ್ಕೆ ಕನಿಷ್ಠ 3-4 ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ನೀಡುವಂತೆ ಜಿಲ್ಲಾ ಭಗೀರಥ ಉಪ್ಪಾರ ಸಂಘವು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಒತ್ತಾಯಿಸಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಂ.ಸಿ.ರಮೇಶ ಹದಡಿ, ಕಾರ್ಯಾಧ್ಯಕ್ಷ ನಲ್ಕುಂದ ಎಚ್.ಎಸ್. ಹಾಲೇಶ, ರಾಜ್ಯದಲ್ಲಿ ಸುಮಾರು 25-30 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜದ ಏಕೈಕ ಶಾಸಕ, ಸಮಾಜದ ಹಿರಿಯ ನಾಯಕ ಸಿ.ಪುಟ್ಟರಂಗಶೆಟ್ಟಿಗೆ ನೂತನ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದರು.ಚಾಮರಾಜನಗರ ಕ್ಷೇತ್ರದಿಂದ 4 ಬಾರಿ ಶಾಸಕ, ಒಮ್ಮೆ ಸಚಿವ, ಉಪ್ಪಾರ ಸಮಾಜದ ರಾಜ್ಯಾಧ್ಯಕ್ಷರಾಗಿ ಸಿ.ಪುಟ್ಟರಂಗಶೆಟ್ಟಿ ಕೆಲಸ ಮಾಡಿದ್ದಾರೆ. ಹಗಲಿರುಳು ಸಮಾಜ ಸಂಘಟನೆ, ಹೋರಾಟ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರಲು ಶ್ರಮಿಸಿದವರು ಪುಟ್ಟರಂಗಶೆಟ್ಟಿ. ಈ ಹಿಂದೆ ಸಚಿವ ಸ್ಥಾನ ನೀಡುತ್ತೇವೆಂದು ಆಶ್ವಾಸನೆ ನೀಡಿದರೂ ಪುಟ್ಟರಂಗಶೆಟ್ಟಿ ಅವರಿಗೆ ಸಚಿವರಾಗಿ ಮಾಡಲಿಲ್ಲ. ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಬೇಕು. ಉಪ್ಪಾರ ಸಮಾಜಕ್ಕೆ ಕನಿಷ್ಠ 3-4 ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಬೇಕು. ಈ ಮೂಲಕ ಹಿಂದುಳಿದ ವರ್ಗಗಳಲ್ಲಿ 2ನೇ ಅತೀ ದೊಡ್ಡ ಸಮಾಜವಾದ ಉಪ್ಪಾರರಿಗೆ ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ರಾಜಕೀಯವಾಗಿ ಹಿಂದುಳಿದ ಸಮುದಾಯ ಉಪ್ಪಾರ ಸಮಾಜವಾಗಿದೆ. ಇಂತಹ ಸಮಾಜದ ಮುಖಂಡರಾದ ಸಿ.ಪುಟ್ಟರಂಗಶೆಟ್ಟಿ ಚಾಮರಾಜನಗರ ಕ್ಷೇತ್ರದಿಂದ 4 ಸಲ ಶಾಸಕರಾಗಿ ಆಯ್ಕೆಯಾಗುವ ಜನಾನುರಾಗಿ ಜನಪ್ರತಿನಿಧಿಯಾಗಿದ್ದಾರೆ. ಇಂತಹ ಹಿರಿಯರಿಗೆ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ರಚನೆಯಾಗುವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂಬುದು ಸಮಸ್ತ ಉಪ್ಪಾರ ಸಮುದಾಯದ ಒತ್ತಾಯವಾಗಿದೆ ಎಂದು ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ಹೊಸನಾಯ್ಕನಹಳ್ಳಿ ಶಿವಮೂರ್ತಿ, ಮಾಜಿ ಉಪ ಮೇಯರ್ ಜಿ.ಮಂಜಮ್ಮ ಹನುಮಂತಪ್ಪ, ರಾಮಪ್ಪ, ರೇವಣಸಿದ್ದಪ್ಪ, ಮಾರುತಿ, ಲೋಕೇಶ ಇತರರು ಇದ್ದರು.
- - --1ಕೆಡಿವಿಜಿ2: