- ಎಸ್‌.ಎಸ್‌. ಮಲ್ಲಿಕಾರ್ಜುನಗೆ ಉಪ ಮುಖ್ಯಮಂತ್ರಿ ಮಾಡಲು ಭೋವಿ ಸಮಾಜ ಆಗ್ರಹ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಭೋವಿ ಸಮಾಜದ ಶಾಸಕರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಹಾಗೂ ದಾವಣಗೆರೆ ಉತ್ತರ ಶಾಸಕ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಉಪ ಮುಖ್ಯಮಂತ್ರಿಯಾಗಿ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಕೆಪಿಸಿಸಿ ನೀತಿ, ಸಂಶೋಧನೆ, ತರಬೇತಿ ವಿಭಾಗದ ರಾಜ್ಯ ಸಂಚಾಲಕ, ಭೋವಿ ಸಮಾಜದ ರಾಜ್ಯ ಯುವ ಮುಖಂಡ ಬಿ.ಎನ್.ವಿನಾಯಕ ಒತ್ತಾಯಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ ಸಮಾಜದ ಮೂವರು ಶಾಸಕರು ಆಯ್ಕೆಯಾಗಿ, ಜನಸೇವೆ, ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದಾರೆ. ಭೋವಿ ಸಮುದಾಯದ ಶಿವರಾಜ ತಂಗಡಗಿ, ಪುಲಿಕೇಶಿ ನಗರದ ಎ.ಸಿ.ಶ್ರೀನಿವಾಸ, ಪಾವಗಡದ ವೆಂಕಟೇಶ ಶಾಸಕರಾಗಿ ಕೆಲ ಮಾಡುತ್ತಿದ್ದು, ಈ ಪೈಕಿ ಕನಿಷ್ಟ ಇಬ್ಬರನ್ನಾದರೂ ಸಚಿವರಾಗಿ ಮಾಡಬೇಕು ಎಂದರು.

ಹಿಂದುಳಿದ ವರ್ಗಗಳ ಮುಂಚೂಣಿಯ ಭೋವಿ ಸಮಾಜವನ್ನು ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ರಾಜಕೀಯ ಪ್ರಾತಿನಿಧ್ಯ ಅತ್ಯಗತ್ಯವಾಗಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರರ ನೂತನ ಸಚಿವ ಸಂಪುಟದಲ್ಲಿ ಭೋವಿ ಸಮಾಜದ ಮೂವರು ಶಾಸಕರ ಪೈಕಿ ಕನಿಷ್ಠ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಈ ಬಗ್ಗೆ ನೂತನ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ, ಹೈಕಮಾಂಡ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ಭೋವಿ ಸಮಾಜವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಖ್ಯ ವಾಹಿನಿಗೆ ಬರಲು ಸಮಾಜಕ್ಕೆ ರಾಜಕೀಯ ಸ್ಥಾನಮಾನ ಬೇಕಾಗಿರುವುದು ಇಂದಿನ ಅವಶ್ಯಕತೆಯಾಗಿದೆ. ಹಾಗಾಗಿ ನಮ್ಮ ಸಮುದಾಯಕ್ಕೆ ಕನಿಷ್ಠ 2 ಸಚಿವ ಸ್ಥಾನಗಳನ್ನು ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಸ್ಪಂದಿಸಬೇಕು. ಕಾಂಗ್ರೆಸ್ ವರಿಷ್ಠರು, ಉನ್ನತ ನಾಯಕತ್ವವು ಭೋವಿ ಸಮಾಜದ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿ, ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಉತ್ತರ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಉಪ ಮುಖ್ಯಮಂತ್ರಿಯಾಗಿ ಮಾಡಬೇಕು. ಈ ಮೂಲಕ ಇಡೀ ಜಿಲ್ಲೆಯ ಪ್ರಗತಿ ವೇಗಗೊಳಿಸಲು, ರಾಜ್ಯದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುವಾಗುವಂತೆ ಡಿಸಿಎಂ ಸ್ಥಾನ ನೀಡಬೇಕು. ಎಸ್ಸೆಸ್ಸೆಂಗೆ ಡಿಸಿಎಂ ಮಾಡುವಂತೆ ಜಿಲ್ಲಾ ಭೋವಿ ಸಮಾಜದಿಂದಲೂ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

ಸಮಾಜದ ಮುಖಂಡರಾದ ದಯಾನಂದ ಹುಚ್ಚವ್ವನಹಳ್ಳಿ, ಬಿ.ಚೌಡೇಶ, ಪ್ರದೀಪ ನೇರ್ಲಿಗೆ, ಕನಕಮೂರ್ತಿ, ಹರೀಶ ಇತರರು ಇದ್ದರು.

- - -

(ಕೋಟ್‌) ಎಸ್‌.ಎಸ್‌. ಮಲ್ಲಿಕಾರ್ಜುನ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಮಧ್ಯ ಕರ್ನಾಟಕದ ಹೆಬ್ಬಾಗಿಲಾದ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಹಾಗೂ ಅಭಿವೃದ್ಧಿ ಯೋಜನೆಗಳು ಸಿಗಲಿದೆ. ಹಾಗಾಗಿ, ಅಭಿವೃದ್ಧಿಯ ಹರಿಕಾರ, ದೂರದೃಷ್ಟಿಯ ನಾಯಕತ್ವದ ಎಸ್‌.ಎಸ್‌. ಮಲ್ಲಿಕಾರ್ಜುನ ಅವರಿಗೆ ಡಿಸಿಎಂ ಹುದ್ದೆ ನೀಡುವುದರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗಲಿವೆ.

- ಬಿ.ಎನ್. ವಿನಾಯಕ, ಯುವ ಮುಖಂಡ.

- - -

-1ಕೆಡಿವಿಜಿ3: ದಾವಣಗೆರೆಯಲ್ಲಿ ಸೋಮವಾರ ಭೋವಿ ಸಮಾಜದ ರಾಜ್ಯ ಯುವ ಮುಖಂಡ ಬಿ.ಎನ್.ವಿನಾಯಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.