ಸಂಭವಾಮಿ ಯುಗೇ ಯುಗೇ ಸಿನಿಮಾ ತೆರೆಗೆ

| Published : Jun 20 2024, 01:11 AM IST

ಸಾರಾಂಶ

ವಿದ್ಯಾವಂತರು, ಯುವ ಜನರು ನಗರ, ಪಟ್ಟಣ ಸೇರುತ್ತಿದ್ದಾರೆ. ಹೀಗೆಲ್ಲಾ ಆಗದೇ, ಹಳ್ಳಿಯಲ್ಲಿದ್ದೇ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಸಾಮಾಜಿಕ ಕಳಕಳಿ ಸಿನಿಮಾ ಇದು

ದಾವಣಗೆರೆ: ಸಂಭವಾಮಿ ಯುಗೇ ಯುಗೇ ಸಿನಿಮಾ ಯುವಕರು ಹಳ್ಳಿಗಳಲ್ಲಿದ್ದುಕೊಂಡೇ ಕೆಲಸ, ಸಾಧನೆ ಮಾಡಬೇಕೆಂಬ ಸಂದೇಶ ಸಾರುವಂಥಹ ಸಿನಿಮಾವಾಗಿದ್ದು, ಜೂ.21ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ದೇಶಕ ಚೇತನ್ ಚಂದ್ರಶೇಖರ ಶೆಟ್ಟಿ ತಿಳಿಸಿದರು.

ನಗರದಲ್ಲಿ ಸಿನಿಮಾ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕತೆ ಸೋಗಿನಲ್ಲಿ ನಮ್ಮ ಹಳ್ಳಿಗಳ ವೈಭವವೇ ಕಣ್ಮರೆಯಾಗುತ್ತಿದೆ. ವಿದ್ಯಾವಂತರು, ಯುವ ಜನರು ನಗರ, ಪಟ್ಟಣ ಸೇರುತ್ತಿದ್ದಾರೆ. ಹೀಗೆಲ್ಲಾ ಆಗದೇ, ಹಳ್ಳಿಯಲ್ಲಿದ್ದೇ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಸಾಮಾಜಿಕ ಕಳಕಳಿ ಸಿನಿಮಾ ಇದು ಎಂದರು.

ಜಯ್ ಶೆಟ್ಟಿ, ನಿಶಾ ರಜಪೂತ್, ಮಧುರಾ ಗೌಡ, ಸುಧಾರಾಣಿ, ಬಲರಾಜ ವಾಡಿ, ಅಶ್ವಿನಿ ಹಾಸನ್, ಭವ್ಯ, ಅಶೋಕಕುಮಾರ, ಅಭಯ್ ಪುನೀತ್, ಪ್ರಮೋದ ಶೆಟ್ಟಿ ನಟಿಸಿದ್ದಾರೆ. ಇಡೀ ಕುಟುಂಬ ಸದಸ್ಯರು ಒಟ್ಟಿಗೆ ಕುಳಿತು ನೋಡುವಂತಹ ಸಂದೇಶ ಸಾರುವ ಸಿನಿಮಾ ನೀಡಿದ್ದೇವೆ. ವಿಭಿನ್ನ ಕಮರ್ಷಿಯಲ್ ಕಾನ್ಸೆಫ್ಟ್‌ ಚಿತ್ರದಲ್ಲಿ ಕೃಷ್ಣನ ಮತ್ತು ಅರ್ಜುನನ ಹೋಲುವ ಪಾತ್ರಗಳೂ ಇವೆ. ಕೃಷಿ ಮತ್ತು ರೈತರ ಮೇಲೆ ನಿರ್ಮಿಸಿದ ಚಿತ್ರ ಇದು. ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕೆಂಬುದು ನಾಯಕನ ಗುರಿಯಾಗಿರುತ್ತದೆ. ಮುಂದೆ ಏನಾಗುತ್ತದೆಂಬುದೇ ಚಿತ್ರದ ತಿರುಳು ಎಂದರು.

ಪ್ರತಿಭಾ ನಿರ್ಮಾಣದ, ದಿನೇಶ್ ರಾಜನ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ರಚನೆ, ಚಿತ್ರಕತೆ, ನಿರ್ದೇಶನ ಚೇತನ್ ಚಂದ್ರಶೇಖರ್ ಶೆಟ್ಟಿಯವರದ್ದು. ರಾಜು ಹೆಮ್ಮಿಗೆ ಪುರ ಛಾಯಾಗ್ರಹಣವಿದೆ. ಪುರಾನ್ ಶೆಟ್ಟಿಗಾರ್ ಸಂಗೀತ, ಪ್ರಾಂಕ್ಲಿನ್ ರಾಖಿ ಹಿನ್ನೆಲೆ ಸಂಗೀತವಿದೆ. ಸಿ.ನರಸಿಂಹ ಸಾಹಸ ನಿರ್ದೇಶನವಿದ್ದು, ಗೀತಾ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಕಲೆ ಪ್ರಶಾಂತ ಗೌಡ, ಸಾಹಿತ್ಯ ಅರಸು ಅಂತಾರೆ, ಉಮೇಶ ಪಿಲಿಕುಡೇಲು, ಮಹೇಶ ರಾಮರದ್ದಾಗಿದೆ ಎಂದರು.

ಚಿತ್ರದ ನಾಯಕ ಜಯಶೆಟ್ಟಿ ಮಾತನಾಡಿ, 1975 ನನ್ನ ಮೊದಲ ಸಿನಿಮಾವಾಗಿದ್ದರೆ, ಸಂಭವಾಮಿ ಯುಗೇ ಯುಗೇ 2ನೇ ಚಿತ್ರ. ಇದೊಂದು ಕೌಟುಂಬಿಕ ಚಿತ್ರವಾಗಿದೆ. ಉತ್ತಮ ಸಂದೇಶ ಸಾರುವ ಸಿನಿಮಾವೆಂಬ ಸಂತೃಪ್ತಿ ನಮ್ಮ ತಂಡದ್ದು. ರಾಜ್ಯಾದ್ಯಂತ ಜೂ.21ರಂದು 100 ಚಿತ್ರ ಮಂದಿರಗಳಲ್ಲಿ ತೆರೆಗೆ ಬರಲಿದೆ. ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಬಂದು, ಚಿತ್ರವನ್ನು ವೀಕ್ಷಿಸುವ ಮೂಲಕ ನಮ್ಮ ತಂಡದ ಪ್ರಯತ್ನವನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಚಿತ್ರದ ನಾಯಕಿ ನಿಶಾ ರಜಪೂತ್ ಮಾತನಾಡಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಏಳೆಂಟು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಮೂಲತಃ ವಿಜಾಪುರ ಜಿಲ್ಲೆಯ ತಾವು ಸಿನಿಮಾದಲ್ಲಿ ದಕ್ಷಿಣ ಕರ್ನಾಟಕದ ಹುಡುಗಿ ಪಾತ್ರ ಮಾಡಿದ್ದೇನೆ. ಮಂಡ್ಯ, ಚನ್ನಪಟ್ಟಣ, ರಾಮನಗರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಿದ ಸಿನಿಮಾ ಇದು. ರಾಜಲಕ್ಷ್ಮೀ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡಲಾಗಿದೆ ಎಂದರು.

ಚಿತ್ರ ತಂಡದ ಸದಸ್ಯರು ಇದ್ದರು.