ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಕಾರು ಅಪಘಾತ

| Published : Jun 20 2024, 01:10 AM IST

ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಕಾರು ಅಪಘಾತ
Share this Article
  • FB
  • TW
  • Linkdin
  • Email

ಸಾರಾಂಶ

ಎಂದಿನಂತೆ ಮಣಿ ಸರ್ಕಾರ ಬೆಳಗ್ಗೆ ಜಿಮ್ ಮುಗಿಸಿಕೊಂಡು ತಮ್ಮ ಆಡಿ ಕಾರಿನಲ್ಲಿ ಮನೆ ಕಡೆಗೆ ಹೊರಟಿದ್ದರು. ಎಸ್.ನಿಜಲಿಂಗಪ್ಪ ಗಡಿಯಾರ ವೃತ್ತದ ಬಳಿ ಮಣಿ ಚಾಲನೆ ಮಾಡುತ್ತಿದ್ದ ಆಡಿ ಕಾರು ನಿಯಂತ್ರಣ ತಪ್ಪಿ, ವೃತ್ತದ ತಡೆಗೋಡೆಗೆ ರಭಸವಾಗಿ ಡಿಕ್ಕಿ ಹೊಡೆದಿದೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಮ್ ಮುಗಿಸಿ ಮನೆ ಕಡೆಗೆ ಹೊರಟಿದ್ದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್‌ ಅವರ ಐಷಾರಾಮಿ ಆಡಿ ಕಾರು ದಾವಣಗೆರೆ ರಿಂಗ್ ರಸ್ತೆ ಗಡಿಯಾರ ವೃತ್ತದ ತಡೆಗೋಡೆಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಎರಡು ಬೈಕ್ ಗಳ ಸವಾರರು ತೀವ್ರ ಗಾಯಗೊಂಡ ಘಟನೆ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.

ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿಕಂಠ ಸರ್ಕಾರ(39 ವರ್ಷ), ಬೈಕ್ ಸವಾರರಾದ ಸಿ.ಹಾಲೇಶ(43) ಹಾಗೂ ವಿ.ರವಿಕುಮಾರ ಗಾಯಗೊಂಡಿದ್ದು, ಮೂವರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

ಎಂದಿನಂತೆ ಮಣಿ ಸರ್ಕಾರ ಬೆಳಗ್ಗೆ ಜಿಮ್ ಮುಗಿಸಿಕೊಂಡು ತಮ್ಮ ಆಡಿ ಕಾರಿನಲ್ಲಿ ಮನೆ ಕಡೆಗೆ ಹೊರಟಿದ್ದರು. ಎಸ್.ನಿಜಲಿಂಗಪ್ಪ ಗಡಿಯಾರ ವೃತ್ತದ ಬಳಿ ಮಣಿ ಚಾಲನೆ ಮಾಡುತ್ತಿದ್ದ ಆಡಿ ಕಾರು ನಿಯಂತ್ರಣ ತಪ್ಪಿ, ವೃತ್ತದ ತಡೆಗೋಡೆಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪಕ್ಕದಲ್ಲಿ ಚಲಿಸುತ್ತಿದ್ದ ಇಬ್ಬರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದ್ದರಿಂದ ಇಬ್ಬರೂ ತೀವ್ರ ಗಾಯಗೊಂಡಿದ್ದಾರೆ. ವೇಗದಿಂದ ಡಿಕ್ಕಿ ಹೊಡೆದ ಕಾರು ಜಾರಿಕೊಂಡು ಹಳೆ ಕಾರು ಶೋರೂಂಗೆ ನುಗ್ಗಿದ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೋಡುಗರನ್ನು ಬೆಚ್ಚಿ ಬೀಳಿಸುವಂತಿದೆ.

ಅಪಘಾತದಲ್ಲಿ ಶ್ರೀರಾಮ ಸೇನೆ ಮಣಿ ಕಾಲು, ತಲೆ, ಕಿವಿಯ ಭಾಗ, ಹಾಗೂ ದೇಹದ ವಿವಿಧ ಭಾಗಕ್ಕೆ ಪೆಟ್ಟು ಬಿದ್ದಿದೆ. ಎಂದಿನಂತೆ ಬೆಳಗ್ಗೆಯೇ ಕೆಲಸಕ್ಕೆಂದು ಹೊರಟಿದ್ದ ತರಗಾರ ಹಾಲೇಶನ ಎಡಗಾಲಿಗೆ ತೀವ್ರಗಾಯವಾಗಿದೆ. ಕ್ಲಾಕ್ ಟವರ್ ಬಳಿ ತರಕಾರಿ ಒಯ್ಯಲು ಬಂದಿದ್ದ ರವಿಕುಮಾರನ ಕಾಲಿಗೂ ತರಚು ಗಾಯಗಳಾಗಿದ್ದು, ಮೂವರಿಗೂ ಜಿಲ್ಲಾಸ್ಪತ್ರೆ ಎಸ್ಸೆಸ್ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕೊಡಿಸಲಾಗುತ್ತಿದೆ. ಅದೇ ವೃತ್ತದಲ್ಲಿ ನಿಂತಿದ್ದ ಮಾಯಕೊಂಡ ಶಾಸಕ ಕೆ.ಎಸ್‌.ಬಸವಂತಪ್ಪ ಹಾಗೂ ಪ್ರತ್ಯಕ್ಷದರ್ಶಿಗಳು ಗಾಯಾಳುಗಳ ನೆರವಿಗೆ ಧಾವಿಸಿ ಮಾನವೀಯತೆ ಮೆರೆದರು.

ಸಾಕಷ್ಟು ಜನದಟ್ಟಣೆ ರಸ್ತೆಯಲ್ಲಿ ಗಂಭೀರ ಅಪಘಾತವಾಗಿರುವುದು, ಶಾಲೆಗೆ ಹೋಗುವವರು, ಕೂಲಿ ಕೆಲಸಕ್ಕೆ ಹೋಗುವವರು, ಸೊಪ್ಪು ತರಕಾರಿ ತರಲು ಬರುವವರು, ಕೆಲಸಕ್ಕೆ ಹೊರಡುವವರು, ವಾಕಿಂಗ್ ಹೋಗುವವರು ಹಾಗೂ ಮೊಮ್ಮಕ್ಕಳನ್ನು ಕರೆ ತರುವ ವಯೋವೃದ್ಧರಿಗೆ ಇದು ಎಚ್ಚರಿಕೆ ಗಂಟೆಯೂ ಆಗಿದೆ.

ಬಹುತೇಕ ವೃತ್ತಗಳಲ್ಲಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಬಸ್ಸು, ಲಾರಿ ಲಘು ವಾಹನ ಮತ್ತು ಕಾರುಗಳ ಚಾಲಕರು ಎಗ್ಗಿಲ್ಲದೇ ಅಜಾಗರೂಕತೆಯಿಂದ ಅತೀ ವೇಗದಲ್ಲಿ ವಾಹನ ಚಾಲನೆ ಮಾಡುತ್ತಾರೆ. ಇನ್ನಾದರೂ ಪೊಲೀಸ್ ಇಲಾಖೆ ಇವಕ್ಕೆಲ್ಲಾ ಕಡಿವಾಣ ಹಾಕಬೇಕಿದೆ. ಹಾಗೆಯೇ ದ್ವಿಚಕ್ರ ವಾಹನಗಳು ಮತ್ತು ದುಬಾರಿ ಬೈಕ್‌ಗಳಿಗೆ ನಂಬರ್ ಪ್ಲೇಟ್ ಇಲ್ಲದೇ ಚಲಾಯಿಸುವ ವಾಹನ ಸವಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು.

ಕ್ಲಾಕ್ ಟವರ್ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ, ಆಡಿ ಕಾರಿನ ಬದಲು ಬೇರೆ ಯಾವುದದರೂ ಕಾರು ಆಗಿದ್ದರೆ ಅಪ್ಪಚ್ಚಿಯಾಗಿ, ಸ್ಥಳದಲ್ಲೇ ಚಾಲಕನ ಜೀವಕ್ಕೆ ಕುತ್ತು ಬರುತ್ತಿತ್ತು. ಅದೃಷ್ಟವಶಾತ್‌ ಆಡಿ ಕಾರಿನ ಏರ್ ಬ್ಯಾಗ್‌ ತೆರೆದುಕೊಂಡಿದ್ದು ಪ್ರಾಣಪಾಯವಾಗುವುದನ್ನು ತಡೆದಿದೆ ಎಂದು ಅಪಘಾತದ ದೃಶ್ಯಾವಳಿ ನೋಡಿದ ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಅಪಘಾತದ ಸಂಬಂಧ ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಬಗ್ಗೆ ಭರವಸೆ ನೀಡಿದ್ದಾರೆ.