ಕುಂಭಮೇಳದಲ್ಲೂ ಸತೀಶ ಜಾರಕಿಹೊಳಿ ಸಿಎಂ ಕೂಗು

| Published : Feb 04 2025, 12:31 AM IST

ಸಾರಾಂಶ

ಲೋಕೋಪಯೋಗಿ ಸಚಿವ ಜಾರಕಿಹೊಳಿ ಅವರು ಸಿಎಂ ಆಗಲೆಂದು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಚಿವರ ಅಭಿಮಾನಿಗಳು ಹರಕೆ ಹೊತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಲೋಕೋಪಯೋಗಿ ಸಚಿವ ಜಾರಕಿಹೊಳಿ ಅವರು ಸಿಎಂ ಆಗಲೆಂದು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಚಿವರ ಅಭಿಮಾನಿಗಳು ಹರಕೆ ಹೊತ್ತಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ನಡುವೆ ಕಿತ್ತಾಟ ನಡೆಯುತ್ತಿದ್ದು, ಸಚಿವ ಸತೀಶ ಜಾರಕಿಹೊಳಿ ಅವರು 2028ಕ್ಕೆ ನಾನು ಸಿಎಂ ಅಭ್ಯರ್ಥಿ ಎಂದು ಬಹಿರಂಗವಾಗಿಯೇ ಹೇಳುತ್ತ ಬಂದಿದ್ದಾರೆ. ಈ ಮಧ್ಯೆ ಅಭಿಮಾನಿಗಳಿಂದ ಆಗಾಗ ಸತೀಶ ಜಾರಕಿಹೊಳಿ ಮುಂದಿನ ಸಿಎಂ ಎಂಬ ಕೂಗು ಕೇಳಿಬರುತ್ತಿದೆ.

ಕುಂಭಮೇಳದಲ್ಲಿ ಹರಕೆ ಹೊತ್ತ ಅಭಿಮಾನಿಗಳು:

ಸಚಿವ ಸತೀಶ ಜಾರಕಿಹೊಳಿ ಅಭಿಮಾನಿಗಳು ಈಗ ದೇವರ ಮೊರೆ ಹೋಗುತ್ತಿದ್ದಾರೆ. ಮೂವರು ಅಭಿಮಾನಿಗಳು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಅವರ ಭಾವಚಿತ್ರ ಹಿಡಿದು ಸಚಿವ ಸತೀಶ ಜಾರಕಿಹೊಳಿ ಮುಂದಿನ ಸಿಎಂ ಆಗಲೆಂದು ಹರಕೆ ಹೊತ್ತು ಗಮನ ಸೆಳೆದಿದ್ದಾರೆ.

ಶಬರಿಮಲೆಯಲ್ಲೂ ಹರಕೆ ಹೊತ್ತಿದ್ದ ಅಭಿಮಾನಿಗಳು: ಈ ಹಿಂದೆ ಸತೀಶ ಜಾರಕಿಹೊಳಿ ಸಿಎಂ ಆಗಲೆಂದು ಅಭಿಮಾನಿಯೊಬ್ಬರು ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತು ಸುದ್ದಿಯಾಗಿದ್ದರು. ಗೋಕಾಕ ಪಟ್ಟಣದ ಸಂತೋಷ ಸಂಕಪಾಳೆ ಎಂಬ ಮಾಲಾಧಾರಿ ಸತೀಶ ಜಾರಕಿಹೊಳಿ ಮುಂದಿನ ಸಿಎಂ ಆಗಬೇಕು ಎಂದು ಹರಕೆ ಹೊತ್ತು ಅಯ್ಯಪ್ಪಸ್ವಾಮಿ ದೇವಸ್ಥಾನ ಆವರಣದಲ್ಲಿ ಅವರ ಫೋಟೋ ತಲೆಮೇಲೆ ಹೊತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲ ಆಗಿತ್ತು.

ಮೈಕೊಡವಿ ನಿಂತ ಸಾಹುಕಾರ್:‌ ಕರ್ನಾಟಕದಲ್ಲಿ ಮೂರು ಉಪಚುನಾವಣೆಗಳು ಮುಗಿದು ಕಾಂಗ್ರೆಸ್ ಗೆಲುವು ಸಾಧಿಸಿದ ಬಳಿಕ ಮುಖ್ಯಮಂತ್ರಿ ಬದಲಾವಣೆ ಜಟಾಪಟಿ ಜೋರಾಗಿ ನಡೆದಿದೆ. ಮುಖ್ಯಮಂತ್ರಿ ಬದಲಾವಣೆ ಮಾತೇ ಇಲ್ಲ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎನ್ನುತ್ತಿದ್ದ ಕಾಂಗ್ರೆಸ್ ನಾಯಕರು ಇದೀಗ ಎರಡು ಬಣಗಳಾಗಿ ತೀವ್ರ ಸಿಎಂ ಸ್ಥಾನಕ್ಕಾಗಿ ತೀವ್ರ ಕಸರತ್ತು ನಡೆಸಿದ್ದಾರೆ. ಅದರಲ್ಲೂ ಸಿದ್ದರಾಮಯ್ಯ-ಡಿಕೆ ಶಿವಕುಮಾರ್‌ ಪರಸ್ಪರ ದಾಳ ಉರುಳಿಸುತ್ತಲೇ ಇದ್ದಾರೆ. ಈ ನಡುವೆ ನಾನು ಮುಂದಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಸಚಿವ ಸತೀಶ ಜಾರಕಿಹೊಳಿಯವರು ಸಹ ಮೈಕೊಡವಿ ನಿಂತಿರುವುದು ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಎನ್ನುವ ಕುತೂಹಲ ಕೆರಳಿಸಿದೆ. ಇದರ ಜೊತೆ ಇವರ ಅಭಿಮಾನಿಗಳು ಕುಂಭಮೇಳ-ಶಬರಿಮಲೆ ಸೇರಿದಂತೆ ವಿವಿಧೆಡೆ ಹರಕೆ ಹೊತ್ತು ಗಮನ ಸೆಳೆಯುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.