ವರ್ತಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಹೋರಾಟ

| Published : Feb 04 2025, 12:31 AM IST

ವರ್ತಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಹಾರೋಹಳ್ಳಿ: ತಾಲೂಕು ಆಡಳಿತ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಮಳಿಗೆಗಳನ್ನು ತೆರವುಗೊಳಿಸಿ ಬೀದಿ ಬದಿಯಲ್ಲಿ ಹೂ, ಹಣ್ಣು ತರಕಾರಿ ಮಾರಿ ಜೀವನ ನಡೆಸುತ್ತಿದ್ದ ಬಡ ವ್ಯಾಪಾರಿಗಳನ್ನು ಬೀದಿಗೆ ತಳ್ಳಿದೆ ಎಂದು ಕೆಎಸ್‌ಐಸಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಗೌತಮ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಹಾರೋಹಳ್ಳಿ: ತಾಲೂಕು ಆಡಳಿತ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಮಳಿಗೆಗಳನ್ನು ತೆರವುಗೊಳಿಸಿ ಬೀದಿ ಬದಿಯಲ್ಲಿ ಹೂ, ಹಣ್ಣು ತರಕಾರಿ ಮಾರಿ ಜೀವನ ನಡೆಸುತ್ತಿದ್ದ ಬಡ ವ್ಯಾಪಾರಿಗಳನ್ನು ಬೀದಿಗೆ ತಳ್ಳಿದೆ ಎಂದು ಕೆಎಸ್‌ಐಸಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಗೌತಮ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಮಳಿಗೆಗಳ ತೆರವು ಕ್ರಮ ವಿರೋಧಿಸಿ ನಡೆದ ಅರಬೆತ್ತಲೆ ಪ್ರತಿಭಟನಾ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಮಾರು 30 ವರ್ಷಗಳ ಹಿಂದೆ ಬಡವರು ಹೂ, ಹಣ್ಣು, ತರಕಾರಿ ಮಾರುವವರು ಮಳಿಗೆಗಳನ್ನು ಬಾಡಿಗೆ ಪಡೆದು ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಆದರೆ ತಾಲೂಕು ಆಡಳಿತ ಯಾವುದೇ ತಿಳಿವಳಿಕೆ ನೋಐಐಟಿಸ್ ನೀಡದೆ ವರ್ತಕರ ಜೊತೆ ಚರ್ಚೆ ಮಾಡಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಮಳಿಗೆ ತೆರವುಗೊಳಿಸಿ ಶಾಸಕರು ಹಾಗೂ ತಾಲೂಕು ಆಡಳಿತ, ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ಮೂರು ನಾಲ್ಕು ದಶಕಗಳಿಂದಲೂ ಮುಂಗಡ ಹಣ ಪಾವತಿ ಮಾಡಿ ಮಳಿಗೆಗಳನ್ನು ಪಡೆದು, ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಕ್ಷೇತ್ರದ ಶಾಸಕರು ಮತ್ತು ಅಧಿಕಾರಿಗಳು, ವರ್ತಕರನ್ನು ಹೆದರಿಸಿ, ಬೆದರಿಸಿ ದೌರ್ಜನ್ಯ ಮಾಡುತ್ತಿದ್ದಾರೆ. ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ ಸರ್ವಾಧಿಕಾರಿ ಧೋರಣೆಗಳನ್ನು ಸಹಿಸುವುದಿಲ್ಲ ಎಂದು ಪರೋಕ್ಷವಾಗಿ ಶಾಸಕರ ವಿರುಧ್ಧ ಹರಿಹಾಯ್ದರು. ಅಧಿಕಾರಿಗಳು ವರ್ತಕರಿಗೆ ನೋಟಿಸ್ ಕೊಟ್ಟು ಚರ್ಚೆ ಮಾಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತು. ಆದರೆ ಮಳಿಗೆ ತೆರವುಗೊಳಿಸಿ ನಂತರ ನೋಟಿಸ್ ಕೊಟ್ಟಿದ್ದಾರೆ. ನಾವು ಯಾವ ದೇಶದಲ್ಲಿ ಯಾವ ಸಂವಿಧಾನದ ಅಡಿಯಲ್ಲಿ ಜೀವನ ಮಾಡುತ್ತಿದ್ದೇವೆ ಎಂಬುದೇ ತಿಳಿಯದಂತಾಗಿದೆ. ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ಹೊಸ ಮಳಿಗೆಗಳಲ್ಲಿ ಹಳೆಯ ವರ್ತಕರಿಗೇ ಕೊಡಬೇಕು. ಇದು ಸಾಂಕೇತಿಕ ಹೋರಾಟವಷ್ಟೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗೂಂಡಾ ಸಂಸ್ಕೃತಿ ಬೇಡ:

ಮುಖಂಡ ಮಲ್ಲಪ್ಪ ಮಾತನಾಡಿ, ನಗರದಲ್ಲಿ 200ಕ್ಕೂ ಹೆಚ್ಚು ಮಳಿಗೆಗಳಲ್ಲಿ ನಾಲ್ಕು ದಶಕಗಳಿಂದ ವ್ಯಾಪಾರ ಮಾಡುತ್ತಿದ್ದ ವರ್ತಕರಿಗೂ ನೋಟಿಸ್ ಕೊಡದೆ ಶಾಸಕರು, ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗುಂಡಾ ರೀತಿಯಲ್ಲಿ ವರ್ತಿಸಿ ಮಳಿಗೆ ತೆರವುಗೊಳಿಸಿ ಸಾವಿರಾರು ಜನರ ಅನ್ನ ಕಿತ್ತುಕೊಂಡಿದ್ದಾರೆ. ಇದರ ವಿರುದ್ಧ ಹಾರೋಹಳ್ಳಿ ತಾಲೂಕಿನ ಜನ ತಿರುಗಿ ಬೀಳುವ ಕಾಲ ದೂರವಿಲ್ಲ. ಇಂದು ನಾವು ಮನೆಮನೆಗಳಿಗೆ ಕರಪತ್ರ ನೀಡಿ ಸಾಂಕೇತಿಕವಾಗಿ ಹೋರಾಟ ಹಮ್ಮಿಕೊಂಡಿದ್ದೇವೆ ಮುಂದಿನ ಬುಧವಾರದ ವರೆಗೂ ಗಡುವು ಕೊಟ್ಟಿದ್ದೇವೆ. ಅಷ್ಟರೊಳಗೆ ವರ್ತಕರಿಗೆ ವ್ಯಾಪಾರ ನಡೆಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡಬೇಕು ಯಾವುದೇ ಮಳಿಗೆ ತೆರವುಗೊಳಿಸುವ ಮೊದಲು ನೋಟಿಸ್ ಕೊಟ್ಟು ಕಾನೂನು ರೀತಿ ಕ್ರಮ ವಹಿಸಬೇಕು ಅದನ್ನು ಬಿಟ್ಟು ರೌಡಿ ಸಂಸ್ಕೃತಿಯಲ್ಲಿ ಬಡವರಿಗೆ ಅನ್ಯಾಯ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಮುರಳಿಧರ್, ಬೇಕರಿ ಸುಧಾಕರ್, ಬಕ್ಷಿ, ರಾಘವೇಂದ್ರ, ಎಚ್. ವಿ. ಸುರೇಶ್, ಚಕ್ರ ಪಾಣಿ, ಜಗದೀಶ್, ಆಕಾಶ್, ಸ್ಟುಡಿಯೋ ಉಮೇಶ್, ಎಚ್.ಎಮ್. ಮುನಿರಾಜು, ಉಮಾಪತಿ, ಶಿವಲಿಂಗ ಮೂರ್ತಿ, ಎನ್. ರಮೇಶ್, ಆಂಜನಪ್ಪ ಸೇರಿದಂತೆ ವರ್ತಕರು ಭಾಗವಹಿಸಿದ್ದರು.

2ಕೆಆರ್ ಎಂಎನ್ 6.ಜೆಪಿಜಿ

ಹಾರೋಹಳ್ಳಿಯಲ್ಲಿ ಮಳಿಗೆ ತೆರವು ಕ್ರಮ ಖಂಡಿಸಿ ಅರಬೆತ್ತಲೆ ಪ್ರತಿಭಟನೆ ನಡೆಯಿತು.