ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಹನೂರು ತಾಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ರೈತ ಸಂಘದ ಮುಖಂಡರುಗಳು ಸೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಪಟ್ಟಣದ ಪೆಟ್ರೋಲ್ ಬಂಕ್ ಸಮೀಪ ಜಮಾಯಿಸಿದ ರೈತ ಮುಖಂಡರು ಪ್ರತಿಭಟನೆ ಹೊರಟು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಖಾಸಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚನೆ ಮಾಡಿ ಏಕೀಕರಣ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಗೌಡಳ್ಳಿ ಸೋಮಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಗೌಡಳ್ಳಿ ಸೋಮಣ್ಣ ಮಾತನಾಡಿ, ಹನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿನಿಂದ ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ಬೆಳೆಗಳೆಲ್ಲ ಒಣಗುತ್ತಿದೆ. ವಿದ್ಯುತ್ ಇಲ್ಲದ ಪರಿಣಾಮ ರಾತ್ರಿ ವೇಳೆ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿದೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಎಇಇ ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒಣಗಿರುವ ಬೆಳಗೆ ಪರಿಹಾರ ನೀಡಬೇಕು, ಗುಂಡಾಲ್ ಜಲಾಶಯ ವ್ಯಾಪ್ತಿಯಲ್ಲಿ ನೀರು ಗಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ್ ಎಂಭವರು ರೈತರ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ಏಕಾಏಕಿ ನೀರು ಬಿಡುವುದು, ಗೇಟ್ ಬಂದು ಮಾಡುವುದನ್ನು ಮಾಡುತ್ತಿದ್ದಾರೆ. ಈ ಕೂಡಲೇ ಅವರನ್ನು ಬದಲಾಯಿಸಿ ರೈತರಿಗೆ ನೀರು ಬಿಡುವ ಮೂಲಕ ಅನುಕೂಲ ಕಲ್ಪಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಒತ್ತಾಯಿಸಿದರು.ರೈತ ಮುಖಂಡ ಮಹದೇವ ಸ್ವಾಮಿ ಮಾತನಾಡಿ, ಹನೂರು ತಾಲೂಕಿನ ಎಲ್ಲೇಮಾಳ, ಬೂದುಗುಪ್ಪೆ, ಕೆವಿಎನ್ ದೊಡ್ಡಿ, ಡಿಎಂ ಸಮುದ್ರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿನಿಂದ ಸಮರ್ಪಕ ವಿದ್ಯುತ್ ಪೂರೈಕೆ ಆಗದೆ ಇರುವುದರಿಂದ ಬೆಳೆಗಳೆಲ್ಲ ಒಣಗುತ್ತಿದೆ .ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ವಿದ್ಯುತ್ ಸಮಸ್ಯೆ ಬಗೆಹರಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಮಂಟೇಸ್ವಾಮಿ ಮಾತನಾಡಿ, ಬಿಎಂ ಸಮುದ್ರ ಗ್ರಾಮದಲ್ಲಿ ರೈತರಿಗೆ ನೀಡಬೇಕಾಗಿರುವ ಥ್ರೀ ಫೇಸ್ ವಿದ್ಯುತ್ ಸರಬರಾಜು ಸರಿಯಾಗಿ ಪೂರೈಕೆ ಮಾಡದೇ ಇರುವುದರಿಂದ ವೋಲ್ಟೇಜ್ ಕಡಿಮೆಯಾಗಿ ಮೋಟಾರ್ ಗಳು ಸುಟ್ಟು ಹೋಗುತ್ತಿದೆ . ಇದಲ್ಲದೆ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಗಳು ಹತ್ತಿರ ಬರುತ್ತಿರುವುದರಿಂದ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ನಿಮ್ಮ ಮಕ್ಕಳು ನಗರ ಪ್ರದೇಶಗಳಲ್ಲಿ ಚೆನ್ನಾಗಿ ಓದುತ್ತಿದ್ದಾರೆ ಆದರೆ ನಮ್ಮ ಮಕ್ಕಳ ಸ್ಥಿತಿ ಹೇಗೆ ಎಂದು ಪ್ರಶ್ನೆ ಮಾಡಿದರು.ಕ್ರಮ ಕೈಗೊಳ್ಳಲು ಭರವಸೆ:
ಇಇ ತಬುಸಮಾ ಮಾತನಾಡಿ, ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಟಿಸಿ ಗಳಿಗೆ ಕೌದಳ್ಳಿ ವಿದ್ಯುತ್ ಉಪ ಕೇಂದ್ರದಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಅಂತರ ಹೆಚ್ಚು ಇರುವುದರಿಂದ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಎರಡು ಮಾರ್ಗಗಳನ್ನು ಕಂಡುಕೊಂಡಿದ್ದೇವೆ. ಇನ್ನು 15 ದಿನಗಳ ಒಳಗೆ ನಿಮ್ಮ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲಾಗುವುದು, ಅಲ್ಲಿಯವರೆಗೆ ಓಎಲ್‌ಪಿ ಸೆಟ್ಟಿಂಗ್ ಹೆಚ್ಚು ಮಾಡಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದರು. ಪಿಜಿ ಪಾಳ್ಯ ಗ್ರಾಮದ ರೈತ ಮುಖಂಡ ಪ್ರಭುಸ್ವಾಮಿ ಮಾತನಾಡಿ, ಪಿಜಿ ಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂರು ಮತ್ತು ನಾಲ್ಕನೇ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಬಗೆಹರಿಸುವಂತೆ ಅಧ್ಯಕ್ಷರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ, ಇದಲ್ಲದೆ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಗಬ್ಬು ನಾರುತ್ತಿದೆ. ಬೇಸಿಗೆ ಆಗಮಿಸುತ್ತಿರುವುದರಿಂದ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಅತಿ ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಚಿಕ್ಕರಾಜು ಕಾರ್ಯದರ್ಶಿ ಪವನ್, ರೈತ ಮುಖಂಡರುಗಳಾದ ಪ್ರಭುಸ್ವಾಮಿ, ನವೀನ್ ಮಹದೇವಸ್ವಾಮಿ, ಸುರೇಶ್, ಶಿವಕುಮಾರ್ ಪವನ್ ಪುಟ್ಟಸ್ವಾಮಿ ಮಲ್ಲಿಕ್ ಸುಂದರಪ್ಪ ಪ್ರಭು ಸೇರಿದಂತೆ 50ಕ್ಕೂ ಹೆಚ್ಚು ರೈತ ಮುಖಂಡರು ಹಾಜರಿದ್ದರು.