ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಎಲ್ಲ ರೈತರು ಮಣ್ಣಿನ ಸವಕಳಿಯನ್ನು ತಡೆದು ಫಲವತ್ತಾದ ಮಣ್ಣನ್ನು ಹೊಂದಿ ಉತ್ತಮವಾದ ಇಳುವರಿಯನ್ನು ಪಡೆಯಬೇಕೆಂದರು.

ಗದಗ: ಕೃಷಿಗೆ ಮಣ್ಣು ಅತ್ಯಂತ ಮಹತ್ವಪೂರ್ಣ ನೈಸರ್ಗಿಕ ಸಂಪನ್ಮೂಲವಾಗಿದ್ದು, ಮುಂದಿನ ಪೀಳಿಗೆಗೆ ಆರೋಗ್ಯಕರ ಮಣ್ಣನ್ನೇ ಆಸ್ತಿಯಾಗಿ ಉಳಿಸಬೇಕು ಎಂದು ಪಶು ಸಂಗೋಪನಾ ಉತ್ಕೃಷ್ಟತಾ ಕೇಂದ್ರದ ಜಂಟಿ ಆಯುಕ್ತ ಡಾ. ಹೊಳಬಸಪ್ಪ ತಿಳಿಸಿದರು.

ತಾಲೂಕಿನ ಹುಲಕೋಟಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಣ್ಣಿನಲ್ಲಿನ ಸಾವಯವ ಇಂಗಾಲ ದಿನಂಪ್ರತಿ ಕ್ಷೀಣಿಸುತ್ತಿದ್ದು, ನಾವು ಮಣ್ಣಿಗೆ ಸೇರಿಸುವ ಗೊಬ್ಬರವನ್ನು ಮಣ್ಣಿನ ಪರೀಕ್ಷೆಗೆ ಅನುಗುಣವಾಗಿ ಶಿಫಾರಸ್ಸಿನ ಪ್ರಕಾರ ಸೇರಿಸಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಎಲ್ಲ ರೈತರು ಮಣ್ಣಿನ ಸವಕಳಿಯನ್ನು ತಡೆದು ಫಲವತ್ತಾದ ಮಣ್ಣನ್ನು ಹೊಂದಿ ಉತ್ತಮವಾದ ಇಳುವರಿಯನ್ನು ಪಡೆಯಬೇಕೆಂದರು.

ಪಶು ವೈದ್ಯಾಧಿಕಾರಿ ಡಾ. ಜಗದೀಶ ಮಟ್ಟಿ ಮಾತನಾಡಿ, ಸಕಲ ಜೀವರಾಶಿಗಳಿಗೆ ಆಹಾರವನ್ನು ಸದೃಢವಾದ ಮಣ್ಣಿನಿಂದ ಬೆಳೆಯುವುದರಿಂದ ಜಾನುವಾರುಗಳಿಗೆ ಉತ್ತಮವಾದ ಆಹಾರವನ್ನು ನೀಡಿ ಜಾನುವಾರುಗಳ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ. ಸುಧಾ ಮಂಕಣಿ ಮಾತನಾಡಿ, ರೈತರು ಯಥೇಚ್ಛವಾಗಿ ರಸಗೊಬ್ಬರಗಳನ್ನು ಬಳಸುತ್ತಿದ್ದಾರೆ. ಇದರಿಂದ ಮಣ್ಣಿನ ರಚನೆ ಹಾಗೂ ಆರೋಗ್ಯ ಕೆಡುವುದಲ್ಲದೇ, ದೀರ್ಘಕಾಲೀನವಾಗಿ ಇಳುವರಿಯಲ್ಲಿಯೂ ವ್ಯತ್ಯಾಸವಾಗುತ್ತದೆ. ಆದ್ದರಿಂದ ಪ್ರತಿವರ್ಷ ರೈತರು ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರಗಳನ್ನು ಮಣ್ಣಿಗೆ ಸೇರಿಸಬೇಕು ಎಂದರು.

ಶ್ರೇಷ್ಠ ಕೃಷಿಕ ಮಹಿಳಾ ಪ್ರಶಸ್ತಿ ವಿಜೇತರಾದ ಸುಧಾ ಬೇವಿನಮರದ ಅವರು, ತಮ್ಮ ಕ್ಷೇತ್ರದಲ್ಲಿ ಮಣ್ಣಿನ ಆರೋಗ್ಯ ಕಾಪಾಡಿಕೊಂಡು ಬಂದ ಅನುಭವಗಳನ್ನು ಹಂಚಿಕೊಂಡರು. ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಎನ್.ಎಚ್. ಬಂಡಿ ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ರೈತರಿಗೆ ಮಣ್ಣು ಆರೋಗ್ಯ ಪತ್ರಗಳನ್ನು ವಿತರಿಸಲಾಯಿತು.

ಡಾ. ಪ್ರವೀಣ ಕರಿಕಟ್ಟಿ ಸೇರಿದಂತೆ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ, ಕೃಷಿ ಇಲಾಖೆಯ ಸಿಬ್ಬಂದಿ ಹಾಗೂ ರೈತರು ಇದ್ದರು. ಡಾ. ಮಂಜುಪ್ರಕಾಶ ಪಾಟೀಲ ನಿರೂಪಿಸಿದರು. ಡಾ. ವಿನಾಯಕ ನಿರಂಜನ್ ಸ್ವಾಗತಿಸಿದರು. ಹೇಮಾವತಿ ಹಿರೇಗೌಡರ ವಂದಿಸಿದರು.