ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸರ್ಕಾರದಿಂದ ಬರುತ್ತಿರುವ ಎಸ್‌ಸಿ, ಎಸ್ಟಿ ಅನುದಾನ ಕಾಮಗಾರಿಗಳನ್ನು ಸಾಮಾನ್ಯ ಜನರ ಕಾಮಗಾರಿಗಳಿಗೆ ಬಳಕೆ ಮಾಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಕೆಡಿಪಿ ಸದಸ್ಯ ಮಧು ಪ್ರಶ್ನಿಸಿದ್ದಾರೆ.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಈಗಾಗಲೇ ರಾಜ್ಯ ಸರ್ಕಾರ ಎಸ್‌ಟಿ, ಎಸ್‌ಸಿ ಜನಾಂಗದ ಅನುದಾನಕ್ಕಾಗಿ ಮತ್ತು ವಿವಿಧ ಕಾಮಗಾರಿಗಳಿಗಾಗಿ ಸರ್ಕಾರ ಅನೇಕ ಅನುದಾನಗಳನ್ನು ಬಿಡುಗಡೆ ಮಾಡಿದೆ. ಆದರೆ ಸ್ಥಳೀಯ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿಕೊಂಡು ಈ ಹಣವನ್ನು ತಮಗೆ ಇಷ್ಟಬಂದ ಸ್ಥಳಗಳಲ್ಲಿ ಮಾಡಿದ್ದಾರೆ ಹಾಗೂ ದುರ್ಬಳಕೆಯನ್ನು ಕೂಡ ಮಾಡಿಕೊಂಡಿದ್ದಾರೆ. ಜೊತೆಯಲ್ಲಿ ಎಸ್‌ಸಿ, ಎಸ್‌ಟಿ ಕಾಲೋನಿಗಳು ಇಲ್ಲದ ಸ್ಥಳಗಳಲ್ಲೂ ಕೂಡ ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ. ಅದರಲ್ಲೂ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಲ್ಲೂ ಕೂಡ ಒಂದೇ ಸ್ಥಳಗಳಿಗೆ ಮೂರು ಇಲಾಖೆಯಲ್ಲೂ ಹಣವನ್ನು ಬಿಡುಗಡೆ ಮಾಡಿರುವ ಪ್ರಕರಣಗಳು ಇವೆ ಹಾಗೂ ಸಾಮಾನ್ಯ ಜನರ ಬೀದಿಗಳಲ್ಲೂ ಕೂಡ ಎಸ್‌ಸಿ, ಎಸ್‌ಟಿ ಅನುದಾನದ ಕಾಮಗಾರಿಗಳನ್ನು ಕೂಡ ಮಾಡಿದ್ದಾರೆ. ಈ ಕಾಮಗಾರಿ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.
ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಅಂಬೇಡ್ಕರ್ ನಿಗಮ ಇವರ ವತಿಯಿಂದ ತಾಲೂಕಿಗೆ ಒಟ್ಟು ೧೪ ಅಂಬೇಡ್ಕರ್ ಭವನಗಳನ್ನು ನಿರ್ಮಾಣ ಮಾಡಲು ಹಣ ಬಿಡುಗಡೆಯಾಗಿದ್ದು, ಈ ಹಣದಿಂದ ಕೂಡಲೇ ಬಾಗೂರು, ನುಗ್ಗೆಹಳ್ಳಿ, ಹಿರಿಸೇವೆ ಶ್ರವಣಬೆಳಗೊಳ ಇನ್ನು ವಿವಿಧ ಗ್ರಾಮಗಳಿಗೆ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಲು ಸದ್ಯದಲ್ಲೇ ಗುದ್ದಲಿ ಪೂಜೆಯನ್ನು ಕೂಡ ನೆರವೇರಿಸಲಾಗುವುದು. ಜೊತೆಯಲ್ಲಿ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳು ಕಟ್ಟಡಗಳು ಇಲ್ಲದೆ ಬಾಡಿಗೆ ಕಟ್ಟಡ ಮತ್ತು ಸರ್ಕಾರಿ ಶಾಲೆಗಳಲ್ಲಿ ಅಂಗಡಿವಾಡಿ ಕೇಂದ್ರಗಳು ನಡೆಯುತ್ತಿದ್ದು ಶೀಘ್ರದಲ್ಲೇ ಅಂಗನವಾಡಿ ಕೇಂದ್ರಗಳನ್ನು ಸ್ವಂತ ಕಟ್ಟಡದಲ್ಲಿ ನಿರ್ಮಾಣ ಮಾಡಲು ಸ್ಥಳ ಗುರುತಿಸಿಕೊಡಲು ತಾಲೂಕು ದಂಡಾಧಿಕಾರಿಗಳಿಗೆ ಮತ್ತು ಪುರಸಭಾ ಮುಖ್ಯ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅವರಿಗೆ ಮಾರ್ಗದರ್ಶನವನ್ನು ನೀಡಿದರು.ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯನ್ನು ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
ಸಭೆಯಲ್ಲಿ ಪೊಲೀಸ್ ಡಿವೈಎಸ್ಪಿ ಕುಮಾರ್, ತಾಲೂಕು ದಂಡಾಧಿಕಾರಿ ಶಂಕರಪ್ಪ, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಹರೀಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು ಪ್ರಕಾಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್, ಟಿಎಪಿಸಿಎಂಎಸ್ ಅಧ್ಯಕ್ಷ ಅನಿಲ್ ಕುಮಾರ್ ಹಾಗೂ ಕೆಡಿಪಿ ಸದಸ್ಯರಾದ ಮಹೇಶ್‌ಕಬ್ಬಾಳು, ಗುರುಪ್ರಸಾದ್ ಇನ್ನು ಮುಂತಾದವರು ಹಾಜರಿದ್ದರು.