ಬೆಳ್ತಂಗಡಿ: ಕಾಲೇಜಿನ ಐಕ್ಯುಎಸಿ ಮತ್ತು ಮಾನವಿಕ ಸಂಘ ಇವುಗಳ ಆಶ್ರಯದಲ್ಲಿ ಕಲಾವಿದ ವಿದ್ಯಾರ್ಥಿಗಳಿಗಾಗಿ ವಿಶೃತಿ 2 ಕೆಟ್ವೆಂಟಿಸಿಕ್ಸ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಕಲಾ ವಿಭಾಗದ ಡೀನ್ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗಡೆ ಉದ್ಘಾಟಿಸಿದರು. ಕಲಾವಿಭಾಗದ ವಿದ್ಯಾರ್ಥಿಗಳಿಗೆ ಉತ್ತೇಜನವನ್ನು ನೀಡಲು ಹಾಗೂ ಅವರ ಪ್ರತಿಭೆಗಳಿಗೆ ರಚನಾತ್ಮಕ ದೃಷ್ಟಿಕೋನವನ್ನು ನೀಡಲು ಈ ರೀತಿಯ ಕಾರ್ಯಕ್ರಮಗಳು ಅತ್ಯಂತ ಉಪಕಾರಿ. ಕಲಾವಿಭಾಗದ ವಿದ್ಯಾರ್ಥಿಗಳು ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಿನ ಅವಕಾಶಗಳನ್ನು ಹೊಂದಿದ್ದಾರೆ ಎಂದರು.
ಮಾನವಿಕ ಸಂಘದ ಸಂಯೋಜಕ ಪ್ರೊ. ರೊನಾಲ್ಡ್ ಪ್ರವೀಣ್ ಕೊರಾಯ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನಾವು ವಿದ್ಯಾರ್ಥಿಗಳಿಗೆ ಉತ್ತಮವಾದ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಿದಾಗ ಅವರು ಉತ್ತಮ ಸಾಧನೆಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದರು.ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಪ್ರೊ. ಪದ್ಮನಾಭ ಕೆ., ಅಧ್ಯಕ್ಷತೆ ವಹಿಸಿದ್ದರು.ಇತಿಹಾಸ ವಿಭಾಗ ಮುಖ್ಯಸ್ಥ ಪ್ರೊ. ಕವಿತಾ ಹಾಗೂ ಸ್ನಾತ್ತಕೋತ್ತರ ವಿಭಾಗದ ಸಂಚಾಲಕ ಡಾ. ರವಿ ಎಂ ಎನ್. ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಮಾರುತಿ ಸ್ವಾಗತಿಸಿದರು. ಅಂತಿಮ ಬಿಎ ವಿದ್ಯಾರ್ಥಿ ಜಗದೀಶ್ ಹಾಗೂ ದ್ವಿತೀಯ ಬಿಎ ವಿದ್ಯಾರ್ಥಿನಿ ಕುಮಾರಿ ನಸೀಬಾ ನಿರೂಪಿಸಿದರು. ಮಾನವಿಕ ಸಂಘದ ಪದಾಧಿಕಾರಿಗಳಾದ ಚೇತನ್ ಉಪಸ್ಥಿತರಿದ್ದರು. ಅರ್ಪಿತ ವಂದಿಸಿದರು.ಅಂತರ್ ತರಗತಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ದ್ವಿತೀಯ ಬಿಕಾಂನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡು, ದ್ವಿತೀಯ ಬಿಎ ವಿದ್ಯಾರ್ಥಿಗಳು ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದರು.