ಕೊಪ್ಪಳ: ಕಾರ್ಖಾನೆ ವಿರುದ್ಧದ ಹೋರಾಟ ದಿಲ್ಲಿ,ದೇವನಳ್ಳಿ ಹೋರಾಟದಂತೆ ಗೆಲ್ಲುತ್ತದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಕುಮಾರ ಸಮತಳ ಹೇಳಿದರು.
ಕಾರ್ಖಾನೆ ತೊಲಗಿಸುವಂತೆ ಆಗ್ರಹಿಸಿ ಕೊಪ್ಪಳ ನಗರಸಭೆ ಎದುರು ನಡೆಯುತ್ತಿರುವ 156 ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು.ಇಪ್ಪತ್ತೆರಡು ಹಳ್ಳಿಗಳ ಐವತ್ತು ಸಾವಿರ ಜನರ ಜೀವ,ಆರೋಗ್ಯ ರಕ್ಷಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ, ತುಂಗಭದ್ರಾ ಜಲಾಶಯ ವಿಷಗೊಳಿಸುವ ಕಾರ್ಖಾನೆ ಸೀಜ್ ಮಾಡಿ ಸಂತ್ರಸ್ತ ಹಳ್ಳಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಎಂದು ಆಗ್ರಹಿಸಿದರು.
ಕೊಪ್ಪಳ ಈ ಹೋರಾಟ ಜೀವ ಉಳಿಸಿಕೊಳ್ಳಲು,ಆರೋಗ್ಯ ಕಾಪಾಡಿಕೊಳ್ಳಲು ಎನ್ನುವುದು ದೊಡ್ಡ ವಿಪರ್ಯಾಸವಾಗಿದೆ. ಕಾರ್ಖಾನೆ ಮಾಲಿನ್ಯ ಮಾಡುವ ಮೂಲಕ ಇಲ್ಲಿನ ಜನರ ಬದುಕುವ ಹಕ್ಕನ್ನೇ ಕಿತ್ತುಕೊಂಡಿವೆ. ಇಲ್ಲಿನ ತುಂಗಭದ್ರಾ ಕೋಟಿಗಟ್ಟಲೆ ಜನರಿಗೆ ಬದುಕು ಕೊಟ್ಟಿದೆ. ಆ ತುಂಗಭದ್ರಾ ಇವತ್ತು ವಿಷವಾಗಿದ್ದಲ್ಲದೆ ಕಾರ್ಖಾನೆ ನೀರು ಬಳಸಿಕೊಂಡು ಕೃಷಿಗೆ ನೀರಿನ ಕೊರತೆಯಾಗಿದೆ. ಈ ನೀರನ್ನು ಕುಡಿಯುವ ಜನರು ರೋಗಗ್ರಸ್ಥರಾಗುತ್ತಿದ್ದಾರೆ. ಕೊಪ್ಪಳ ಹೋರಾಟವು ದಿಲ್ಲಿ ರೈತರ ಹೋರಾಟ, ದೇವನಹಳ್ಳಿ ರೈತರ ಹೋರಾಟದಂತೆ ಗೆದ್ದು ಇತಿಹಾಸ ಸೃಷ್ಟಿಸುತ್ತದೆ ಎಂದರು.ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ನಮ್ಮ ಸಂಘಟನೆ ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಸಕ್ರಿಯವಾಗಿದ್ದು, ಅಲ್ಲಿಂದಲೇ ಹೋರಾಟ ಆರಂಭ ಮಾಡುತ್ತೇವೆ ಎಂದರು.
ವಕೀಲ ಎನ್.ಎಂ.ಸೌದತ್ತಿ ಮಾತನಾಡಿ, ಕೊಪ್ಪಳ ಅತ್ಯಂತ ಪುರಾತನ, ಪೌರಾಣಿಕ ಹಿನ್ನೆಲೆಯ ನಗರ ಸಾಂಸ್ಕೃತಿಕವಾಗಿ ಇತಿಹಾಸದಲ್ಲಿ ದಾಖಲಾದ ಈ ನಗರಕ್ಕೆ ಇವತ್ತು ಆಪತ್ತು ಬಂದಿದೆ. ನಾವು ಎಚ್ಚೆತ್ತುಕೊಂಡು ಹೋರಾಡಬೇಕಿದೆ. ನಾವು ವಕೀಲರು ಗಂಭೀರವಾಗಿ ಚಿಂತಿಸುತ್ತಿದ್ದೇವೆ. ಸದಾ ನಮ್ಮ ಬೆಂಬಲ ಇರುತ್ತದೆ ಎಂದರು.
ಧರಣಿಗೆ ಬೆಂಬಲಿಸಿದ ಕರ್ನಾಟಕ ಜನಶಕ್ತಿ ಸಂಘಟನೆಯ ಎಂ.ಡಿ.ಶಿರಾಜ್ ಸಿದ್ದಾಪುರ, ರವಿ ನವಲಹಳ್ಳಿ ಮಾತನಾಡಿದರು. ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಡಾ.ಬಸವರಾಜ್ ಪೂಜಾರ, ಎಸ್.ಬಿ. ರಾಜಜೂರು, ಲಿಂಗರಾಜ ನವಲಿ, ದುರ್ಗೇಶ್ ಬರಗೂರು, ಎಲ್.ಎಫ್.ಪಾಟೀಲ್, ರಾಜಾ ನಾಯಕ ತಾವರಗೇರಿ, ಮುಕಪ್ಪ ಮೇಸ್ತ್ರಿ ಬಸಾಪುರ, ಬಿ.ಜಿ. ಕರಿಗಾರ, ಗಂಗಾಧರ ಖಾನಾಪುರ, ರಾಜಶೇಖರ ಏಳುಭಾವಿ, ಉಮೇಶ್ ಬಿ, ರವಿ ಕಾಂತನವರ, ನಾಗರಾಜ್ ಕುಷ್ಟಗಿ, ಬಸವರಾಜಪ್ಪ ಶೆಟ್ಟರ್, ಗುರಪ್ಪ, ಭೀಮಪ್ಪ ಯಲಬುರ್ಗಿ, ವಿಜಯ ಮಾಹಾಂತೇಶ ಹಟ್ಟಿ, ಚಿದಾನಂದಪ್ಪ ಬಸಾಪುರ, ಮಹಾದೇವಪ್ಪ ಮಾವಿನಮಡು ಬಸವರಾಜ ಪೂಜಾರ ಕಾಸನಕಂಡಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಬಸವರಾಜ ನರೇಗಲ್, ರತ್ನಮ್ಮ ದೊಡ್ಡಮನಿ, ಮಲ್ಲಪ್ಪ ಮಾ.ಪಾಟೀಲ್ ಕುಣಿಕೇರಿ ಮುಂತಾದವರು ಇದ್ದರು.