ಸಾರಾಂಶ
ಬೆಂಗಳೂರು : ಬಿಬಿಎಂಪಿ ಆಸ್ತಿ ತೆರಿಗೆ ವಸೂಲಿ ಚುರುಕುಗೊಳಿಸುವುದಕ್ಕೆ ಮುಂದಾಗಿರುವ ಪಾಲಿಕೆಯು ಸೋಮವಾರದಿಂದ ನಗರದಲ್ಲಿ ಭಾರೀ ಪ್ರಮಾಣ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಆಸ್ತಿಗಳನ್ನು ಸೀಜ್ ಮಾಡಲು ನಿರ್ಧಿಸಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿ ಸಿಬ್ಬಂದಿಯು ಪೂರ್ಣ ಪ್ರಮಾಣದಲ್ಲಿ ಚುನಾವಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ, ಆಸ್ತಿ ತೆರಿಗೆ ವಸೂಲಿಗೆ ಗಮನ ನೀಡುವುದಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ ಚುನಾವಣಾ ಕಾರ್ಯ ಮುಕ್ತಾಯಗೊಂಡಿದೆ. ನೀತಿ ಸಂಹಿತೆಯೂ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ದಿಂದ ಆಸ್ತಿ ತೆರಿಗೆ ವಸೂಲಿ ಕಾರ್ಯದಲ್ಲಿ ನಿರತರಾಗುವಂತೆ ಮುಖ್ಯ ಆಯುಕ್ತರು ಮತ್ತು ಕಂದಾಯ ವಿಭಾಗದ ವಿಶೇಷ ಆಯುಕ್ತರು ಸೂಚಿಸಿದ್ದಾರೆ.
ಆಸ್ತಿ ಮಾಲೀಕರಿಗೆ ಪ್ರಸಕ್ತ ವರ್ಷದ ಆಸ್ತಿ ತೆರಿಗೆ ಪಾವತಿಗೆ ಶೇ.5 ರಷ್ಟು ರಿಯಾಯಿತಿ ಹಾಗೂ ಈ ಹಿಂದಿನ ವರ್ಷದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರಿಗೆ ಶೇ.50 ರಷ್ಟು ದಂಡ ರಿಯಾಯಿತಿ. ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ. ಆದರೂ ಆಸ್ತಿ ತೆರಿಗೆ ಪಾವತಿಸದ ಮಾಲೀಕರ ಆಸ್ತಿಗಳನ್ನು ಸೀಜ್ ಮಾಡುವುದಕ್ಕೆ ನಿರ್ಧಿಸಲಾಗಿದೆ.
ವಸೂಲಿಯ ಗುರಿ ನಿಗದಿ:
ವಲಯವಾರು ಅಧಿಕಾರಿಗಳಿಗೆ ನಿರ್ಧಿಷ್ಟ ಪ್ರಮಾಣ ಆಸ್ತಿ ತೆರಿಗೆ ವಸೂಲಿ ಮಾಡುವ ಗುರಿಯನ್ನು ನಿಗದಿ ಪಡಿಸುವುದಕ್ಕೆ ಕಂದಾಯ ವಿಭಾಗದ ಅಧಿಕಾರಿಗಳು ತೀರ್ಮಾನಿಸಿದ್ದು, ಸೋಮವಾರ ಗುರಿಯನ್ನು ಸಹ ನಿಗದಿ ಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
1,240 ಕೋಟಿ ರು. ವಸೂಲಿ:
2024-25ನೇ ಸಾಲಿನ ಆರ್ಥಿಕ ವರ್ಷ ಆರಂಭಗೊಂಡು ಎರಡು ತಿಂಗಳು ಪೂರ್ಣಗೊಂಡಿದೆ. ಈವರೆಗೆ ಬಿಬಿಎಂಪಿ ಕಂದಾಯ ವಿಭಾಗವೂ 1,240 ಕೋಟಿ ರು. ಆಸ್ತಿ ತೆರಿಗೆ ವಸೂಲಿ ಮಾಡಲಾಗಿದೆ.
ಯಾವ ವಲಯದಲ್ಲಿ ಎಷ್ಟು ಸಂಗ್ರಹ?:
ಯಲಹಂಕ- ₹91.36 ಕೋಟಿ, ಮಹದೇವಪುರ- ₹271.65 ಕೋಟಿ, ದಾಸರಹಳ್ಳಿ- ₹42.86 ಕೋಟಿ, ಆರ್‌ಆರ್ ನಗರ- ₹88.79 ಕೋಟಿ, ಬೊಮ್ಮನಹಳ್ಳಿ- ₹141.44 ಕೋಟಿ, ದಕ್ಷಿಣ- ₹ 214.83 ಕೋಟಿ, ಪಶ್ಚಿಮ- ₹148.85 ಕೋಟಿ, ಪೂರ್ವ- ₹240.28 ಕೋಟಿ ಸೇರಿ ಒಟ್ಟಾರೆ ₹ 1,240.11 ಕೋಟಿ ಸಂಗ್ರಹವಾಗಿದೆ.