ಸಾರಾಂಶ
ಕ್ಷೀಣಿಸುತ್ತಿರುವ ರೇಷ್ಮೆ ಕೃಷಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಸಹಾಯಧನ ನೀಡುವ ಮೂಲಕ ಹಲವಾರು ಸುಧಾರಿತ ಕ್ರಮಗಳನ್ನು ಇಲಾಖೆ ಮುಖಾಂತರ ಕೈಗೊಂಡಿದ್ದು, ರೇಷ್ಮೇ ಬೆಳೆಗಾರರು ಇದನ್ನು ಸದ್ಬಳಕೆ ಮಾಡಿಕೊಂಡು ರೇಷ್ಮೆ ಬೆಳೆಯನ್ನು ಹೆಚ್ಚಿಸುವಂತೆ ಶಾಸಕ ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಹೇಳಿದರು.
ಬ್ಯಾಡಗಿ: ಕ್ಷೀಣಿಸುತ್ತಿರುವ ರೇಷ್ಮೆ ಕೃಷಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಸಹಾಯಧನ ನೀಡುವ ಮೂಲಕ ಹಲವಾರು ಸುಧಾರಿತ ಕ್ರಮಗಳನ್ನು ಇಲಾಖೆ ಮುಖಾಂತರ ಕೈಗೊಂಡಿದ್ದು, ರೇಷ್ಮೇ ಬೆಳೆಗಾರರು ಇದನ್ನು ಸದ್ಬಳಕೆ ಮಾಡಿಕೊಂಡು ರೇಷ್ಮೆ ಬೆಳೆಯನ್ನು ಹೆಚ್ಚಿಸುವಂತೆ ಶಾಸಕ ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ 2025-26ನೇ ಸಾಲಿನ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ಸಾಮಾನ್ಯ ಗಿರಿಜನ ಮತ್ತು ವಿಶೇಷ ಘಟಕ ಯೋಜನೆಯಡಿ ಬೆಳೆಗಾರರಿಗೆ ಸಹಾಯಧನದ ಮಂಜೂರಾತಿ ಆದೇಶ ವಿತರಿಸಿ ಅವರು ಮಾತನಾಡಿದರು.
ರೈತರು ಒಂದೇ ಬೆಳೆಗೆ ಜೊತು ಬಿದ್ದಿದ್ದಾರೆ. ಬೆಳೆಯುವ ವಿಧಾನವನ್ನು ಬದಲಾವಣೆ ಮಾಡಿಕೊಳ್ಳಬೇಕು. ರೇಷ್ಮೆ ಬೆಳೆ ಸೇರಿದಂತೆ ಹಲವಾರು ಬೆಳೆಗಳು ರೈತನ ಕೈಹಿಡಿಯುವಂತಹ ಬೆಳೆಗಳಿದ್ದು, ಅವುಗಳನ್ನು ಬೆಳೆಯಲು ಮುಂದಾಗಬೇಕು. ಮಳೆ ಹಾಗೂ ನೀರಾವರಿ ಆಶ್ರಿತ ಪ್ರದೇಶಗಳಲ್ಲಿ ಮೆಕ್ಕೆಜೋಳವನ್ನು ಮಾತ್ರ ಬೆಳೆಯುತ್ತಿದ್ದು, ಇದರ ಜೊತೆಗೆ ನಿರಂತರವಾಗಿ ರೈತನ ಕೈ ಹಿಡಿಯುವಂತ ಬೆಳೆಯನ್ನು ಬೆಳೆಯಲು ಮುಂದಾಗುವಂತೆ ಕರೆ ನೀಡಿದರು.
ರೇಷ್ಮೆ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಇದನ್ನು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ತಾಲೂಕಿನಲ್ಲಿ ರೇಷ್ಮೆ ಬೆಳೆಗಾರರ ಸಂಖ್ಯೆ ಕಡಿಮೆ ಇದ್ದು, ಸರ್ಕಾರ ಸಸಿಗಳನ್ನು ಸುಲಭ ಬೆಲೆಗೆ ದೊರೆಯುವಂತೆ ಮಾಡಿದೆ. ರೇಷ್ಮೆ ಹುಳು ಸಾಕಾಣಿಕೆ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನ ವಿತರಿಸುವ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಸಹಾಯಧನವನ್ನು ನೇರವಾಗಿ ರೇಷ್ಮೆ ಬೆಳೆಯುವ ರೈತರಿಗೆ ಜಮೆ ಮಾಡುವ ಕಾರ್ಯವನ್ನು ಮಾಡುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ರೇಷ್ಮೆ ಇಲಾಖೆಯ ವಿಸ್ತರಣಾಧಿಕಾರಿ ಭಾರತಿ ದಯಾನಂದ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ರೇಷ್ಮೆ ಮಂಡಳಿ ಯೋಜನೆಯಡಿಲ್ಲಿ ರೇಷ್ಮೆ ಮನೆ ಹಾಗೂ ತಾತ್ಕಾಲಿಕ ಶೆಡ್ಡ ನಿರ್ಮಾಣ ಮಾಡಿಕೊಳ್ಳುವ ಸಲುವಾಗಿ 18 ಜನ ರೈತ ಫಲಾನುಭವಿಗಳಿಗೆ ಸುಮಾರು 40 ಲಕ್ಷ ರು.ಗಳ ಮಂಜೂರಾತಿ ಆದೇಶವನ್ನು ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ನಾಗರಾಜ ಆನ್ವೇರಿ, ನಜೀರಹ್ಮದ ಶೇಖ್, ಕೃಷಿಕರಾದ ಶಿವರಾಜಕುಮಾರ ಹಿರೇಮಠ, ಗುರುನಾಥ ಅಂಗಡಿ, ರಾಮಪ್ಪ ಶಿಗ್ಗಾವಿ, ಹುಚ್ಚಪ್ಪ ಮೆಡ್ಲೇರಿ, ಬಸಪ್ಪ ಬಣಕಾರ, ಪವಿತ್ರಾ ಸೂರಣಗಿ, ನಿಂಗನಗೌಡ ಪಾಟೀಲ ಸೇರಿದಂತೆ ಇನ್ನಿತರರಿದ್ದರು.