ಸಾರಾಂಶ
ಮಂಗಳೂರು: ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ದೇಶದಲ್ಲಿ ಜಾರಿಗೆ ಬಂದಿರುವ ಜಿಎಸ್‌ಟಿ 2.0 ಸುಧಾರಣಾ ಕ್ರಮವು ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದುಕೊಡಲಿದೆ. ಇದು ತೆರಿಗೆ ಕಟ್ಟುವ ಪ್ರಕ್ರಿಯೆಯನ್ನು ಸರಳ, ಪಾರದರ್ಶಕ ಮತ್ತು ಜನಸ್ನೇಹಿಯಾಗಿ ರೂಪಿಸುವುದರ ಜೊತೆಗೆ ಮಧ್ಯಮ ವರ್ಗ ಹಾಗೂ ಕೆಳವರ್ಗದ ಜನರ ಆರ್ಥಿಕ ಹಿತಾಸಕ್ತಿಗೆ ಅನುಕೂಲಕರವಾಗಲಿದೆ ಎಂದು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ. ಎಸ್. ಆರ್. ಹರೀಶ್ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ. ದೇಶದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆಯ ಹಂತಗಳನ್ನು ಕಡಿಮೆ ಮಾಡಿದ್ದು ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಗಣನೀಯವಾಗಿ ಇಳಿಕೆ ಮಾಡಿದೆ. ದೈನಂದಿನ ಬಳಕೆಯ ಹಲವಾರು ವಸ್ತುಗಳು, ಸೇವಾ ವಲಯದ ಹಲವು ಪ್ರಕಲ್ಪಗಳ ಬೆಲೆ ಇಳಿಕೆಯಾಗಲಿದ್ದು, ಇದರಿಂದ ಜನಸಾಮಾನ್ಯರ ಜೀವನ ಮಟ್ಟ ಸುಧಾರಣೆಗೊಳ್ಳಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ದೈನಂದಿನ ಅವಶ್ಯಕ ವಸ್ತುಗಳು ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಹೊಸ ಉದ್ಯೋಗಾವಕಾಶಗಳ ಸೃಷ್ಟಿಯ ಮೂಲಕ ಜೀವನಮಟ್ಟವು ಸುಧಾರಣೆಯಾಗಲಿದೆ. ಜನ ಹೆಚ್ಚು ಖರ್ಚು ಮಾಡಿದಷ್ಟು ಬೇಡಿಕೆ ಹೆಚ್ಚುತ್ತದೆ. ಹೆಚ್ಚಿನ ಬೇಡಿಕೆಯಿಂದ ಹೆಚ್ಚಿನ ಉತ್ಪಾದನೆಗೆ ದಾರಿಯಾಗುತ್ತದೆ. ಉತ್ಪಾದನೆ ಹೆಚ್ಚಾದಾಗ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಪರೋಕ್ಷವಾಗಿ ಇದರಿಂದ ಸರ್ಕಾರದ ಆದಾಯ ಹೆಚ್ಚಾಗುತ್ತದೆ. ಸರ್ಕಾರದ ಆದಾಯ ಹೆಚ್ಚುವುದರಿಂದ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ನೆರವು ಸಿಗಲಿದೆ ಎಂದು ಡಾ. ಎಸ್. ಆರ್. ಹರೀಶ್ ಆಚಾರ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.