ಸಾರಾಂಶ
ಪೊನ್ನಂಪೇಟೆ ಅಪ್ಪಚ್ಚ ಕವಿ ವಿದ್ಯಾಲಯದಲ್ಲಿ ಹರದಾಸ ಅಪ್ಪಚ್ಚ ಕವಿಯವರ 158ನೇ ಜನ್ಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಪೊನ್ನಂಪೇಟೆಯ ಅಪ್ಪಚ್ಚ ಕವಿ ವಿದ್ಯಾಲಯದಲ್ಲಿ ಹರದಾಸ ಅಪ್ಪಚ್ಚ ಕವಿಯವರ 158ನೇ ಜನ್ಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಈ ಸಂದರ್ಭ ಮುಖ್ಯ ಅತಿಥಿಗಳಾದ ಡಾ. ಕಾಳಿಮಾಡ ಶಿವಪ್ಪ ಅವರನ್ನು ತಮ್ಮ ಸಾಹಿತ್ಯ ಹಾಗೂ ವೃತ್ತಿ ಜೀವನದ ಸೇವೆಯನ್ನು ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಅಪ್ಪಚ್ಚ ಕವಿಯವರು ಕೊಡವ ಸಾಹಿತ್ಯಕ್ಕೆ ನೀಡಿದ ಬಹುದೊಡ್ಡ ಕೊಡುಗೆಯ ಬಗ್ಗೆ ವಿವರಿಸಿ, ಅವರ ಸಾಹಿತ್ಯದಿಂದ ಕೊಡವ ಸಾಹಿತ್ಯ ಶ್ರೀಮಂತ ವಾಗಿದೆ ಎಂದರು. ಅಪ್ಪಚ್ಚ ಕವಿ ರಚಿಸಿದ ಸಾಹಿತ್ಯದ ಹಾಡನ್ನು ಅವರು ಈ ಸಂದರ್ಭ ಹಾಡಿ ಗಮನ ಸೆಳೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಪ್ಪಚ್ಚಕವಿ ವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಪೊನ್ನಿಮಾಡ ಸುರೇಶ್ ಅವರು ಹರದಾಸ ಅಪ್ಪಚ್ಚ ಕವಿಯವರು ಕೊಡವ ಸಾಹಿತ್ಯಕ್ಕೆ ನೀಡಿದ ಕೊಡುಗೆ ಆಪಾರವಾಗಿದೆ ಎಂದು ಹೇಳಿದರು. ಅತ್ಯಂತ ಕಷ್ಟದ ಕಾಲಘಟ್ಟದಲ್ಲಿ ಕೊಡವ ಸಾಹಿತ್ಯ ಕೃಷಿಯಲ್ಲಿ ಅವರು ತೊಡಗಿಸಿಕೊಂಡಿದ್ದರು ಎಂದು ಹೇಳಿದರು.ಕಾರ್ಯಕ್ರಮದ ಆರಂಭದಲ್ಲಿ ಅಪ್ಪಚ್ಚ ಕವಿ ಭಾವ ಚಿತ್ರಕ್ಕೆ ಗಣ್ಯರಿಂದ ಪುಷ್ಪ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಕೊಣಿಯಂಡ ಸಂಜು ಸೋಮಯ್ಯ, ಉಪಾಧ್ಯಕ್ಷೆ ಮೂಕಳೆರ ಕಾವ್ಯ ಕಾವೇರಮ್ಮ, ಶಾಲಾ ಶೈಕ್ಷಣಿಕ ಸಲಹೆಗಾರರಾದ ಚಿರಿಯಪಂಡ ಇಮ್ಮಿ ಉತ್ತಪ್ಪ, ಖಜಾಂಚಿ ಗುಮ್ಮಟೀರ ಗಂಗಮ್ಮ, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಕೊಡವ ಸಮಾಜದ ಸದಸ್ಯರು, ಶಾಲಾ ಮುಖ್ಯ ಶಿಕ್ಷಕರು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ತನುಜಾ ಅವರು ಸ್ವಾಗತಿಸಿ, ಸಹ ಶಿಕ್ಷಕಿ ಹೆಚ್.ಕೆ. ಚರಿತ ವಂದಿಸಿ, ಸುನಿತಾ ಸುದರ್ಶನ್ ಹಾಗೂ ಕಾವೇರಮ್ಮ ಕಾರ್ಯಕ್ರಮವನ್ನು ನಿರೂಪಿಸಿದರು.