ಶಂಕರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ

ಕನ್ನಡಪ್ರಭ ವಾರ್ತೆ ಶಿರಸಿ

ಶಂಕರಾಚಾರ್ಯರು ದೊಡ್ಡ ಸೂರ್ಯನಿದ್ದಂತೆ. ಅವರ ಪ್ರಭಾವ ಅಪಾರವಾಗಿದೆ‌. ತತ್ವಶಾಸ್ತ್ರದಲ್ಲಿ ಶಂಕರರ ಪ್ರಭಾವ ಸಾಕಷ್ಟಿದೆ. ಅದು ಜಗತ್ತಿಗೆ ತಿಳಿದಿದೆ. ದಾರ್ಶನಿಕತೆಗೆ ಶಂಕರಾಚಾರ್ಯರಿಂದ ಒಂದು ತಿರುವು ಬಂದಿದೆ.ಎಂದು ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ನಗರದ ಯೋಗ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಂಕರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಶಂಕರರ ಜನ್ಮದಿನವನ್ನು ದಾರ್ಶನಿಕರ ದಿನ ಎಂದು ಕರೆಯಲಾಗುತ್ತದೆ. ಶಂಕರಾಚಾರ್ಯರ ಪರಂಪರೆ ಇನ್ನೂ ಮುಂದುವರೆದುಕೊಂಡು ಬಂದಿದೆ. ನಮ್ಮೆಲ್ಲರ ಮೂಲ ಗುರುಗಳು ಶಂಕರರು. ಅವರ ಜಯಂತಿಯನ್ನು ಆಚರಿಸುವುದು ಸಂತಸದ ಸಂಗತಿ. ಪ್ರತಿ ವರ್ಷವೂ ಸಹ ಶಂಕರ ಜಯಂತಿಯನ್ನು ನಾವು ಬಹಳ ವಿಜೃಂಭಣೆಯಿಂದ ಆಚರಿಸುತ್ತೇವೆ. ಪ್ರತಿ ವರ್ಷ ಸಾಧಕ ಶಂಕರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಶಂಕರಾಚಾರ್ಯರ ಚಿಂತನೆಗಳು ಇನ್ನಷ್ಟು ಬೆಳೆಯುವಂತಾಗಲಿ. ಪ್ರಪಂಚ ಯಾವುದೋ ದಿಕ್ಕಿನಲ್ಲಿ ಸಾಗುತ್ತಿದೆ.‌ ಬೇರೆ ಬೇರೆ ದೇಶಗಳಲ್ಲಿ ಯುದ್ಧಗಳು ನಡೆಯುತ್ತಿದೆ. ನಮ್ಮ ದೇಶದಲ್ಲಿ ಅಂತಹ‌ ವಾತಾವರಣವಿಲ್ಲ. ನಮ್ಮದು ಪುಣ್ಯ ಭೂಮಿ ಎಂದರು.ಶಿರಳಗಿ ಮಠದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಆಶಿರ್ವಚನ ನೀಡಿ, ಶಂಕರಾಚಾರ್ಯರನ್ನು ನಾವು ಜಗದ್ಗುರುಗಳು ಎಂದು ಕರೆಯುತ್ತೇವೆ. ಶಂಕರರು ಕೊಟ್ಟ ಉಪದೇಶ ಎಲ್ಲಾ, ಜಾತಿ, ಪಂಗಡ ದೇಶಗಳಿಗೂ ಅನ್ವಯವಾಗುತ್ತದೆ. ಅವರು ತೋರಿಸಿಕೊಟ್ಟ ಸತ್ಯ ಒಂದು ಕಾಲಘಟ್ಟಕ್ಕೆ ಸೀಮಿತವಾಗಿಲ್ಲ. ಅಂತಃಕರಣ ಶುದ್ದಿಯಾದರೆ ಮೋಕ್ಷ ಸಿಗಲಿದೆ. ಎಲ್ಲಾ ಮನುಷ್ಯರಿಗೂ ಮೊಕ್ಷಕ್ಕೆ ಅಧಿಕಾರವಿದೆ. ಇಂತಹ ಸಂದೇಶವನ್ನು ಶಂಕರರು ನಮಗೆ ನೀಡಿದ್ದಾರೆ ಎಂದರು.ಸೋಂದಾ ಸ್ವರ್ಣವಲ್ಲೀ ಮಠದ ಆನಂದ ಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಮಾತೆಯರು ಶಂಕರ ಸ್ತೋತ್ರ ಪಠಿಸಿದರು.ರಾಜರಾಜೇಶ್ವರಿ ಸಂಸ್ಕೃತ ಮಹಾವಿದ್ಯಾಲಯ ಸ್ವರ್ಣವಲ್ಲೀಯ ನಿವೃತ್ತ ಪ್ರಾಧ್ಯಾಪಕ ಡಾ. ಶಂಕರ ಭಟ್ ಉಂಚಳ್ಳಿ ಅವರಿಗೆ ಸಾಧನಾ ಶಂಕರ ಪ್ರಶಸ್ತಿಯನ್ನು ಶ್ರೀಗಳು ನೀಡಿ ಗೌರವಿಸಿದರು.

ಇದೇ ಸಂದರ್ಭ ಕೇಶವ ಹೆಗಡೆ ಗಡಿಕೈ ದಂಪತಿಗಳನ್ನು ಗೌರವಿಸಲಾಯಿತು.