ಸಾರಾಂಶ
- ಸಿದ್ಧರಾಮ ಹೊನ್ಕಲ್ ಅವರ ‘ನಿನ್ನ ಜೊತೆ ಜೊತೆಯಲಿ’ ಗಜಲ್ ಕೃತಿ ಬಿಡುಗಡೆ
-------ಕನ್ನಡಪ್ರಭ ವಾರ್ತೆ ಶಹಾಪುರ
ಕನ್ನಡ ಸಾಹಿತ್ಯಕ್ಕೆ ಬಹುಮುಖ ಕೊಡುಗೆ ನೀಡಿದ ಶಾಂತರಸರನ್ನು ಹುಡುಕಿಕೊಂಡು ಬಂದ ಗೌರವಗಳು ಹಲವಾರು. ಕನ್ನಡ, ಉರ್ದು, ಪಾರ್ಸಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಹೇಳಿದರು.ನಗರದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನ ಡಾ. ಚೆನ್ನಣ್ಣ ವಾಲಿಕಾರ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ನಡೆದ ನಾಡಿನ ಹಿರಿಯ ಗಜಲ್ ಗಾರುಡಿಗ ಲೇಖಕ, ದಿ. ಶಾಂತರಸರ ಜನ್ಮ ಶತಮಾನೋತ್ಸವ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ ಮತ್ತು ಗಜಲ್ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯದ ಬೆಳವಣಿಗೆ, ಭಾಷೆಯ ಉಳಿವಿಗೆ, ಸಂಸ್ಕೃತಿಯ ಪ್ರಸಾರಕ್ಕೆ ನಿಜಾಮಶಾಹಿ ವಿರುದ್ಧದ ಹೋರಾಟದಲ್ಲಿ, ಗೋಕಾಕ ಚಳವಳಿಯಲ್ಲಿ, ಹೀಗೆ ನಾಡಿನ ಉಳಿವಿಗಾಗಿ ಆರು ದಶಕಗಳಿಗೂ ಹೆಚ್ಚು ಹೋರಾಟದಲ್ಲಿ ತೊಡಿಗಿಸಿಕೊಂಡಿದ್ದ ಶಾಂತರಸರು. ಬಹುಮುಖ ಪ್ರತಿಭೆಯುಳ್ಳ ಪ್ರಬುದ್ಧ ಬರಹಗಾರ ಹೋರಾಟಗಾರರಾಗಿದ್ದರು. ಹಿರಿಯ ಸಾಹಿತಿ ಶಾಂತರಸರ ಮೌಲ್ಯಯುತ ಕೃತಿಗಳನ್ನು ಓದಿ ಅರ್ಥೈಸಿಕೊಂಡು ಅವರ ಬದುಕಿನ ಆದರ್ಶ ತತ್ವಗಳು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅವಡಿಸಿಕೊಂಡು ಉತ್ತಮವಾದ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.ರಾಯಚೂರಿನ ಖ್ಯಾತ ಕಥೆಗಾರರಾದ ಮಹಾಂತೇಶ್ ನವಲಕಲ್ ಮಾತನಾಡಿ, ಗಜಲ್ ಸಾಹಿತ್ಯ ಪುರಾತನದಾಗಿದ್ದು, ಅರೇಬಿಕ್ ಕಾವ್ಯಗಳಿಂದ ಹುಟ್ಟಿಕೊಂಡಿದೆ. ಶಾಂತರಸರ ಗಜಲ್ ನಲ್ಲಿ ಯಥೇಚ್ಛವಾಗಿ, ಆಧ್ಯಾತ್ಮಿಕ, ಪ್ರೀತಿ ಪ್ರೇಮ, ಪ್ರಣಯ, ಹಾಸ್ಯ, ವಿಡಂಬನೆಯ ಜೊತೆಗೆ ಕಾವ್ಯಾತ್ಮಕ ಅಭಿವ್ಯಕ್ತಿಯಾಗಿ ಅದರೊಳಗೆ ಕಾಣಬಹುದು ಎಂದು ನುಡಿದರು.
ಕಲಬುರಗಿ ರಂಗಾಯಣದ ನಿರ್ದೇಶಕರಾಗಿ ಆಯ್ಕೆಯಾದ ಡಾ. ಸುಜಾತ ಜಂಗಮಶೆಟ್ಟಿ ಮಾತನಾಡಿ, ಕನ್ನಡ, ಉರ್ದು, ಪಾರ್ಸಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ ಶಾಂತರಸರವರು ಕನ್ನಡದಲ್ಲಿ ಕವಿತಾ ಸಂಕಲನ, ಕಥಾ ಸಂಕಲನ, ಕಾದಂಬರಿ, ನಾಟಕ, ಪ್ರಬಂಧ, ಸಂಪಾದನೆ-ಸಂಶೋಧನೆ, ಅನುವಾದ ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ಸಾಹಿತ್ಯ ರಚಿಸಿದ್ದಾರೆ ಎಂದು ತಿಳಿಸಿದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಹಿರಿಯ ಸಾಹಿತಿ ಸಿದ್ದರಾಮ ಹೊನಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವಪ್ರಭು ಹೆಂಬಿರಾಳ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ರವೀಂದ್ರನಾಥ್ ಹೊಸಮನಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಯ್ಯಣ್ಣ ಇನಾಮದಾರ್, ಶಿವಲೀಲಾ, ಎಂ. ಎಸ್. ಸಜ್ಜನ್ ಹನ್ನಮ್ಮ, ಶಿವಶರಣಪ್ಪ ಭಂಡಾರಿ ಸೇರಿದಂತೆ ಇತರರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ, ಲೇಖಕ ಸಿದ್ಧರಾಮ ಹೊನ್ಕಲ್ ಅವರ ‘ನಿನ್ನ ಜೊತೆ ಜೊತೆಯಲಿ’ ಗಜಲ್ ಕೃತಿ ಬಿಡುಗಡೆ ಮಾಡಲಾಯಿತು.
ಡಿ-ಝೋನ್ ನೃತ್ಯ ಅಕಾಡೆಮಿಯ ಕಲಾವಿದರಿಂದ ನೃತ್ಯ ಹಾಗೂ ಮಾತೃ ಛಾಯಾ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನಗೊಂಡಿತು. ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹ್ಮದ್ ಮಶಾಕ್ ನಿರೂಪಿಸಿದರು. ಗಿರೀಶ್ ಸಜ್ಜನ್ ಶೆಟ್ಟಿ ಸ್ವಾಗತಿಸಿದರು. ಹನುಮಂತರಾಯಗೌಡ ವಂದಿಸಿದರು.