ಜಗತ್ತಿಗೇ ಕಾಯಕದ ಮಹತ್ವ ಸಾರಿದ ಶರಣರು

| Published : Feb 11 2024, 01:45 AM IST

ಸಾರಾಂಶ

ಇಡೀ ಜಗತ್ತಿಗೆ ಕಾಯಕದ ಮಹತ್ವ ಮತ್ತು ಸದ್ವಿಚಾರಗಳನ್ನು ಸಾರಿದ ಶಕ್ತಿಗಳೆಂದರೆ ಅದು ನಮ್ಮ ಕಾಯಕ ಶರಣರು. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಇವರೆಲ್ಲ ವೈಚಾರಿಕ ನೆಲಗಟ್ಟಿಗೆ ಸಂಬಂಧಿಸಿದ ಕಾಯಕ ಶರಣರು. ಇವರು ತಮ್ಮ ಕಾಯಕನಿಷ್ಠೆಯಿಂದ ಸಮಾಜಕ್ಕೆ ಶಕ್ತಿ ತುಂಬಿದ್ದಾರೆ. ಸಮಾನತೆಯನ್ನು ಸಾರಿದ್ದಾರೆ ಎಂದು ಶಿವಮೊಗ್ಗ ಕ್ಷೇತ್ರ ಶಾಸಕ ಎಸ್.ಎನ್. ಚನ್ನಬಸಪ್ಪ ಬಣ್ಣಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಇಡೀ ಜಗತ್ತಿಗೆ ಕಾಯಕದ ಮಹತ್ವ ಮತ್ತು ಸದ್ವಿಚಾರಗಳನ್ನು ಸಾರಿದ ಶಕ್ತಿಗಳೆಂದರೆ ಅದು ನಮ್ಮ ಕಾಯಕ ಶರಣರು ಎಂದು ಶಾಸಕರಾದ ಎಸ್.ಎನ್. ಚನ್ನಬಸಪ್ಪ ಬಣ್ಣಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶನಿವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಕಾಯಕ ಶರಣರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮದು ಶ್ರೇಷ್ಠ ಪರಂಪರೆ ಹೊಂದಿರುವ ದೇಶ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಾಡು. ಎಲ್ಲರೂ ನಮ್ಮವರು ಎನ್ನುವ ದೇಶವಿದ್ದರೆ ಅದು ನಮ್ಮ ಭಾರತ ದೇಶ. ವಸುದೈವ ಕುಟುಂಬಕಂ ಪರಿಕಲ್ಪನೆಯಡಿ ಸಮಾಜವನ್ನು ಕಟ್ಟಿ ಬದುಕುತ್ತಿದ್ದೇವೆ. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಇವರೆಲ್ಲ ವೈಚಾರಿಕ ನೆಲಗಟ್ಟಿಗೆ ಸಂಬಂಧಿಸಿದ ಕಾಯಕ ಶರಣರು. ಇವರು ತಮ್ಮ ಕಾಯಕನಿಷ್ಠೆಯಿಂದ ಸಮಾಜಕ್ಕೆ ಶಕ್ತಿ ತುಂಬಿದ್ದಾರೆ. ಸಮಾನತೆಯನ್ನು ಸಾರಿದ್ದಾರೆ ಎಂದರು.

ಈ ಐದು ಜನರ ಒಂದೇ ಸಮಷ್ಟಿಯ ನಡವಳಿಕೆ ಹಿನ್ನೆಲೆ ಒಂದೇ ದಿನ ಈ ಎಲ್ಲರ ಜಯಂತಿಯನ್ನು ಆಚರಿಸಲಾಗುತ್ತಿದೆ. ಐದು ಜನರದ್ದು ಒಂದೇ ದಿನ ಜಯಂತಿ ಆಚರಣೆ ಆಗುತ್ತಿರುವುದು ಅತ್ಯಂತ ವಿಶೇಷ ಮತ್ತು ನಮ್ಮಲ್ಲಿ ಮಾತ್ರ ಸಾಧ್ಯವಾಗಬಹುದಾದ ಸಂಗತಿ. ಇವರೆಲ್ಲ ಕಾಯಕದ ಮಹತ್ವ ಮತ್ತು ಒಳ್ಳೆಯ ವಿಚಾರಗಳನ್ನು ಜಗತ್ತಿಗೆ ಸಾರಿದ ಪ್ರೇರಕಶಕ್ತಿಗಳು. ಪ್ರಸ್ತುತ ಹೊರದೇಶದವರು ನಮ್ಮನ್ನು ಅಧ್ಯಯನ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಇಂತಹ ಶ್ರೇಷ್ಠ ವಿಚಾರವಂತರು ಎಂದು ಅಭಿಪ್ರಾಯಪಟ್ಟರು.

ಸಹ್ಯಾದ್ರಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಕೆ.ಎನ್. ಮಹಾದೇವಸ್ವಾಮಿ ಮಾತನಾಡಿ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿಯವರು ತಮ್ಮ ಕಾಯಕದ ಮೂಲಕ ಜಗದ್ವಿಖ್ಯಾತರಾದವರು. ಶಿಸ್ತು, ಬದ್ದತೆಯಿಂದ ತಮ್ಮ ಕಾಯಕ ನಡೆಸಿಕೊಂಡು ಇತರರಿಗೆ ಮಾದರಿಯಾದವರು ಎಂದರು.

ಬಹುಸಂಸ್ಕೃತಿಯ ಭಾರತ ದೇಶದ ಹಿನ್ನೆಲೆ ಕಾಯಕ ಶರಣರು ತಮ್ಮದೇ ಆದ ವೃತ್ತಿ, ವಚನ ಸಾಹಿತ್ಯದ ಮೂಲಕ ಸಮ ಸಮಾಜವನ್ನು ಕಟ್ಟಲು ಮುಂದಾದರು. ಡೋಹರ ಕಕ್ಕಯ್ಯನವರು ಚರ್ಮ ಹದ ಮಾಡಿ ಹೊಳಪು ನೀಡುವ ಕಾರ್ಯದಲ್ಲಿ ತೊಡಗಿದ್ದು, ನಾವೆಲ್ಲ ಒಂದೇ ಎಂಬ ಭಾವನೆಗಳನ್ನು ಒಡಮೂಡಿಸುವಲ್ಲಿ ಶ್ರಮಿಸಿದರು ಎಂದು ಹೇಳಿದರು.

ಮಾದಾರ ಚೆನ್ನಯ್ಯನವರು ಕೂಡ ಚರ್ಮಹದ ಮಾಡುವ ಕಾಯಕದಲ್ಲಿ ತೊಡಗಿದ್ದು, ನಡೆ ನುಡಿ ಸಮನಾಗಿರಬೇಕೆಂದು ಪ್ರತಿಪಾದಿಸಿದರು. ಮಾದಾರ ಧೂಳಯ್ಯನವರು ಸಂಸ್ಕೃತಿ ಪಂಡಿತರಾಗಿ ಹೊರಹೊಮ್ಮಿದ್ದರು. ಉರಿಲಿಂಗ ಪೆದ್ದಿಯವರು ಉರಿಲಿಂಗ ದೇವರ ದೀಕ್ಷೆ ಪಡೆಯಲು ಗುರುವನ್ನು ಒಲಿಸಿಕೊಳ್ಳುತ್ತಾರೆ. ಸಮಗಾರ ಹರಳಯ್ಯನವರು ತಮ್ಮ ಮತ್ತು ತಮ್ಮ ಪತ್ನಿ ತೊಡೆಯ ಚರ್ಮದಿಂದ ಪಾದರಕ್ಷೆಗಳನ್ನು ಮಾಡಿ ಬಸವಣ್ಣವರಿಗೆ ಅರ್ಪಿಸಿ ಶರಣರಾಗುತ್ತಾರೆ. ಈ ಎಲ್ಲ ಕಾಯಕ ಶರಣರ ತತ್ವ- ಸಿದ್ಧಾಂತಗಳು ಸಮಾನತೆ, ಸೌಹಾರ್ದತೆ. ನಮ್ಮ ಸಂವಿಧಾನದ ಪೀಠಿಕೆ ಓದಿದರೆ ಇವರೆಲ್ಲರ ಸಾರ ತಿಳಿಯುತ್ತದೆ. ಇವರನ್ನೆಲ್ಲ ಅರ್ಥ ಮಾಡಿಕೊಂಡು, ಆ ನಿಟ್ಟಿನಲ್ಲಿ ನಡೆದರೆ ಅಸಮಾನತೆ ಹೋಗಲಾಡಿಸಲು ಸಾಧ್ಯ ಎಂದರು.

ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಎಚ್. ಸ್ವಾಗತಿಸಿದರು. ಜಿಲ್ಲಾ ಸಮಗಾರ ಹರಳಯ್ಯ ಸಮಾಜದ ಅಧ್ಯಕ್ಷ ಚಂದ್ರಶೇಖರ್ ಖಾನ್ಪೇ ಟ್, ಕಾರ್ಯದರ್ಶಿಗಳಾದ ಪರುಶುರಾಮ ಸಾಬೋಜಿ, ನಾಗರಾಜ ಗಾಮನಗಟ್ಟಿ, ಮಂಜುನಾಥ ಮಾನೆ, ಖಜಾಂಚಿ ಶಂಕರ್, ಡಿಡಿಎಸ್ (ಅಂಬೇಡ್ಕರ್ ವಾದ) ಜಿಲ್ಲಾಧ್ಯಕ್ಷ ಹಾಲೇಶಪ್ಪ, ಹರೀಶ್ ನಾನಕೆ, ರಾಮಚಂದ್ರ ಕೊಪ್ಪಳ್, ಗಂಗಾಧರ್, ವಿಜಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

- - - -10ಕೆಎಸ್‌ಕೆಪಿ12.ಜೆಪಿಜಿ:

ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಾಯಕ ಶರಣರ ಜಯಂತಿಯನ್ನು ಶಾಸಕರಾದ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು.