ತೋವಿವಿ ಸಂಶೋಧನೆ, ವಿಸ್ತರಣೆಗೂ ಒತ್ತು ನೀಡಲಿ: ಶಾಸಕ ಜೆ.ಟಿ.ಪಾಟೀಲ

| Published : Feb 11 2024, 01:45 AM IST

ತೋವಿವಿ ಸಂಶೋಧನೆ, ವಿಸ್ತರಣೆಗೂ ಒತ್ತು ನೀಡಲಿ: ಶಾಸಕ ಜೆ.ಟಿ.ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ: ನಗರದ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬರ ಸಹಿಷ್ಣುತೆಗಾಗಿ ತೋಟಗಾರಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ತೋವಿವಿಯ ಮುಖ್ಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿರುವ ತೋಟಗಾರಿಕೆ ಮೇಳ-2024ನ್ನು ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಜೆ.ಟಿ.ಪಾಟೀಲ ಸಸಿಗಳಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿದರು. ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿಕ್ಷಣಕ್ಕೆ ಆದ್ಯತೆ ನೀಡಿದಂತೆ ಸಂಶೋಧನೆ ಮತ್ತು ವಿಸ್ತರಣೆಗೂ ಒತ್ತು ನೀಡಿದರೆ ರೈತರಿಗೆ ಹೆಚ್ಚಿನ ಪ್ರಯೋಜನ ನೀಡಿದಂತಾಗುತ್ತದೆ. ಹೊಸ ತಳಿಗಳು ಮತ್ತು ಅವುಗಳ ಸಂರಕ್ಷಣೆ ಬಗ್ಗೆ ವಿಜ್ಞಾನಿಗಳು ಪ್ರಯೋಗಾಲಯದಿಂದ ರೈತನ ಹೊಲಕ್ಕೆ ತಲುಪಬೇಕು. ಅಂದಾಗ ಮಾತ್ರ ರೈತನ ಆರ್ಥಿಕ ಭದ್ರತೆ ಉಂಟಾಗುತ್ತದೆ ಎಂದು ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಜೆ.ಟಿ. ಪಾಟೀಲ ಸಲಹೆ ನೀಡಿದರು.

ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬರ ಸಹಿಷ್ಣುತೆಗಾಗಿ ತೋಟಗಾರಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ಮೇಳ-2024ನ್ನು ತೋವಿವಿಯ ಮುಖ್ಯ ಆವರಣದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಬಗೆಯ 12 ಸಸಿಗಳಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿದರು.

ತೋಟಗಾರಿಕೆ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುವುದರಿಂದ ತೋಟಗಾರಿಕೆ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದೆ. ಇಂದು ವಿಷಮುಕ್ತ ಕೃಷಿ ಬಗ್ಗೆ ಗಮನ ಹರಿಸಬೇಕಾಗಿದೆ. ಕಾಡಿನಲ್ಲಿ ಬೆಳೆಯುವ ಬೆಳೆಗಳನ್ನು ಬಿಟ್ಟರೆ ಉಳಿದ ಎಲ್ಲ ಹಣ್ಣುಗಳನ್ನು ವಿಷಯುಕ್ತ ಮಾಡಲಾಗುತ್ತಿದೆ. ಗೊಬ್ಬರದ ಅಂಗಡಿಯ ಮಾಲೀಕ ವಿಜ್ಞಾನಿಯ ಹಾಗೆ ಕೆಲಸ ಮಾಡುತ್ತಿರುವುದರಿಂದ ದುಷ್ಪರಿಣಾಮಗಳು ಹೆಚ್ಚುತ್ತಿವೆ. ತೋಗಾರಿಕೆ ಮೇಳ ಮೂರು ದಿನದ ಮೇಲೆ ಮುಕ್ತಾಯವಲ್ಲ, ಇದು ಆರಂಭ. ಹೊಸತನ್ನು ತರುವ ಉದ್ದೇಶದಿಂದ ಸಾರ್ವಜನಿಕರಲ್ಲಿ ಜಾಗೃತಿಯ ಉದ್ದೇಶ ಸಫಲವಾಗಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ ಮಾತನಾಡಿ, ನೂರಾರು ವರ್ಷಗಳಿಂದ ಕಲಾದಗಿ ಭಾಗದಲ್ಲಿ ಹಣ್ಣು ಹಂಪಲ ಬೆಳೆಯುತ್ತಿರುವುದರಿಂದ ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಯಾಗುವುದಕ್ಕೆ ಕಾರಣವಾಯಿತು. ಇತ್ತೀಚಿನ ದಿನಗಳಲ್ಲಿ ವಿಷಯುಕ್ತ ಆಹಾರ ಸೇವನೆಯಿಂದ ದೇಹಕ್ಕೆ ಮಾರಕವಾಗುತ್ತದೆ. ಕೃಷಿಯಲ್ಲಿ ಹೆಚ್ಚು ಆದಾಯ ತೆಗೆದುಕೊಳ್ಳಲು ತೋಟಗಾರಿಕೆ ವಿಶ್ವವಿದ್ಯಾಲಯ ಸಹಾಯಕಾರಿಯಾರಿಯಾಗಿದೆ. ರೈತರು ತಮ್ಮ ಕ್ರಿಯಾಶೀಲತೆ ಪರಿಶ್ರಮಗಳಿಂದ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ ಎಂದು ಅಭಿಪ್ರಾಯ ಪಟ್ಟರು.

ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿ ಪಡೆದ ಟಿ.ಎನ್. ರವಿ (ಕೋಲಾರ ಜಿಲ್ಲೆ), ಎಂ.ಎನ್. ವೆಂಕಟರೆಡ್ಡಿ (ಚಿಕ್ಕಬಳ್ಳಾಪುರ ಜಿಲ್ಲೆ), ಶಾರದಾ ಪುಟ್ಟಪ್ಪ ವಾಲ್ಮೀಕಿ (ಉತ್ತರ ಕನ್ನಡ ಜಿಲ್ಲೆ), ಮಲ್ಲಪ್ಪ ಸಿದ್ರಾಮಪ್ಪ ಕಂಬಾರ (ಬಾಗಲಕೋಟೆ), ಚಂದ್ರಶೇಖರ ಸಂಗಪ್ಪ ಮಾಲಿಪಾಟೀಲ (ಬೀದರ್‌), ಪರಶುರಾಮ ಬಮ್ಮನಹಳ್ಳಿ (ಕಲಬುರಗಿ), ಬಸವರಾಜ ವಂದಲಿ (ಯಾದಗಿರಿ), ಶಿವಾನಂದ ಶಂಕರಪ್ಪ ಮಂಗಾನವರ (ವಿಜಯಪುರ)ಅಭಿನಂದನೆ ಸಲ್ಲಿಸಿದರು.

ತೋಟಗಾರಿಕೆ ಇಲಾಖೆ ವತಿಯಿಂದ ಬೀರಪ್ಪ ಪೂಜೇರ (ಬೀಳಗಿ), ಪರಮಾನಂದ ಹಳ್ಳಿ (ರಬಕವಿ), ಈರಪ್ಪ ಗಣಿ (ಮುಧೋಳ), ಶಿವಪ್ಪ ಸುಬ್ಬಣ್ಣವರ (ಬಾದಾಮಿ), ಫಕೀರಪ್ಪ ಮಾದರ (ಬಾಗಲಕೋಟೆ) ಆರು ಜನ ರೈತರಿಗೆ ತಾಲೂಕುಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ. ಶಿವಮೂರ್ತಿ, ತಿಮ್ಮಣ್ಣ ಅರಳಿಮಟ್ಟಿ, ರಂಗಸ್ವಾಮಿ ಚಂದ್ರಪ್ಪ, ಕುಲಸಚಿವ ಡಾ.ಟಿ.ಬಿ. ಅಳ್ಳೊಳ್ಳಿ, ಸ್ನಾತಕೋತ್ತರ ಡೀನ್‌ ಡಾ.ರವೀಂದ್ರ ಮುಲಗೆ, ಡೀನ್ ಡಾ. ರಾಮಚಂದ್ರ ನಾಯಕ, ವಿದ್ಯಾರ್ಥಿ ಕಲ್ಯಾಣ, ತೋಟಗಾರಿಕೆ ಮಹಾವಿದ್ಯಾಲ ಡೀನ್ ಡಾ. ಬಾಲಾಜಿ ಕುಲಕರ್ಣಿ, ಹಣಕಾಸು ಅಧಿಕಾರಿ ಶಾಂತಾ ಕಡಿ, ಆಸ್ತಿ ಅಧಿಕಾರಿ ಶ್ರೀ ವಿಜಯಭಾಸ್ಕರ, ಆಡಳಿತಾಧಿಕಾರಿಗಳಾದ ಭಜಂತ್ರಿ, ಪಿ.ಬಿ. ಹಳೆಮನಿ ಮತ್ತು ಎಲ್ಲ ಮಹಾವಿದ್ಯಾಲಯಗಳ ಡೀನ್ ರು ಉಪಸ್ಥಿತರಿದ್ದರು.

ವಿಸ್ತರಣಾ ನಿದೇರ್ಶಕ ಮತ್ತು ತೋಟಗಾರಿಕೆ ಮೇಳದ ಅಧ್ಯಕ್ಷ ಡಾ.ಲಕ್ಷ್ಮೀನಾರಾಯಣ ಹೆಗಡೆ ಸ್ವಾಗತಿಸಿದರು. ಕುಲಪತಿ ಡಾ.ಎನ್. ಕೆ. ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಸಂಶೋಧನಾ ನಿರ್ದೇಶಕ ಡಾ.ಎಚ್.ಪಿ. ಮಹೇಶ್ವರಪ್ಪ ವಂದಿಸಿದರು. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ.ಸಂಜೀವ ರೆಡ್ಡಿ ಮತ್ತು ಡಾ. ಪಲ್ಲವಿ.ಎಚ್.ಎಂ. ನಿರೂಪಿಸಿದರು.