ಹುಬ್ಬಳ್ಳಿ: ವೆಂಕಟೇಶ ಎಂ. (40), ನಿಖಿನ್‌ ಜೋಸ್‌ (31) ಆಕರ್ಷಕ ಬ್ಯಾಟಿಂಗ್‌ ಹಾಗೂ ರತನ್‌ ಬಿ.ಆರ್‌. (16ಕ್ಕೆ 3)ರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನದೊಂದಿಗೆ ಶಿವಮೊಗ್ಗ ಯೋಧಾಸ್‌ ತಂಡವನ್ನು ಮಣಿಸಿದ ಕೋಸ್ಟಲ್‌ ಕಿಂಗ್ಸ್‌ ಮಂಗಳೂರು 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಭಾನುವಾರ ನಡೆದ ಮಹಾರಾಜ ಟ್ರೋಫಿ ಟಿ-20 ಟೂರ್ನಿಯ ಮೊದಲ ಪಂದ್ಯದಲ್ಲಿ ಎದುರುಗೊಂಡ ಶಿವಮೊಗ್ಗ ಯೋಧಾಸ್ ವಿರುದ್ಧ ಕೋಸ್ಟಲ್‌ ಕಿಂಗ್ಸ್‌ ಮಂಗಳೂರು 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಶಿವಮೊಗ್ಗ ತಂಡವು ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಮಧ್ಯೆ ಸುರಿದ ಮಳೆ ಕಾರಣದಿಂದ ಪಂದ್ಯ ಸುಮಾರು 50 ನಿಮಿಷ ಸ್ಥಗಿತಗೊಂಡಿತು. ಬಳಿಕ ಪಂದ್ಯವನ್ನು 17 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. 17 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 113 ರನ್‌ ಗಳಿಸಲು ಸಾಧ್ಯವಾಯಿತು.

ಲವನೀತ್ ಸಿಸೋಡಿಯಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ 35 ರನ್ ಗಳಿಸಿದರು. ಆದರೆ, ಆಕರ್ಷಕ ಬೌಲಿಂಗ್‌ ದಾಳಿ ಮೂಲಕ ಶಿವಮೊಗ್ಗ ಬ್ಯಾಟರ್‌ಗಳನ್ನು ಕಾಡಿದ ಮಂಗಳೂರು ಬೌಲರ್‌ಗಳು ಅವರಿಗೆ ಪೆವಿಲಿಯನ್‌ ದಾರಿ ತೋರಿದರು. ಈ ಮಧ್ಯೆ ನಿಖಿನ್‌ ಜೋಶ್‌ ಅತ್ಯುತ್ತಮವಾದ 4 ಕ್ಯಾಚ್‌ ಹಿಡಿದು ಗಮನ ಸೆಳೆದರು.


ಇತ್ತ ಗುರಿ ಬೆನ್ನಟ್ಟಿದ ಕೊಸ್ಟಲ್ ಕಿಂಗ್ಸ್ ಮಂಗಳೂರು ಕೇವಲ 12.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 118 ರನ್ ದಾಖಲಿಸಿ ಸುಲಭ ಗೆಲುವು ತನ್ನದಾಗಿಸಿಕೊಂಡಿತು. ಆರಂಭಿಕ ಆಟಗಾರರಾದ ವೆಂಕಟೇಶ್ ಎಂ. ಹಾಗೂ ನಿಖಿನ್ ಜೋಸ್‌ ಮೊದಲ ವಿಕೆಟ್‌ಗೆ 81 ಜತೆಯಾಟವಾಡಿದರು. ಭೀಮರಾವ್‌ ನವಲೆ ದಾಳಿಗೆ ಮೊದಲು ನಿಖಿನ್ ಜೋಸ್‌ ಕ್ಯಾಚಿತ್ತು ಪೆವಲಿಯನ್‌ ಹಾದಿ ಹಿಡಿದರು. ನಂತರದಲ್ಲಿ ವೆಂಕಟೇಶ್ ಎಂ.(45) ಕೂಡ ಜಾಸ್ತಿ ಹೊತ್ತು ನಿಲ್ಲದೇ ಮರಳಿದರು. ಬಳಿಕ ಸಿದ್ದಾರ್ಥ್ ಅಖಿಲ್ (22*) ಹಾಗೂ ರಾಜವೀರ್ (10*) ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ಈ ಗೆಲುವಿನೊಂದಿಗೆ ಕೋಸ್ಟಲ್‌ ಕಿಂಗ್ಸ್ ಮಂಗಳೂರು 5 ಪಂದ್ಯಗಳಲ್ಲಿ 3 ಜಯ ದಾಖಲಿಸಿ 7 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಅಗ್ರಸ್ಥಾನದಲ್ಲಿರುವ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕಿಂತ ಕೇವಲ ಒಂದು ಅಂಕ ಹಿಂದಿದೆ. ಶಿವಮೊಗ್ಗ ಯೋಧಾಸ್ 5 ಪಂದ್ಯಗಳಲ್ಲಿ 4 ಸೋಲು ಅನುಭವಿಸಿ 4 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ.

ಸಂಕ್ಷಿಪ್ತ ಸ್ಕೋರ್:

ಶಿವಮೊಗ್ಗ ಯೋಧಾಸ್:

17 ಓವರ್‌ಗಳಲ್ಲಿ 113/8 (ಲುವನಿತ್ 35, ಹರ್ಷಿಲ್ 28; ವಾಸುಕಿ ಕೌಶಿಕ್ 2/15, ಬಿ.ಆರ್. ರತನ್ 3/16)

ಕೋಸ್ಟಲ್‌ ಕಿಂಗ್ಸ್ ಮಂಗಳೂರು:

12.4 ಓವರ್‌ಗಳಲ್ಲಿ 118/2 (ಮುರಳಿಧರ 45, ನಿಕಿನ್ 31, ಸಿದ್ಧಾರ್ಥ 22*, ರಾಜವೀರ್ 10*; ಭೀಮ್ ರಾವ್ ನಾವಲೆ 2/24)