ಕನ್ನಡದಲ್ಲಿ ನಾಮಫಲಕ ಹಾಕದ ಅಂಗಡಿಗಳಿಗೆ ಬೀಗ

| Published : Oct 22 2024, 12:03 AM IST

ಸಾರಾಂಶ

ನವೆಂಬರ್ ೧ರಿಂದ ಎಲ್ಲಾ ವರ್ತಕರು ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು.ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಪುರಸಭೆ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್ ತಿಳಿಸಿದರು. ಇದರ ಜೊತೆಯಲ್ಲಿ ಪುರಸಭೆಯವರು ಸಹ ಇದರ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೇಲೂರು ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಪುರಸಭೆ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್ ತಿಳಿಸಿದರು.

ಪಟ್ಟಣದ ವೇಲಾಪುರಿ ಸಭಾಂಗಣದಲ್ಲಿ ರಾಜ್ಯೋತ್ಸವದ ಅಂಗವಾಗಿ ವರ್ತಕರು ಸಂಘಟನೆಗಳ ಪ್ರಮುಖರು ಹಾಗೂ ಸಾರ್ವಜನಿಕರ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರಾದ ಭೋಜೇಗೌಡ, ಚಂದ್ರಶೇಖರ್‌, ರಾಜು ಹಾಗೂ ತೀರ್ಥಂಕರ್‌ ಮಾತನಾಡಿ, ಕನ್ನಡ ಹಬ್ಬ ಎಂದರೆ ಕೇವಲ ಸಂಘಟನೆಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ ಪಟ್ಟಣದ ವ್ಯಾಪ್ತಿಯಲ್ಲಿ ಯಾವುದೇ ವರ್ತಕರು ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ಪುರಸಭೆ ಅಧ್ಯಕ್ಷರು ಪ್ರಥಮ ಬಾರಿಗೆ ಎಲ್ಲಾ ಸಂಘಟನೆ ಹಾಗೂ ವರ್ತಕರ ಸಭೆ ಕರೆದು ರಾಜ್ಯೋತ್ಸವದ ಕುರಿತಾಗಿ ಚರ್ಚಿಸುತ್ತಿರುವುದು ಸ್ವಾಗತಾರ್ಹ. ಈ ಬಾರಿಯ ಕನ್ನಡ ರಾಜ್ಯೋತ್ಸವನ್ನು ಹಬ್ಬದ ರೀತಿ ಆಚರಿಸುವುದು ಅತಿ ಮುಖ್ಯ.ನವೆಂಬರ್ ೧ರಿಂದ ಎಲ್ಲಾ ವರ್ತಕರು ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಇದರ ಜೊತೆಯಲ್ಲಿ ಪುರಸಭೆಯವರು ಸಹ ಇದರ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಮನವಿ ಮಾಡಿದರು. ಹೋಟೆಲ್, ಬೇಕರಿ ಹಾಗೂ ಪಾನಿಪುರಿ ಅಂಗಡಿ ಮಾಲೀಕರನ್ನು ಕರೆದು ಎಲ್ಲಾ ಹೋಟೆಲ್ ಹಾಗೂ ಬೇಕರಿಗಳಲ್ಲಿ ನಿಗದಿತ ದರ ಮಾಡಬೇಕು. ಹೋಟೆಲ್, ಪಾನಿಪುರಿ, ಬೇಕರಿ, ಅಂಗಡಿ ಮುಂಭಾಗ ದರದ ಪಟ್ಟಿಯನ್ನು ಒಂದು ವಾರದೊಳಗೆ ಹಾಕಬೇಕು. ಆಹಾರದ ಗುಣಮಟ್ಟ ಶುಚಿತ್ವ ಕಾಪಾಡಿಕೊಳ್ಳಬೇಕು. ಈ ದಿನದಿಂದ ಎಲ್ಲಾ ಅಂಗಡಿಗಳಿಗೆ ನೋಟಿಸ್ ನೀಡಲಾಗಿದ್ದು ಲಾಡ್ಜ್ ಮಾಲೀಕರಿಗೂ ದರ ನಿಗದಿ ಬಗ್ಗೆ ತಿಳಿಸಲಾಗಿದೆ. ಅಂಗಡಿ ಮುಂಗಟ್ಟುಗಳ ನಾಮಫಲಕ ನವೆಂಬರ್ ೧ ರಿಂದ ಕನ್ನಡದಲ್ಲಿರಬೇಕು. ಒಂದು ವೇಳೆ ನಿರ್ಲಕ್ಷ ಮಾಡಿದರೆ ಅಂತಹವರ ಮೇಲೆ ಕ್ರಮ ಜರುಗಿಸಿ ಅಂಗಡಿ ಬಾಗಿಲುಗಳನ್ನು ಮುಚ್ಚಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸದಸ್ಯ ಜಮಾಲ್ ಮಾತನಾಡಿ, ಕನ್ನಡಕ್ಕೆ ಪ್ರಥಮ ಶಿಲಾಶಾಸನ ಸಿಕ್ಕಿದ ತಾಲೂಕಿನ ಹಲ್ಮಿಡಿ ಗ್ರಾಮವು ಈ ಹಿಂದೆ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಹೆಚ್ ಬಿ ಮದನ್ ಗೌಡ, ವೈಟಿ ದಾಮೋದರ್ ಸೇರಿದಂತೆ ಇನ್ನೂ ಹಲವರ ಶ್ರಮದಿಂದಾಗಿ ಇಂದು ಪ್ರವಾಸಿಗರು ಆಗಮಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇಂತಹ ಶಾಸನದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರ ಜೊತೆಗೆ ಪುರಸಭೆಯೂ ಸಹ ಅದರ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಮನವಿ ಮಾಡಿದರು.

ಪುರಸಭೆ ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿ ಬಂದು ಭುವನೇಶ್ವರಿ ತಾಯಿ ಮೆರವಣಿಗೆಯೊಂದಿಗೆ ಆಗಮಿಸಬೇಕು. ಸುಮಾರು ೬೦ ಅಡಿ ಎತ್ತರದ ಕನ್ನಡ ಧ್ವಜಸ್ಥಂಭವನ್ನು ಹೊಯ್ಸಳದ ವೃತ್ತದಲ್ಲಿ ನಿರ್ಮಾಣ ಮಾಡುವುದರ ಜೊತೆಗೆ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಗುವುದು ಎಂದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಉಷಾ ಸತೀಶ್, ರತ್ನಾ ಸತ್ಯನಾರಾಯಣ್, ಅಕ್ರಮ್, ಜಗದೀಶ್, ಪ್ರಭಾಕರ್, ಮುಖ್ಯಾಧಿಕಾರಿ ಸುಜಯ್ ಕುಮಾರ್‌, ಸಂಘಟನೆಯ ಪ್ರಮುಖರು ಹಾಜರಿದ್ದರು.

* ಹೇಳಿಕೆ-1

ಕನ್ನಡದ ಸಂಭ್ರಮವನ್ನು ಕೇವಲ ನಾವುಗಳು ಆಚರಿಸಿದರೆ ಸಾಲದು, ಕನ್ನಡಿಗರಾದ ನಾವೆಲ್ಲರೂ ಹಬ್ಬದಂತೆ ಆಚರಿಸಬೇಕು. ನೆಹರೂ ನಗರದಿಂದ ಜೆಪಿ ನಗರದವರೆಗೂ ಕನ್ನಡದ ಬಾವುಟಗಳು ರಾರಾಜಿಸುವಂತೆ ಮಾಡುವುದರ ಜೊತೆಗೆ ಪ್ರತಿ ಅಂಗಡಿ ಮುಂಗಟ್ಟುಗಳ ಮೇಲೆ ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸುವಂತಾಗಬೇಕು. ಎ ಆರ್ ಅಶೋಕ್‌, ಪುರಸಭೆ ಅಧ್ಯಕ್ಷ