ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಸಮಾಜದ ಜನರು ಒಂದಾಗದ ಹೊರತು ಬೇರೆಯವರಿಂದ ಸಮಾಜದ ಮೇಲಾಗುತ್ತಿರುವ ಅನ್ಯಾಯ ದೌರ್ಜನ್ಯ ತಡೆಯಲು ಸಾಧ್ಯವಿಲ್ಲ ಎಂದು ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ ಹೇಳಿದರು.ತಾಲೂಕಿನ ಹಲಗಲಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಹಾಗೂ ವಾಲ್ಮೀಕಿ ಮಂದಿರದ ಕಳಸಾರೋಹಣ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ ಶ್ರೀಗಳ ನಿರಂತರ ಹೋರಾಟದ ಫಲವಾಗಿ ಮೀಸಲಾತಿ 3.5 ರಿಂದ 7ಕ್ಕೆ ಏರಿಕೆಯಾಯಿತು. ಆದರೆ, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಳವಾರ ಪರಿವಾರದವರಿಗೂ ಮೀಸಲಾತಿ ಅನ್ವಯವಾಗುತ್ತೆ ಎಂದು ಹೇಳಿಕೆ ನೀಡುವ ಮೂಲಕ ನಮ್ಮ ಸಮಾಜಕ್ಕೆ ಅನ್ಯಾಯವೆಸಗಿದರು. ಅವರ ಹೇಳಿಕೆಯಿಂದಾಗಿ ಇಂದು ಜಿಲ್ಲೆಯಲ್ಲಿ ನಕಲಿ ತಳವಾರರು ನಮ್ಮ ಸೌಲಭ್ಯ ಪಡೆಯಲು ಹುನ್ನಾರ ನಡೆಸುತ್ತಿದ್ದಾರೆ. ನಾವೆಲ್ಲ ಒಂದಾಗದ ಹೊರತು ಅವರನ್ನು ಬಗ್ಗುಬಡಿಯಲು ಸಾಧ್ಯವಾಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.ವಾಲ್ಮೀಕಿ ಮಹಾಸಭಾ ಮಾಜಿ ಅಧ್ಯಕ್ಷ ರಾಜು ನಾಯ್ಕರ ಮಾತನಾಡಿ, ವಾಲ್ಮೀಕಿ ಸಮುದಾಯದ ಜನರು ಆರ್ಥಿಕ ವಾಗಿ ಸಬಲರಾಗಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಹುದ್ದೆಗೇರಿಸಲು ಶ್ರಮಿಸಬೇಕು. ಇಂದಿನ ಸರ್ಕಾರದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ₹89 ಕೋಟಿ ಅವ್ಯವಹಾರವಾಗಿದ್ದು, ಆ ಹಣವನ್ನು ಮರಳಿ ಸಮುದಾಯದ ಅಭಿವೃದ್ಧಿಗೆ ಬಳಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.ಲೋಕಾಯುಕ್ತ ಸಿಪಿಐ ಎಚ್.ಬಿ.ಸನಮನಿ ಉದ್ಘಾಟಿಸಿ ಮಾತನಾಡಿ, ವಾಲ್ಮೀಕಿ ಸಮುದಾಯ ಇತಿಹಾಸದಲ್ಲಿ ತನ್ನದೇಯಾದ ಹೆಸರು ಗಳಿಸಿರುವ ಶ್ರೇಷ್ಠ ಸಮಾಜ, ಶೌರ್ಯಕ್ಕೆ ಹೆಸರಾಗಿರುವ ನಮ್ಮ ಸಮಾಜ ದೇಶದ ಸ್ವಾತಂತ್ರ್ಯಪುಟದಲ್ಲಿ ಅಚ್ಚಳಿಯದೆ ಉಳಿದಿದೆ. ವಾಲ್ಮೀಕಿ ರಚಿಸಿರುವ ರಾಮಾಯಣ ಗ್ರಂಥ ಮನುಕುಲದ ಶ್ರೇಷ್ಠ ಗ್ರಂಥವಾಗಿದೆ ಎಂದರು. ಬೀಳಗಿ-ಹಲಗಲಿ ಕಲ್ಮಠದ ಗುರುಪಾದ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಳಸ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಹೊತ್ತು ಸಾಗಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ವೀರಪ್ಪ ಚಿಕ್ಕೂರ, ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಭೀಮಪ್ಪ ತಳವಾರ, ಗೌರವಾಧ್ಯಕ್ಷ ಚನ್ನಬಸಪ್ಪ ಮುತ್ತೂರ, ಯಲ್ಲಪ್ಪ ಕೊಳ್ಳನ್ನವರ, ಶಿವಪ್ಪ ಡೊಳ್ಳಿ, ಈರಪ್ಪ ಕೊಳ್ಳನ್ನವರ, ವೆಂಕಪ್ಪ ಹೊಸಮನಿ, ಲಕ್ಷ್ಮಣ ಕೊಳ್ಳನ್ನವರ, ಲಕ್ಷ್ಮಣ ಮಾಲಗಿ, ವಿಠ್ಠಲ ಕೊಳ್ಳನ್ನವರ, ರಾಮಪ್ಪ ಮುತ್ತೂರ, ಪರಶುರಾಮ ಭೂಷನ್ನವರ, ಹನಮಂತ ವಾಬನ್ನವರ, ವಿಠ್ಠಲ ಶಿವಾಪುರ, ರಾಘವೇಂದ್ರ ಮುಚಕನ್ನವರ, ವೀರಪ್ಪ ವಾಬನ್ನವರ, ಹನಮಂತ ಕಳಸಕೊಪ್ಪ, ಸುಧೀರ ಸೀಮಿಕೇರಿ, ಹನಮಂತ ಜಡಗಣ್ಣವರ, ಬಸವರಾಜ ಕೋಲೂರ ಸೇರಿದಂತೆ ಇತರರು ಇದ್ದರು.
ನಮ್ಮೊಳಗಿನ ಕೆಲವರು ಅನ್ಯ ಸಮಾಜದವರೊಂದಿಗೆ ಕೈ ಜೋಡಿಸಿದ ಪರಿಣಾಮ ಬೇರೆ ಸಮಾಜದವರು ಬಂದು ನಮ್ಮ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ವೇದಿಕೆ ಹಂಚಿಕೊಳ್ಳುವಂತಾಗಿದೆ. ಇದರಿಂದ ಸಮುದಾಯಕ್ಕೆ ಹೆಚ್ಚಿನ ನಷ್ಟವುಂಟಾಗಲಿದೆ ಎಂಬುದನ್ನು ಎಲ್ಲರೂ ಮನಗಂಡು ಒಗ್ಗಟ್ಟಿನಿಂದ ಬಾಳುವುದನ್ನು ಕಲಿಯಬೇಕು.- ರಾಜು ನಾಯ್ಕರ,
ವಾಲ್ಮೀಕಿ ಮಹಾಸಭಾ ಮಾಜಿ ಜಿಲ್ಲಾಧ್ಯಕ್ಷ ಬಾಗಲಕೋಟೆ.