ಸಾರಾಂಶ
ಬಸವರಾಜ ಹಿರೇಮಠ
ಶಿಗ್ಗಾಂವಿ: ತಾಲೂಕಿನ ದೊಡ್ಡ ಗ್ರಾಪಂ, ಸುತ್ತಮುತ್ತಲಿನ ತಾಲೂಕುಗಳ ಮಧ್ಯವರ್ತಿ ಕೇಂದ್ರ ಎನಿಸಿರುವ ತಡಸದ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ.ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ನರ್ಸ್‌ಗಳ ಕೊರತೆ ಇದ್ದು, ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ.
ತಡಸ ಗ್ರಾಪಂ ಅತಿ ಹೆಚ್ಚು ಅಂದರೆ ೨೭ ಸದಸ್ಯರನ್ನು ಹೊಂದಿದೆ. ಕಲಘಟಗಿ, ಕುಂದಗೋಳ, ಮುಂಡಗೋಡ ತಾಲೂಕಿನ ಹಲವು ಗ್ರಾಮಗಳ ಜನರು ಆರೋಗ್ಯ ತಪಾಸಣೆ, ಚಿಕಿತ್ಸೆಗೆ ಇಲ್ಲಿಗೆ ಬರುತ್ತಾರೆ. ಸುತ್ತಮುತ್ತಲಿನ ಮುತ್ತಳ್ಳಿ, ನೀರಲಗಿ, ಕಡಳ್ಳಿ, ಕುನ್ನೂರು, ಹೊನ್ನಾಪುರ, ಮಮದಾಪುರ, ಅಡವಿಸೋಮಾಪುರ, ಹೆಳವರ್ತಘಟ್ಟ, ಕಮಲಾನಗರ ಹೀಗೆ ಹಲವು ಗ್ರಾಮಗಳ ಜನರು ಇಲ್ಲಿಯ ಆರೋಗ್ಯ ಕೇಂದ್ರ ಅವಲಂಬಿಸಿದ್ದಾರೆ.ಕಾಯಂ ವೈದ್ಯರಿಲ್ಲ: ತಡಸ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲ. ಅರೆಕಾಲಿಕ ವೈದ್ಯರೇ ಸೇವೆ ನೀಡುತ್ತಿದ್ದು, ಆಗಾಗ ಬದಲಾಗುತ್ತಾರೆ. ಕೆಲಕಾಲ ವೈದ್ಯರಿಲ್ಲದ ಸಂದರ್ಭಗಳೂ ಇವೆ. ಇಲ್ಲಿಯ ಸ್ಟಾಫ್ ನರ್ಸ್‌ಗಳನ್ನು ಬೇರೆಡೆ ವರ್ಗ ಮಾಡಲಾಗಿದೆ. ಆಸ್ಪತ್ರೆ ನಿರ್ವಹಣೆ, ಹಸುಗೂಸುಗಳಿಗೆ ಚುಚ್ಚುಮದ್ದು ಮತ್ತಿತರ ಕಾರ್ಯಗಳನ್ನು ಇಬ್ಬರೇ ನಿರ್ವಹಿಸಬೇಕಿದೆ. ಕೆಲವೊಮ್ಮೆ ಬಾಣಂತಿಯರು ಶಿಶುಗಳ ಜತೆ ಆಸ್ಪತ್ರೆಯಲ್ಲಿ ದೀರ್ಘಾವಧಿ ಕಾಯುವ ಪರಿಸ್ಥಿತಿಯೂ ಬರುತ್ತದೆ.
ಮೊದಲೆಲ್ಲ ನಮ್ಮ ಊರಿಗೆ ಬಂದು ಶಿಶುಗಳಿಗೆ ಲಸಿಕೆ ಹಾಗೂ ಚುಚ್ಚುಮದ್ದನ್ನು ನರ್ಸ್‌ಗಳು ನೀಡುತ್ತಿದ್ದರು. ಈಗ ನರ್ಸ್‌ಗಳಿಲ್ಲದೆ ನಾವೇ ಆಸ್ಪತ್ರೆಗೆ ಬಂದು ನಾಲ್ಕೈದು ಗಂಟೆ ಕಾಯುವ ನಿರ್ಮಾಣವಾಗಿದೆ ಎಂದು ಕುನ್ನೂರು ಗ್ರಾಮದ ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.ಆ್ಯಂಬುಲೆನ್ಸ್ ಸೇವೆ ಸ್ಥಗಿತ: ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದರೆ ಅಥವಾ ರಾತ್ರಿ ಸಮಯದಲ್ಲಿ ತುರ್ತುಚಿಕಿತ್ಸೆ ಅಗತ್ಯಬಿದ್ದರೆ ಶಿಗ್ಗಾಂವಿಯ ತಾಲೂಕಾಸ್ಪತ್ರೆ, ಮುಂಡಗೋಡ ಅಥವಾ ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ತೆರಳಬೇಕಿದೆ. ಮೊದಲು ಆರೋಗ್ಯ ಕೇಂದ್ರಕ್ಕೆ ಇದ್ದ ಆ್ಯಂಬುಲೆನ್ಸ್ ಸೇವೆ ಈಗ ಸ್ಥಗಿತಗೊಂಡಿದೆ. ರಾತ್ರಿ ಸಮಯದಲ್ಲಿ ಕಾರ್ಯನಿರ್ವಹಿಸುವ ವೈದ್ಯರ ನೇಮಕ ಮಾಡಬೇಕಿದೆ ಎಂದು ಗ್ರಾಮಸ್ಥರಾದ ಅಷ್ಪಾಕ್‌ಅಲಿ ಎ. ಮತ್ತೇಖಾನ ಆಗ್ರಹಿಸಿದರು.
ಒಂದೇ ಶೌಚಖಾನೆ: ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಶೌಚಖಾನೆ ವ್ಯವಸ್ಥೆಯಿಲ್ಲ. ಒಂದೇ ಶೌಚಖಾನೆ ಇದ್ದು ಮಹಿಳೆಯರು ಉಪಯೋಗಿಸುತ್ತಾರೆ. ಹೀಗಾಗಿ ಪುರುಷರು ಬಯಲು ಆಶ್ರಯಿಸುವುದು ಅನಿವಾರ್ಯವಾಗಿದೆ.ಆರೋಗ್ಯ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆಯಿಂದ ಹಲವು ಹುದ್ದೆಗಳು ಖಾಲಿ ಇವೆ. ಇರುವ ವೈದ್ಯರು, ಸಿಬ್ಬಂದಿ ಬಳಸಿಕೊಂಡು ಸೇವೆ ನೀಡುತ್ತಿದ್ದೇವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ಎ.ಆರ್. ಹೇಳಿದರು.