2 ಬೈಕಿಗೆ ಬೆಂಕಿ ಹಚ್ಚಿ ಪರಾರಿ

| Published : Aug 10 2025, 01:34 AM IST

ಸಾರಾಂಶ

ನಗರ ಠಾಣೆಯಲ್ಲಿ ಪುರವರ್ಗದ ಮುಗಳಿಹೊಂಡದ ಅಬ್ದುಲ್ ವಾಹೀದ್ ಗಂಗಾವಳಿ ದೂರು ನೀಡಿದ್ದಾರೆ.

ಭಟ್ಕಳ: ಪುರವರ್ಗದ ಮುಗಳಿಹೊಂಡದ ಮನೆಯೊಂದರ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಬೈಕುಗಳಿಗೆ ಬೆಂಕಿ ಹಚ್ಚಿ ಬೈಕುಗಳನ್ನು ಸಂಪೂರ್ಣ ಸುಟ್ಟಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಈ ಕುರಿತು ಇಲ್ಲಿನ ನಗರ ಠಾಣೆಯಲ್ಲಿ ಪುರವರ್ಗದ ಮುಗಳಿಹೊಂಡದ ಅಬ್ದುಲ್ ವಾಹೀದ್ ಗಂಗಾವಳಿ ದೂರು ನೀಡಿದ್ದಾರೆ. ದೂರಿನಲ್ಲಿ ಗುರವಾರ ರಾತ್ರಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಬೈಕುಗಳಿಗೆ ಬೆಂಕಿ ಹಚ್ಚಿ ಸಂಪೂರ್ಣ ಸುಟ್ಟು ಹಾಕಲಾಗಿದೆ. ಇವು ಹೀರೋ ಹೋಂಡಾ ಫಾಶನ್ ಪ್ಲಸ್ ಹಾಗೂ ಅಪಾಚಿ ಮೋಟಾರ್ ಬೈಕ್. ಇವುಗಳ ಅಂದಾಜು ಮೌಲ್ಯ ₹೪೦ ಸಾವಿರ ಇದೆ. ಬೈಕುಗಳಿಗೆ ತಗುಲಿದ್ದ ಬೆಂಕಿಯು ಮನೆಯ ಅಂಗಳದಲ್ಲಿರುವ ತಗಡಿನ ಶೀಟ್ ಮತ್ತು ಮನೆಯ ಮುಂದಿನ ಹಾಲ್ ಭಾಗಕ್ಕೆ ತಗುಲಿದ್ದು, ಅಪಾರ ಹಾನಿಯಾಗಿದೆ.

ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಶನಿವಾರ ಕೂಡ ಇದೇ ಮನೆಯ ಕಂಪೌಂಡ್ ಒಳಗೆ ನಿಲ್ಲಿಸಿದ್ದ ಮೋಟಾರ್ ಬೈಕೊಂದನ್ನು ಕೆಲ ದೂರ ತಳ್ಳಿಕೊಂಡು ಹೋಗಿ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಕುರಿತು ದೂರು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿರುವಾಗಲೇ ಮತ್ತೆ ಗುರುವಾರ ತಡರಾತ್ರಿ ಮನೆಯ ಕಂಪೌಂಡ್‌ಗೆ ಅಕ್ರಮ ಪ್ರವೇಶಿಸಿ ಬೈಕುಗಳಿಗೆ ಬೆಂಕಿ ಇಟ್ಟಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಭಟ್ಕಳದ ಪುರವರ್ಗದ ಮುಗಳಿಹೊಂಡದಲ್ಲಿನ ಮನೆಯೊಂದರ ಮುಂದೆ ನಿಲ್ಲಿಸಿದ್ದ ಎರಡು ಬೈಕುಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವುದು.