ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲಾ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಡೆದ ಸಂಘಟನ್ ಸೃಜನ್ ಅಭಿಯಾನ ಸಭೆಯಲ್ಲಿ ನಡೆದ ದಾಂಧಲೆ ಹಿನ್ನಲೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾನಂದಿನಿಗೌಡ ಹಾಗೂ ಪ್ರೊಫೆಷನಲ್ ಸೆಲ್ ಉಪಾಧ್ಯಕ್ಷ ಗುರುರಾಜ ಶೆಟ್ಟಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಶೋಕಾಸ್ ನೋಟೀಸು ಜಾರಿ ಮಾಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಂಘಟನ್ ಸೃಜನ್ ಅಭಿಯಾನ್ ಸಭೆ ಆರಂಭದಲ್ಲಿ ಅಸ್ಸಾಂನಿಂದ ಜಿಲ್ಲೆಗೆ ವೀಕ್ಷಕರಾಗಿ ಆಗಮಿಸಿರುವ ರಿಪುನ್ ಬೊಹರಾ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಬಿ.ಟಿ.ಜಗದೀಶ್ ಆಗಮಿಸಿದಾಗ ಬೆಂಬಲಿಗರು ಜೈಕಾರ ಹಾಕುತ್ತ ಗದ್ದಲ ಸೃಷ್ಠಿಸಿದರು. ನಗರಸಭೆ ಮಾಜಿ ಉಪಾಧ್ಯಕ್ಷ ಎಸ್.ಬಿ.ಎಲ್ ಮಲ್ಲಿಕಾರ್ಜುನ್ ಬಿ.ಟಿ.ಜಗದೀಶ್‍ವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬೇಕೆಂದು ಏರು ಧ್ವನಿಯಲ್ಲಿ ಕೂಗಿ ಪ್ಲೇಕಾರ್ಡ್ ಪ್ರದರ್ಶಿಸಿದರು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಂ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ ಇವರು ವೇದಿಕೆ ಹತ್ತಿ ಬಿ.ಟಿ.ಜಗದೀಶ್ ಪರ ಘೋಷಣೆಗಳನ್ನು ಕೂಗಿದಾಗ ಇಡೀ ಸಭೆ ಗೊಂದಲದ ಗೂಡಾಯಿತು.

ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪನವರು ಶಿಸ್ತಿಲ್ಲದ ನಿಮ್ಮ ನಡೆಯನ್ನು ಸಹಿಸುವುದಿಲ್ಲ. ಬಿಜೆಪಿ ಬೆಂಬಲಿಗರ ತರ ಕಾಣುತ್ತೀರ ಎಂದಾಗ ಶ್ರೀರಾಮ್ ಮತ್ತಿತರರು ಉಗ್ರಪ್ಪನವರ ಮೇಲೆ ಹರಿಹಾಯ್ದರು. ಇಡೀ ಸಭೆ ನಿಯಂತ್ರಿಸಲು ಮುಂದಾದ ಉಗ್ರಪ್ಪ , ನಿಮ್ಮ ಗೊಡ್ಡು ಬೆದರಿಕೆಗಳಿಗೆಲ್ಲಾ ಜಗಲ್ಲ. ಸಭೆಯಿಂದ ಹೊರ ನಡೆಯಿರಿ ಎಂದು ಗದರಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ 60 ಆಕಾಂಕ್ಷಿಗಳ ಹೆಸರುಗಳನ್ನು ಸೌಗಂಧಿಕ ರಘುನಾಥ್ ಓದಿ ಇದರಲ್ಲಿ ಒಬ್ಬರ ಹೆಸರನ್ನು ಹೈಕಮಾಂಡ್‍ಗೆ ಶಿಫಾರಸ್ಸು ಮಾಡಲಾಗುವುದೆಂದು ಹೇಳಿದಾಗ ಸಭೆಯಲ್ಲಿದ್ದ ಅನೇಕರು ಆಕ್ಷೇಪ ವ್ಯಕ್ತಪಡಿಸಿದರು. ಬೇರೆ ತಾಲೂಕುಗಳಲ್ಲಿ ಸಭೆ ನಡೆಸಿದಾಗ ಆರು ಜನರ ಹೆಸರನ್ನು ಆಯ್ಕೆ ಮಾಡಿ ಪಕ್ಷದ ವರಿಷ್ಟರಿಗೆ ಕಳಿಸಲಾಗುವುದೆಂದು ತಿಳಿಸಿ ಈಗ ಏಕೆ ಒಬ್ಬರ ಹೆಸರನ್ನು ಶಿಫಾರಸ್ಸು ಮಾಡಲಾಗುವುದೆಂದು ಹೇಳುತ್ತಿದ್ದೀರ. ಈ ತಾರತಮ್ಯವೇಕೆ ಎಂದು ಕೆಲವು ಆಕಾಂಕ್ಷಿಗಳು ತಗಾದೆ ತೆಗೆದಾಗ ಮತ್ತೆ ಸಭೆಯಲ್ಲಿ ಗದ್ದಗಳು ಏರ್ಪಟ್ಟವು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ವೀಕ್ಷಕರು ಬಂದಾಗ ಹೇಗಿರಬೇಕೆಂಬುದ ಮೊದಲು ಕಲಿತುಕೊಳ್ಳಿ. ಶಿಸ್ತಿಲ್ಲದೆ ವರ್ತಿಸುವವರಿಗೆ ನೋಟಿಸ್ ಕೊಡಬೇಕಾಗುತ್ತದೆಂದು ಎಚ್ಚರಿಸಿದರು. ಅಸ್ಸಾಂನಿಂದ ಜಿಲ್ಲೆಗೆ ವೀಕ್ಷಕರಾಗಿ ಆಗಮಿಸಿರುವ ರಿಪುನ್ ಬೊಹರಾ ಸುಮ್ಮನೆ ಕುಳಿತು ಎಲ್ಲವನ್ನು ಮೌನವಾಗಿ ವೀಕ್ಷಿಸುತ್ತಿದ್ದರು.

ಇಡೀ ಸಭೆಯ ಒಟ್ಟಾರೆ ಘಟನಾವಳಿಗಳ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಂದ ವರದಿ ಪಡೆದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅಂತಿಮವಾಗಿ ಬಿ.ಟಿ.ಜಗದೀಶ್, ಗೀತಾನಂದಿನಿ ಗೌಡ ಹಾಗೂ ಗುರುರಾಜ ಶೆಟ್ಟಿ ಅವರಿಗೆ ಕಾರಣಕೇಳಿ ನೋಟೀಸು ಜಾರಿ ಮಾಡಿ ವಾರದೊಳಗೆ ಉತ್ತರಿಸುವಂತೆ ತಾಕೀತು ಮಾಡಿದ್ದಾರೆ.