ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರುಗೋವಿಂದ ಕಾರಜೋಳ ಎನ್ನುವುದು ಬರೀ ಹೆಸರಲ್ಲ. ಮಾಜಿ ಉಪ ಮುಖ್ಯಮಂತ್ರಿ, ಮಾಜಿ ಸಮಾಜ ಕಲ್ಯಾ್ಣ ಸಚಿವ, ದಲಿತ ಎಡಗೈ ಸಮುದಾಯದ ರಾಜ್ಯ ನಾಯಕ, ಹಾಲಿ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಸದಸ್ಯರು.
ಇಂತಿಪ್ಪ ಸಂಸದರು ತಮ್ಮದೇ ಆದ ಸಮುದಾಯ ಕಳೆದ ಎರಡು ವರ್ಷಗಳಿಂದ ಹಿರಿಯೂರು ತಾಲೂಕಿನ ಹಲಗಲದ್ದಿ ಗ್ರಾಮದ ಕೊಚ್ಚೆಗುಂಡಿ ನೀರಿನಲ್ಲಿ ಬದುಕು ಸಾಗಿಸುವುದ ಕಂಡ ಮಮ್ಮಲ ಮರುಗಿದ್ದರು. ಕನ್ನಡಪ್ರಭದಲ್ಲಿ ಬಂದ ವರದಿಯನ್ನು ಆಧರಿಸಿ ದಿಶಾ ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಪರಿಸ್ಥಿತಿಯ ಗಂಭೀರತೆ ಅರಿತ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್ ಹದಿನೈದು ದಿನಗಳ ಒಳಗಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು.ದಿಶಾ ಸಭೆ ನಡೆದು ಬರೋಬ್ಬರಿ ಹದಿನೈದು ದಿನಗಳಾಗಿವೆ. ಕೊಚ್ಚೆ ಗುಂಡಿಯ ಬದುಕು ಬದಲಾಗಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್, ನೀಡಿದ ಭರವಸೆ ಅಧಿಕಾರ ವರ್ಗದ ನಡೆಗಳು ಸಾಮಾಜಿಕ ವ್ಯವಸ್ಥೆ ಆಚೆಗೆ ವಿಹರಿಸುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸಂಸದರ ನಿರ್ದೇಶನಗಳ ಗಾಳಿಗೆ ತೂರಿರುವುದು ಸ್ಪಷ್ಪವಾಗಿದೆ.
ಹಿರಿಯೂರು ತಾಲೂಕಿನ ಹಲಗಲದ್ದಿ ಗ್ರಾಮದ ದಲಿತ ಕಾಲೋನಿಯಲ್ಲಿ ಚರಂಡಿ ನೀರು ಮುಂದಕ್ಕೆ ಸಾಗದೆ ದಲಿತರ ಮನೆ ಮುಂಭಾಗ ಸಂಗ್ರಹವಾಗಿ ಹೊಲಸು ವಾಸನೆ ರಾಚಿಸುತ್ತಿತ್ತು. ನಿವಾಸಿಗಳು ಮನೆಯಿಂದ ಹೆಜ್ಜೆ ಇಟ್ಟರೆ ಕೊಚ್ಚೆ ನೀರು ಪಾದಕ್ಕೆ ಸ್ಪರ್ಶ ಆಗುತ್ತಿತ್ತು. ಎರಡು ವರ್ಷಗಳಿಂದ ಚರಂಡಿ ನೀರಿನ ಜೊತೆಗೆ ಬದುಕು ಸಾಗಿಸುವ ಅನಿವಾರ್ಯತೆ ಅವರದ್ದಾಗಿತ್ತು. ಗ್ರಾಮದ ಯುವಕನೋರ್ವ ತನ್ನ ಹೀನಾಯ ಬದುಕನ್ನು ಕನ್ನಡಪ್ರಭದ ಮುಂದೆ ಹರವಿದ್ದ. ಮಮ್ಮಲ ಮರುಗಿದ್ದ. ಸಮಸ್ಯೆಯ ಗಂಭೀರತೆ ಅರಿತು ಕನ್ನಡಪ್ರಭ ವರದಿ ಮಾಡಿ ಅಧಿಕಾರಿ ವರ್ಗವ ಎಚ್ಚರಿಸಿತ್ತು.
ಜುಲೈ 17 ರಂದು ಚಿತ್ರದುರ್ಗದಲ್ಲಿ ನಡೆದ ದಿಶಾ ಸಭೆಯಲ್ಲಿ ಕನ್ನಡಪ್ರಭ ಪತ್ರಿಕೆ ವರದಿ ಉಲ್ಲೇಖ ಮಾಡಿದ್ದ ಸಂಸದ ಗೋವಿಂದ ಕಾರಜೋಳ, ಹಲಗಲದ್ದಿ ಗ್ರಾಮದ ಜನತಾ ಕಾಲೋನಿಯ ಜನರನ್ನು ಅಧಿಕಾರಿಗಳು ಮನುಷ್ಯರು ಎಂದು ಭಾವಿಸಿಯೇ ಇಲ್ಲವೇನೋ ಎಂಬಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಜನತಾ ಕಾಲೋನಿಯಲ್ಲಿ ಸುಮಾರು 30 ಮನೆಗಳಿದ್ದು ಎಲ್ಲರೂ ದಲಿತರೇ ಆಗಿದ್ದಾರೆ. ಹತ್ತರಿಂದ ಹದಿನೈದು ಮನೆಗಳ ಮುಂದಿನ ಚರಂಡಿಯಲ್ಲಿ ಕೊಳಚೆ ನೀರು ನಿಂತು ವರ್ಷವಾಗುತ್ತಾ ಬಂದಿದೆ. ನೀರು ಮುಂದೆ ಹೋಗುವ ಹಾದಿ ಬಂದ್ ಮಾಡಲಾಗಿದೆ. ಅಲ್ಲಿರುವ ಜನರನ್ನು ನೀವು ಏನಂದುಕೊಂಡಿದ್ದೀರಿ ಎಂದು ಕಾರಜೋಳ ಅಧಿಕಾರಿಗಳ ಮೈ ಚಳಿ ಬಿಡಿಸಿದ್ದರು.
ಬೀದಿಯ ಎರಡೂ ಬದಿಯ ಚರಂಡಿಗಳಲ್ಲಿ ವರ್ಷದಿಂದ ನೀರು ನಿಂತಿದ್ದು ಸೊಳ್ಳೆಗಳ ಕಾಟಕ್ಕೆ ಚಿಕ್ಕ ಮಕ್ಕಳು ಸೇರಿದಂತೆ ಬಹಳಷ್ಟು ಜನರು ವಿವಿಧ ರೀತಿಯ ಜ್ವರಗಳಿಗೆ ತುತ್ತಾಗಿದ್ದಾರೆ. ದುರಂತ ಎಂದರೆ ಒಂದು ಮನೆಯಲ್ಲಿ ಎರಡು ತಿಂಗಳು ಮಗುವಿನ ಬಾಣoತಿ ಇದ್ದು ಇಲ್ಲಿನ ಅವ್ಯವಸ್ಥೆಗೆ ಹೆದರಿ ಅವರು ಸಂಬಂಧಿಕರ ಮನೆ ಸೇರಿದ್ದಾರೆ.ಇನ್ನು ಚರಂಡಿ ನೀರಿನೊಳಗಿನ ಕಸ ಕಡ್ಡಿ ಕೊಳಚೆಯನ್ನು ಯುಗಾದಿ ಹಬ್ಬದಲ್ಲಿ ತೆಗೆದು ರಸ್ತೆ ಮೇಲೆ ಹಾಕಿರುವುದು ನಾಲ್ಕು ತಿಂಗಳಾದರೂ ಅಲ್ಲೇ ಇದೆ. ಹೆಚ್ಚಾದ ಚರಂಡಿ ನೀರು ರಸ್ತೆ ಮೇಲೆ ಬಂದು ರಸ್ತೆಯು ಪಾಚಿ ಕಟ್ಟಿದಂತಾಗಿದೆ.ಸ್ಥಳೀಯ ನಿವಾಸಿಗಳು ಈಗಾಗಲೇ ಹಲವು ಬಾರಿ ಮನವಿ ಮಾಡಿದರು ಸಹ ಯಾವ ಪ್ರಯೋಜನವಾಗಿಲ್ಲ. ಈ ಮಧ್ಯೆ ಅಬ್ಬಿನಹೊಳೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ದೇವರಾಜ್ ರವರು ಅಲ್ಲಿನ ಜನರ ಪರಿಸ್ಥಿತಿಗೆ ಮರುಗಿ ಚರಂಡಿ ನೀರು ಸಾಗಿಸಲು 6 ಮೀಟರ್ ನ ಸುಮಾರು 60 ಅಡಿಯಷ್ಟು ಉದ್ದದ ಮೂರು ಪೈಪ್ ಗಳನ್ನು ತೆಗೆದುಕೊಂಡು ಹೋಗಿ ಜನತಾ ಕಾಲೋನಿಯಲ್ಲಿ ಇಳಿಸಿದ್ದಾರೆ. ಆದರೆ ಅಲ್ಲಿನ ಸಮಸ್ಯೆ ಪರಿಹರಿಸಿ ಪೈಪ್ ಗಳನ್ನು ನೆಲ ಸೇರಿಸಿ ಸರಾಗವಾಗಿ ಚರಂಡಿ ನೀರು ಮುಂದೆ ಸಾಗುವಂತೆ ಮಾಡಬೇಕಾದ ಅಧಿಕಾರಿಗಳಿಗೆ ಪುರುಸೊತ್ತೇ ಇದ್ದಂತಿಲ್ಲ.