ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, 2024-25ನೇ ಸಾಲಿನಲ್ಲಿ ಒಟ್ಟು 545.04 ಕೋಟಿ ವ್ಯವಹಾರ ನಡೆಸಿ 1.93 ಕೋಟಿ ರು. ಲಾಭಗಳಿಸಿದೆ ಎಂದು ಸಂಘ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದ್ದಾರೆ.ಸಿದ್ದಕಟ್ಟೆಯಲ್ಲಿರುವ ಸಂಘದ ಪ್ರಧಾನ ಕಚೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ್ದಾರೆ.
ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ ಜಿಲ್ಲಾಮಟ್ಟದಲ್ಲಿಯೇ ಗರಿಷ್ಠ ಸಾಧನೆ ಮಾಡಲಾಗಿದೆ ಎಂದು ಹೇಳಿದ ಅವರು, ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಬೆರಳೆಣಿಕೆಯ ಸಹಕಾರಿ ಸಂಘಗಳಲ್ಲಿ ನಮ್ಮ ಸಂಘವೂ ಒಂದು. 2024-25ನೇ ಸಾಲಿನಲ್ಲಿ 1771 ರೈತರು 2037 ಎಕ್ರೆ ಜಮೀನಿಗೆ ಸಂಬಂಧಿಸಿದಂತೆ 52.74 ಲಕ್ಷ ರು. ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ಸಂಬಂಧಿಸಿ ರೈತರಿಂದ ಪ್ರೀಮಿಯಂ ಪಾವತಿಸಲಾಗಿದೆ. ಕಳೆದ ವರ್ಷ ಸಂಘದ ವ್ಯಾಪ್ತಿಯ ಸದಸ್ಯರು ಸುಮಾರು 5-6 ಕೋಟಿ ರು. ಬೆಳೆವಿಮೆ ಪರಿಹಾರ ಪಡೆದಿರುತ್ತಾರೆ ಎಂದರು.ಸಿದ್ದಕಟ್ಟೆ ಪ್ರಧಾನ ಕಚೇರಿ ಸೇರಿದಂತೆ, ಸಂಘವು ಆರಂಬೋಡಿ, ರಾಯಿ, ಮಾವಿನಕಟ್ಟೆ, ಅರಳ ಎಂಬಲ್ಲಿ ಒಟ್ಟು ನಾಲ್ಕು ಶಾಖೆಗಳನ್ನು ಹೊಂದಿದ್ದು, ಗ್ರಾಹಕರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಆರ್‌ಟಿಜಿಎಸ್, ನೆಫ್ಟ್ ವ್ಯವಸ್ಥೆಯೊಂದಿಗೆ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.20ರಂದು ಮಹಾಸಭೆ:ಸಾರ್ವಜನಿಕ ಕಾರ್ಯಕ್ರಮಕ್ಕೆ ಅನೂಕೂಲವಾಗುವಂತೆ ಸಂಘದ ಸ್ಥಾಪಕ ಅಧ್ಯಕ್ಷ ಬೆಳ್ಳಿಪ್ಪಾಡಿ ಕೃಷ್ಣ ರೈ ಅವರ ಸವಿನೆನಪಿಗಾಗಿ ಅವರ ಹೆಸರಿನಲ್ಲಿ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರ ಕಾರ್ಯಕ್ರಮಗಳಿಗೆ ಸಭಾಂಗಣವನ್ನು ಉಚಿತವಾಗಿ ನೀಡಲಾಗುತ್ತಿದೆ. 2024-25ನೇ ಸಾಲಿನ ಮಹಾಸಭೆ ಸೆ.20ರಂದು ಶನಿವಾರ ಬೆಳಗ್ಗೆ 10.30ಕ್ಕೆ ಸಂಘದ ಕೇಂದ್ರ ಕಚೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಜರಗಲಿದ್ದು, ಸಂಘದ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಪ್ರತಿಭಾ ಪುರಸ್ಕಾರ:ಸಂಘದ ಸದಸ್ಯರ ಪ್ರತಿಭಾನ್ವಿತ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದವರನ್ನು ಗೌರವಿಸಲಾಗುತ್ತದೆ. ರೈತ ಕಲ್ಯಾಣ ನಿಧಿ ಯೋಜನೆ:
ಸಂಘದಿಂದ ಬೆಳೆ ಸಾಲ ಪಡೆದ ಸದಸ್ಯರು ಮರಣ ಹೊಂದಿದ್ದಲ್ಲಿ, ಅವರ ಕುಟುಂಬಕ್ಕೆ ಸಂಘದ ವತಿಯಿಂದ ನೆರವಾಗುವ ದೃಷ್ಠಿಯಲ್ಲಿ ‘ರೈತ ಕಲ್ಯಾಣ ನಿಧಿ’ ಯೋಜನೆಯ ಮೂಲಕ 10000 ರು.ನಂತೆ 24 ಮಂದಿಗೆ ಆರ್ಥಿಕವಾಗಿ ಸಹಕಾರ ನೀಡಲಾಗಿದೆ.ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ, ನಿರ್ದೇಶಕರಾದ ದಿನೇಶ್ ಪೂಜಾರಿ, ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಜಾರಪ್ಪ ನಾಯ್ಕ, ವೀರಪ್ಪ ಪರವ, ಶಿವ ಗೌಡ, ಪುಷ್ಪಲತಾ ಎಸ್.ಆರ್., ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೆ., ನವೀನ್ ಹೆಗ್ಡೆ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ, ಸಹಾಯಕ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಮಲ್ಲಿಕಾ ಉಪಸ್ಥಿತರಿದ್ದರು.