ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಕನ್ನಡ ಅಭಿವೃದ್ಧಿ ಪ್ರಾಧಿಕಾರ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕುಂದಾಪುರದ ಗುಲ್ವಾಡಿ ಟಾಕೀಸ್ ಹಾಗೂ ಕೋಟದ ಉಸಿರು ಅಧ್ಯಯನ ತರಬೇತಿ ಕೇಂದ್ರಗಳ ಸಹಯೋಗದಲ್ಲಿ ಸಾಹಿತಿ, ಹಿರಿಯ ಪೊಲೀಸ್ ಅಧಿಕಾರಿ ಧರಣಿದೇವಿ ಮಾಲಗತ್ತಿ ಅವರಿಗೆ ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ ಹಾಗೂ ಸಾಹಿತಿ ಸಂಶೋಧಕ ಮೊಹಮ್ಮದ್ ರಫೀ ಪಾಷ ಅವರಿಗೆ ಸಂತೋಷ ಕುಮಾರ ಗುಲ್ವಾಡಿ ಪ್ರಶಸ್ತಿಗಳನ್ನು ಶನಿವಾರ ಪ್ರದಾನ ಮಾಡಲಾಯಿತು.ಈ ಸಂದರ್ಭ ಗುಲ್ವಾಡಿ ವೆಂಕಟರಾವ್ ಅವರ ಇಂದಿರಾಬಾಯಿ ಕೃತಿಯಲ್ಲಿನ ಮಹಿಳಾ ಸಾಮಾಜಿಕ ಸ್ಥಿತ್ಯಂತರಗಳು ಎಂಬ ಬಗ್ಗೆ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಮಾತನಾಡಿದ ಧರಣಿದೇವಿ ಮಾಲಗತ್ತಿ, ಸುಮಾರು ನೂರು ವರ್ಷಗಳ ಹಿಂದೆಯೇ ಗುಲ್ವಾಡಿ ಅವರು ಸಮಾಜದಲ್ಲಿದ ಮೌಡ್ಯಗಳ ವಿರುದ್ಧ ಈ ಕಾದಂಬರಿಯ ಮೂಲಕ ದನಿ ಎತ್ತಿದ್ದರು. ವಿಧವಾ ವಿವಾಹ ಮತ್ತು ಮಹಿಳಾ ಶಿಕ್ಷಣಕ್ಕೆ ಸಂಬಂಧಿಸಿದ ಈ ಕಾದಂಬರಿ ಅಂದಿನ ಸಾಂಸ್ಕೃತಿಕ ಇತಿಹಾಸವನ್ನು ತೆರೆದಿಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಈ ಕೃತಿಯನ್ನು ಓದಬೇಕು ಎಂದು ಆಶಿಸಿದರು.ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಗುಲ್ವಾಡಿ ಅವರು ತಮ್ಮ ಕಾದಂಬರಿಯಲ್ಲಿ ಆ ಕಾಲದ ಸಮಾಜದ ವಿವಿಧ ಸ್ಥಿತ್ಯಂತರಗಳನ್ನು ದಾಖಲಿಸಿದ್ದಾರೆ. ಇದೊಂದು ಇತಿಹಾಸ ರೂಪ ಕಾದಂಬರಿಯಾದ್ದರಿಂದ ಅಧ್ಯಯನಕ್ಕೆ ಯೋಗ್ಯವಾಗಿದೆ ಎಂದರು.ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಗಣನಾಥ ಎಕ್ಕಾರು, ವಿದ್ವಾಂಸ ಪಾದೆಕಲ್ಲು ವಿಷ್ಣುಭಟ್, ಡಾ. ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸೋಜಾನ್ ಕೆ.ಜಿ., ವಾಣಿಜ್ಯ ತೆರಿಗೆಗಳ ಉಪಆಯುಕ್ತ ಹೊಳೆಯಪ್ಪ ಉಪಸ್ಥಿತರಿದ್ದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು. ಯಾಕೂಬ್ ಖಾದರ್ ಗುಲ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನರೇಂದ್ರ ಕುಮಾರ್ ಕೋಟ, ಸತೀಶ್ ವಡ್ಡರ್ಸೆ, ಪುಂಡಲೀಕ ಮರಾಠೆ, ರಾಮಚಂದ್ರ ಐತಾಳ ಗುಂಡ್ಮಿ ನಿರ್ವಹಣೆ ಮಾಡಿದರು. ಪಿ. ಮನೋಹರ್ ಭಟ್ ವಂದಿಸಿದರು.