ಉಡುಪಿ: ಕೃಷ್ಣಮಠದಲ್ಲಿ ಇಂದು ಕೃಷ್ಣ ಜನ್ಮಾಷ್ಟಮಿ, ನಾಳೆ ವಿಟ್ಲಪಿಂಡಿ

| N/A | Published : Sep 14 2025, 01:06 AM IST / Updated: Sep 14 2025, 12:36 PM IST

Udupi krishna mutt

ಸಾರಾಂಶ

ಸಂಪ್ರದಾಯದಂತೆ ಇಂದು ಮಧ್ಯರಾತ್ರಿ 12.11ರ ಸಮುಹೂರ್ತದಲ್ಲಿ ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಗಳು ಕೃಷ್ಣನಿಗೆ ಮತ್ತು ಚಂದ್ರನಿಗೆ ಅರ್ಘ್ಯ ಪ್ರದಾನ ಮಾಡಲಿದ್ದಾರೆ, ನಂತರ ಭಕ್ತರು ಅರ್ಘ್ಯ ಪ್ರದಾನ ಮಾಡುತ್ತಾರೆ.

  ಉಡುಪಿ :  ಉಡುಪಿ ಶ್ರೀ ಕೃಷ್ಣಮಠದಲ್ಲಿ ಇಂದು ಭಕ್ತಿ ಶ್ರದ್ಧೆಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ನಾಳೆ ವೈಭವದ ವಿಟ್ಲಪಿಂಡಿ - ಶ್ರೀ ಕೃಷ್ಣ ಲೀಲೋತ್ಸವಗಳು ನಡೆಯಲಿವೆ.ಸಂಪ್ರದಾಯದಂತೆ ಇಂದು ಮಧ್ಯರಾತ್ರಿ 12.11ರ ಸಮುಹೂರ್ತದಲ್ಲಿ ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಗಳು ಕೃಷ್ಣನಿಗೆ ಮತ್ತು ಚಂದ್ರನಿಗೆ ಅರ್ಘ್ಯ ಪ್ರದಾನ ಮಾಡಲಿದ್ದಾರೆ, ನಂತರ ಭಕ್ತರು ಅರ್ಘ್ಯ ಪ್ರದಾನ ಮಾಡುತ್ತಾರೆ. 

ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಸಂಕಲ್ಪದಂತೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಭಗವದ್ಭಕ್ತರು 1008 ಬಾರಿ, ಸ್ವಾಮೀ ಶ್ರೀ ಕೃಷ್ಣಾಯ ನಮಃ ಮಂತ್ರ ಪಠಣ ಮಾಡಲಿದ್ದಾರೆ. ಬೆಳಿಗ್ಗೆ 9 ರಿಂದ ಮಧ್ವಮಂಟಪದಲ್ಲಿ ಶ್ರೀಮಠದ ವತಿಯಿಂದ ಮುದ್ದು ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನೂರಾರು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಂಜೆ ರಾಜಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಲಿದೆ. 

ಮಧ್ಯರಾತ್ರಿ 11 ಗಂಟೆಗೆ ಮಹಾಪೂಜೆಯ ವೇಳೆಗೆ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಬಾಲ ಶ್ರೀಕೃಷ್ಣನಿಗೆ ಅರ್ಪಿಸಿ, ನಾಳೆ ಭಕ್ತರಿಗೆ ವಿತರಿಸುವುದಕ್ಕಾಗಿ ಸುಮಾರು 1.50 ಲಕ್ಷ ಚಕ್ಕುಲಿ, 3.50 ಲಕ್ಷ ವಿವಿಧ ಬಗೆಯ ಉಂಡೆಗಳನ್ನು ನೂರಾರು ಮಂದಿ ಬಾಣಸಿಗರು ತಯಾರಿಸಿದ್ದಾರೆ.ಈ ಪೂಜೆ ಅರ್ಘ್ಯ ಪ್ರದಾನ ಕಾರ್ಯಕ್ರಮಗಳು ಮಠದೊಳಗೆ ನಡೆಯುವ ಸಂಪ್ರದಾಯಗಳಾದರೆ, ನಾಳೆ ಮಧ್ಯಾಹ್ನ 3 ಗಂಟೆಯಿಂದ ಹೊರಗೆ ರಥಬೀದಿಯಲ್ಲಿ ಅದ್ದೂರಿಯ ಶ್ರೀ ಕೃಷ್ಣ ಲೀಲೋತ್ಸವ ನಡೆಯಲಿದೆ. ಲಕ್ಷಾಂತರ ಮಂದಿ ಭಾಗವಹಿಸುವ ಈ ಉತ್ಸವದಲ್ಲಿ ಕೃಷ್ಣನ ಮೃಣ್ಮಯ ವಿಗ್ರಹಕ್ಕೆ ರಥೋತ್ಸವ ನಡೆಯಲಿದೆ. ಶ್ರೀಗಳಿಂದ ಸಾರ್ವಜನಿಕರಿಗೆ ಚಕ್ಕುಲಿ ಉಂಡೆ ವಿತರಣೆ ನಡೆಯಲಿದೆ. 

ಶ್ರೀ ಕೃಷ್ಣ ಲೀಲೋತ್ಸವದ ಪ್ರಧಾನ ಆಕರ್ಷಣೆ ವಿಟ್ಲ ಪಿಂಡಿ ಅಥವಾ ಮೊಸರು ಕುಡಿಕೆ ಒಡೆಯುವುದು, ಅದಕ್ಕಾಗಿ ರಥಬೀದಿಯ 12 ಕಡೆಗಳಲ್ಲಿ ಮೊಸರು, ಕಜ್ಜಾಯ, ಓಕುಳಿ ತುಂಬಿದ ಕುಡಿಕೆಗಳನ್ನು ಕಟ್ಟುವುದಕ್ಕೆ ಗುಜ್ಜಿಗಳನ್ನು ನಿರ್ಮಿಸಲಾಗಿದೆ. ಗೊಲ್ಲ ವೇಷಧಾರಿಗಳು ಕುಣಿಯುತ್ತಾ ಈ ಕುಡಿಕೆಗಳನ್ನು ಒಡೆದು ಕೃಷ್ಣನ ಬಾಲ ಲೀಲೆಗಳನ್ನು ಪ್ರದರ್ಶಿಸಲಿದ್ದಾರೆ. ಈ ಉತ್ಸವದ ಇನ್ನೊಂದು ಆಕರ್ಷಣೆ ಹುಲಿವೇಷ ಕುಣಿತ, ಈ ಬಾರಿ ಸುಮಾರು 20ಕ್ಕೂ ಹೆಚ್ಚು ತಂಡಗಳು ಹುಲಿವೇಷ ಧರಿಸಿ ಉಡುಪಿಯಾದ್ಯಂತ ಕುಣಿಯಲಿಕ್ಕೆ ಈಗಾಗಲೇ ಸಿದ್ದತೆಗಳನ್ನು ಮಾಡಿಕೊಂಡಿವೆ. ಪುತ್ತಿಗೆ ಮಠದ ವತಿಯಿಂದ ಹುಲಿವೇಷ ಕುಣಿತದ ಸ್ಪರ್ಧೆಯೂ ನಡೆಯಲಿದ್ದು, 1 ಲಕ್ಷ ರು.ಗಳ ಪ್ರಥಮ ಬಹುಮಾನವನ್ನು ನೀಡಲಾಗುತ್ತದೆ.- 

ನಗರದ 10 ಕಡೆಗಳಲ್ಲಿ ಆಲಾರೇ ಗೋವಿಂದ.. !

ಮುಂಬೈಯ ಬಾಲಮಿತ್ರ ಮಂಡಳಿಯ ಸುಮಾರು 120 ಮಂದಿ ಆಲಾರೇ ಗೋವಿಂದ ಕಲಾವಿದರು ಆಗಮಿಸಿದ್ದು, ಉಡುಪಿ ನಗರದ 10 ಕಡೆಗಳಲ್ಲಿ ಮೊಸರು ಕುಡಿಕೆ ಒಡೆಯುವ ಮೈನವಿರೇಳಿಸುವ ಸಾಹಸವನ್ನು ಪ್ರದರ್ಶಿಸಲಿದ್ದಾರೆ. ಈ ಕಲಾವಿದರು ಸುತ್ತಲು ಒಬ್ಬರ ಮೇಲೆ ಒಬ್ಬರು 7 ಹಂತಗಳಲ್ಲಿ ನಿಂತು 50 ಅಡಿ ಎತ್ತರದಲ್ಲಿ ಕಟ್ಟಿರುವ ಕುಡಿಕೆಗಳನ್ನು ಒಡೆಯಲಿದ್ದಾರೆ. 2012ರಿಂದ ಮುಂಬೈಯ ಉದ್ಯಮಿ ಮಧುಸೂಧನ ಕೆಮ್ಮಣ್ಣು ಅವರು ಈ ಕಾರ್ಯಕ್ರಮವನ್ನು ಸುಮಾರು 12 ಲಕ್ಷ ರು. ವೆಚ್ಚದಲ್ಲಿ ಆಯೋಜಿಸುತ್ತಿದ್ದಾರೆ.

Read more Articles on