ಸಾರಾಂಶ
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಪ್ರಕರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು. ನಿಷ್ಠೆ ರಾಮನಿಗೆ ಇಲ್ಲದಿರುವುದರಿಂದಲೇ ಹೀಗೆ ನಡೆದುಕೊಳ್ಳುತ್ತಿದ್ದಾರೆ. ನಾವು ಯಾವುದೇ ಧರ್ಮಕ್ಕೆ ವಿರೋಧವಿಲ್ಲ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮನಿದ್ದಾನೆ. ಆದರೆ ಅವರ ನಿಷ್ಠೆಯೆಲ್ಲಾ ರಹೀಮನಿಗೆ ಎಂದು ಸಂಸದ ಪ್ರತಾಪ್‌ಸಿಂಹ ವ್ಯಂಗ್ಯವಾಡಿದ್ದಾರೆ.ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಪ್ರಕರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಮಡಿಕೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.ಅವರ ನಿಷ್ಠೆ ರಾಮನಿಗೆ ಇಲ್ಲದಿರುವುದರಿಂದಲೇ ಹೀಗೆ ನಡೆದುಕೊಳ್ಳುತ್ತಿದ್ದಾರೆ. ನಾವು ಯಾವುದೇ ಧರ್ಮಕ್ಕೆ ವಿರೋಧವಿಲ್ಲ. ಹಬ್ಬ ಹರಿದಿನಗಳಾದಾಗ ರಸ್ತೆಯಲ್ಲಿ ಜಾತ್ರೆ ನಡೆಯುತ್ತದೆ. ರಸ್ತೆಯಲ್ಲಿ ನಮಾಜ್ ಕೂಡ ನಡೆಯುತ್ತದೆ. ನಾವು ಯಾವುದಕ್ಕೂ ವಿರೋಧ ಮಾಡುವುದಿಲ್ಲ. ಆದರೆ ಮೊನ್ನೆ ರಾಮಜನ್ಮ ಭೂಮಿಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ನಡೆಯಿತು. ಆ ಸಂದರ್ಭದಲ್ಲಿ ಫ್ಲೆಕ್ಸ್ ಹಾಕಬೇಡಿ ಅಂದ್ರು. ಬ್ಯಾನರ್ ಹಾಕಬೇಡಿ, ರಸ್ತೆಯಲ್ಲಿ ದೀಪ ಹಚ್ಚಬೇಡಿ ಎಂದರು. ಇದನ್ನು ನೋಡಿದರೆ ಇವರ ನಿಷ್ಠೆ ರಹೀಮನಿಗೆ ಎನ್ನುವುದು ಸ್ಪಷ್ಟ ಎಂದು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.* ಕಾಂಗ್ರೆಸ್ ಅಧಿಕಾರಕ್ಕಾಗಿ ಹೋರಾಟಆರ್‌ಎಸ್‌ಎಸ್ ಎಂದೂ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಪ್ರತಾಪ ಸಿಂಹ ತಿರುಗೇಟು ನೀಡಿದ್ದು, 1857ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಅದಕ್ಕೆ ಕಾಂಗ್ರೆಸ್ ಕೊಡುಗೆ ಏನು? ಅಂದು ಆಗಿನ್ನು ಕಾಂಗ್ರೆಸ್ ಸ್ಥಾಪನೆಯೇ ಆಗಿರಲಿಲ್ಲ. ಹಾಗಾಗಿ ಇಂತಹ ಅಸಂಬದ್ಧವಾಗಿ ಸಿದ್ದರಾಮಯ್ಯ ಅವರು ಮಾತನಾಡುತ್ತಾರೆ ಎಂದು ಹೇಳಿದರು.1920ರಲ್ಲಿ ಆರ್‌ಎಸ್‌ಎಸ್ ಸ್ಥಾಪನೆ ಆಗುವಷ್ಟರಲ್ಲಿ ತಿಲಕರು ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದರು. 1920ರಲ್ಲಿ ಗಾಂಧೀಜಿಯವರ ನೇತೃತ್ವಕ್ಕೆ ಹೋರಾಟ ಹೋಯ್ತು. ಲಕ್ಷಾಂತರ ಕ್ರಾಂತಿಕಾರಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಸ್ವಾತಂತ್ರ್ಯ ಕೊಡುವ ಕಾಲ ಸನ್ನಿಹಿತವಾಗಿದೆ ಎನ್ನುವಂತಿತ್ತು. ಆಗ ಕೇಶವ ಬಲಿರಾಂ ಹೆಡಗೆವಾರ್ ಅವರು ಅಂದು ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿದ್ದರು. ಇದೇ ವೇಳೆ ಮೊಹಮ್ಮದ್ ಆಲಿ ಜಿನ್ನಾ ಅವರು ಪ್ರತ್ಯೇಕ ಮುಸ್ಲಿಂ ರಾಷ್ಟ್ರಕ್ಕಾಗಿ ಹೋರಾಡುತ್ತಿದ್ದರು. ಹೀಗಾಗಿ ಧರ್ಮದ ಆಧಾರದಲ್ಲಿ ದೇಶ ಒಡೆಯುತ್ತಿದ್ದದ್ದನು ತಡೆಯುವುದಕ್ಕಾಗಿ ಸಂಘ ಸ್ಥಾಪನೆಯಾಯಿತು ಎಂದು ಅಭಿಪ್ರಾಯಪಟ್ಟರು.
ನೆಹರು ಪ್ರಧಾನಿಯಾಗುವುದಕ್ಕಾಗಿ ಆತುರವಾಗಿ ದೇಶವನ್ನು ಹೊಡೆಯಲು ಅವಕಾಶ ಕೊಟ್ಟರು. ನೆಹರು ಪ್ರತ್ಯೇಕ ದೇಶ ಕೊಡಲ್ಲ ಅಂತ ಯಾವತ್ತೂ ಮಾತನಾಡಲಿಲ್ಲ. ಹೀಗಾಗಿ ಕಾಂಗ್ರೆಸ್‌ನವರು ಯಾವಾಗಲೂ ಅಧಿಕಾರಕ್ಕಾಗಿ ಹೋರಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಎಂದು ಹೋರಾಡಿಲ್ಲ. ಹೀಗಾಗಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ನಮಗೆ ಇವರು ಪಾಠ ಮಾಡಬೇಕಾಗಿಲ್ಲ ಸಿಎಂ ಸಿದ್ದರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.