ಹುಬ್ಬಳ್ಳಿ:

ಪ್ರತ್ಯೇಕ ಉತ್ತರ ಕಲ್ಯಾಣ ಕರ್ನಾಟಕ ರಾಜ್ಯ ರಚಿಸಬೇಕೆಂದು ಆಗ್ರಹಿಸಿ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಮುಖಂಡರು ಗುರುವಾರ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು. ಈ ಮೂಲಕ ಮತ್ತೆ ಪ್ರತ್ಯೇಕ ರಾಜ್ಯದ ಕೂಗು ಮೊಳಗಿದೆ.

ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಅಲ್ಲಿಂದ ಅಂಬೇಡ್ಕರ್‌ ವೃತ್ತದ ವರೆಗೂ ಮೌನ ಮೆರವಣಿಗೆ ನಡೆಸಿ ಅಲ್ಲಿ 1 ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಉತ್ತರ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುಮಾರ ಹಕಾರಿ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿ ಶೂನ್ಯವಾಗಿದೆ. ಎಲ್ಲ ಸರ್ಕಾರಗಳು ಈ ಭಾಗವನ್ನು ಕಡೆಗಣಿಸಿವೆ. ಕೈಗಾರಿಕೆ, ಶಿಕ್ಷಣ, ಉದ್ಯೋಗ, ಕೃಷಿ, ನೀರಾವರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಎಂದರೆ ಸರ್ಕಾರಗಳಿಗೆ ಮಲತಾಯಿ ಧೋರಣೆ ಅನುಸರಿಸುತ್ತಿವೆ. ಇದರಿಂದ ಈ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಆದ್ದರಿಂದ ಕಿತ್ತೂರ ಹಾಗೂ ಕಲ್ಯಾಣ ಕರ್ನಾಟಕದ ೧೬ ಜಿಲ್ಲೆಗಳನ್ನು ಒಳಗೊಂಡ ಪ್ರತ್ಯೇಕ ರಾಜ್ಯ ರಚನೆಗೆ ಸರ್ಕಾರ ಮುಂದಾಗಬೇಕು ಎಂದರು.

ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ಈ ಭಾಗ ಅಭಿವೃದ್ಧಿಯಾಗಲು ಪ್ರತ್ಯೇಕ ರಾಜ್ಯವಾಗುವುದು ಅನಿವಾರ್ಯ. ಸದ್ಯ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.


ಸಮಿತಿ ಉಪಾಧ್ಯಕ್ಷ ಈರಪ್ಪ ಎಮ್ಮಿ, ಕಾರ್ಯದರ್ಶಿ ಕಿರಣ್ ರಡ್ಡೇರ, ಸಂಜೀವಗೌಡ ಮಾಳಗಿ, ಹರೀಶ ಗುಂಟ್ರಾಳ ಹಾಗೂ ವಕೀಲ ಶಿವರೆಡ್ಡಿ ರಡ್ಡೇರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.