ಹಾವೇರಿ: ಮತದಾರ ಪಟ್ಟಿ ಪರಿಷ್ಕರಣೆ ಸಂಪೂರ್ಣ ಪ್ರಕ್ರಿಯೆಯು ರಾಜ್ಯ ಸರ್ಕಾರಿ ನೌಕರರ ಕೈಯಲ್ಲಿದೆ. ಅದರಲ್ಲೂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಇದು ಇನ್ನಷ್ಟು ಅಪಾಯಕಾರಿಯಾಗಿದೆ. ಈ ಪ್ರಕ್ರಿಯೆಯು ಬಹಳ ಗಂಭೀರವಾಗಿದ್ದು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಳಮಟ್ಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಇಲ್ಲಿಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪಕ್ಷದ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶಾದ್ಯಂತ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ನಮಗೆ ಹೊಸದಾಗಿದ್ದು, ಪಕ್ಷದ ಕಾರ್ಯಕರ್ತರು ನಿರಂತರವಾಗಿ ಒಂದು ತಿಂಗಳ ಕಾಲ ಮೈಮುರಿದು ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆಯುತ್ತಿರುವ ''''''''ಮ್ಯಾಪಿಂಗ್'''''''' ಮತ್ತು ಪ್ರೊಜನಿ ಪ್ರಕ್ರಿಯೆ ಬಗ್ಗೆ ವಿವರಿಸಿದ ಅವರು, "ಮ್ಯಾಪಿಂಗ್ ಎಂದರೆ ಒಂದೇ ಹೆಸರು ಎರಡು ಬಾರಿ ಇರುವುದನ್ನು ಸಾಫ್ಟ್‌ವೇರ್ ಮೂಲಕ ತೆಗೆದುಹಾಕುವುದು. ಇನ್ನು ಪ್ರೊಜನಿ ಎಂದರೆ ಹಳೆಯ ದಾಖಲೆಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು. ಆದರೆ ಈ ಸಂಪೂರ್ಣ ಪ್ರಕ್ರಿಯೆಯು ರಾಜ್ಯ ಸರ್ಕಾರಿ ನೌಕರರ ಕೈಯಲ್ಲಿದೆ. ಅದರಲ್ಲೂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಇದು ಇನ್ನಷ್ಟು ಅಪಾಯಕಾರಿಯಾಗಿದೆ. ಅಧಿಕಾರಿಗಳ ಮೇಲೆ ಯಾವ ರೀತಿಯ ಒತ್ತಡ ಹೇರಲಾಗುತ್ತಿದೆ ಎಂಬುದನ್ನು ನಾವು ಗಮನಿಸುತ್ತಿದ್ದೇವೆ ಎಂದು ಹೇಳಿದರು.
ಅಧಿಕಾರಿಗಳ ನಡೆಗೆ ಆಕ್ಷೇಪ:ಬಂಕಾಪುರದಲ್ಲಿ ಮಸೀದಿಯೊಂದರಲ್ಲಿ ನಡೆದ ಪ್ರಕ್ರಿಯೆಯ ಕುರಿತು ವಿಡಿಯೋ ಸಾಕ್ಷ್ಯಗಳನ್ನು ನೀಡಿದ್ದರೂ ಸಹ, ಜಿಲ್ಲಾಧಿಕಾರಿಗಳು ಅಲ್ಲಿ ಏನೂ ನಡೆದಿಲ್ಲ ಎಂದು ಹೇಳುತ್ತಿರುವುದನ್ನು ಖಂಡಿಸಿದ ಅವರು, ದೂರು ನೀಡಿದ ಬಳಿಕವೂ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸದೆ ಹೇಗೆ ಕ್ಲೀನ್ ಚೀಟ್ ನೀಡುತ್ತಾರೆ ಎಂದು ಪ್ರಶ್ನಿಸಿದರು.
ಕಾರ್ಯಕರ್ತರಿಗೆ ಎಚ್ಚರಿಕೆ: ಮುಂದೆ ಯಾರೇ ಎಂಎಲ್‌ಎ ಆಗಬೇಕೆಂದುಕೊಂಡಿದ್ದರೂ, ಎಲ್ಲರೂ ಒಗ್ಗಟ್ಟಾಗಿ, ಕೈಜೋಡಿಸಿ ಕೆಲಸ ಮಾಡಿದರೆ ಮಾತ್ರ ನಮ್ಮಲ್ಲಿ ಒಬ್ಬರು ಎಂಎಲ್‌ಎ ಆಗಲು ಸಾಧ್ಯ. ಇಲ್ಲದಿದ್ದರೆ ಬರೀ ಹೆಸರಷ್ಟೇ ಉಳಿಯುತ್ತದೆ. ಕಾರ್ಯಕರ್ತರು ಕೇವಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅಥವಾ ಭಾಷಣ ಮಾಡುವುದನ್ನು ಬಿಟ್ಟು, ಕನಿಷ್ಠ ಒಂದು ತಿಂಗಳ ಕಾಲ ಕ್ಷೇತ್ರಗಳ ತಳಮಟ್ಟಕ್ಕೆ ಇಳಿದು ಕೆಲಸ ಮಾಡಬೇಕು. ಪ್ರತಿ ಊರು, ಪ್ರತಿ ಬೂತ್ ಮಟ್ಟದಲ್ಲಿ ಬಿಎಲ್‌ಎ-2 ಜೊತೆಗೆ ಇನ್ನು ಐದಾರು ಜನರನ್ನು ಸೇರಿಸಿಕೊಂಡು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕಾಗಿದೆ ಎಂದರು.
ಮತದಾರರ ಪಟ್ಟಿಯ ತಾಂತ್ರಿಕ ಪರಿಷ್ಕರಣೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ನಮ್ಮ ಮತಗಳು ಹೇಗೆ ಕಟ್ ಆಗುತ್ತಿವೆ ಮತ್ತು ಬೇರೆಯವರ ಮತಗಳು ಹೇಗೆ ಸೇರ್ಪಡೆಯಾಗುತ್ತಿವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಕಳೆದ ಚುನಾವಣೆಗಳಲ್ಲಿ ನಡೆದ ತಪ್ಪುಗಳನ್ನು ಸರಿಪಡಿಸಿ, ಮುಂಬರುವ ದಿನಗಳಲ್ಲಿ ಯಾವುದೇ ಲೋಪದೋಷಗಳಾಗದಂತೆ ಎಚ್ಚರಿಕೆ ವಹಿಸಬೇಕು. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳ ಗೆಲುವಿಗೆ ಮತ್ತು ಪಕ್ಷದ ಗೌರವವನ್ನು ಉಳಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪರ ಯೋಜನೆಗಳನ್ನು ಪ್ರತಿಯೊಂದು ಮನೆಗೂ ತಲುಪಿಸಬೇಕು. ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು. ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ಪ್ರತಿಯೊಬ್ಬ ಅರ್ಹ ಮತದಾರರ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು. ಎಸ್‌ಐಆರ್ ಪ್ರಕ್ರಿಯೆ ಪಾರದರ್ಶಕ ರೀತಿಯಲ್ಲಿ ಆಗುವಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಲಿಂಗರಾಜ ಪಾಟೀಲ್, ಮಾಜಿ ಶಾಸಕ ಶಿವರಾಜ ಸಜ್ಜನ, ಅರುಣಕುಮಾರ ಪೂಜಾರ, ಪ್ರಮುಖರಾದ ದತ್ತಾತ್ರೇಯ, ಭರತ ಬೊಮ್ಮಾಯಿ, ಡಾ. ಬಸವರಾಜ ಕೇಲಗಾರ, ಜಯತೀರ್ಥ ಕಟ್ಟಿ, ಡಿ.ಎಸ್. ಮಾಳಗಿ, ಗವಿಸಿದ್ದಪ್ಪ ದ್ಯಾಮಣ್ಣವರ, ಸಿದ್ದರಾಜ ಕಲಕೋಟಿ, ಬಸವರಾಜ ಕೇಲಗಾರ, ಭೋಜರಾಜ ಕರೂದಿ ಇತರರು ಇದ್ದರು.