ಸಾರಾಂಶ
ಸಿವಿಲ್ ಇಂಜಿನಿಯರ್ ಸಂಘದಿಂದ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿ ಮತ್ತು ಆದರ್ಶಗಳು ಎಲ್ಲರ ಬದುಕಿಗೆ ಪ್ರೇರಣೆಯಾದಾಗ ದೇಶವನ್ನು ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಕಟ್ಟಬಹುದೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.ಚಿಕ್ಕಮಗಳೂರು ಸಿವಿಲ್ ಎಂಜಿನಿಯರ್ಸ್ ಸಂಘ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಅಂಗವಾಗಿ ನಗರದ ಆಜಾದ್ ಪಾರ್ಕ್ ಸಮೀಪದ ಲೋಕೋಪಯೋಗಿ ಇಲಾಖೆ ಮುಂಭಾಗದ ನಿರ್ಮಿಸಿರುವ ಸರ್. ಎಂ. ವಿಶ್ವೇಶ್ವರಯ್ಯ ನವರ ಪುತ್ಥಳಿಗೆ ಸೋಮವಾರ ಮಾಲಾರ್ಪಣೆ ಮಾಡಿ ಮಾತನಾಡುತ್ತಿದ್ದರು.ವಿಶ್ವೇಶ್ವರಯ್ಯ ಅವರ ಬುದ್ಧಿವಂತಿಕೆ ಮತ್ತು ಪರಿಶ್ರಮದ ವ್ಯಕ್ತಿತ್ವದ ಜೊತೆಗೆ ಸಮಾಜಮುಖಿ ಚಿಂತನೆಗಳು ಇಂದಿನ ಯುವ ಎಂಜಿನಿಯರ್‌ಗಳಿಗೆ ಪ್ರೇರಣೆಯಾಗಲಿದ್ದು, ತಮ್ಮ ವೃತ್ತಿ ಬದುಕಿನಲ್ಲಿ ಯಾವುದೇ ರೀತಿಯ ಪ್ರಶ್ನಾರ್ಥಕ ಚಿಹ್ನೆಗೆ ಅವಕಾಶ ನೀಡದೇ ಬಾಳಿ ಬದುಕಿದವರು ಸರ್. ಎಂ. ವಿಶ್ವೇಶ್ವರಯ್ಯ. ಹಾಗಾಗಿಯೇ ಅವರನ್ನು ಭಾರತ ರತ್ನ ಎಂದು ಕೇಂದ್ರ ಸರ್ಕಾರ ಗುರುತಿಸಿದೆ ಎಂದರು.ಸರ್.ಎಂ. ವಿಶ್ವೇಶ್ವರಯ್ಯ ಅವರ ಆದರ್ಶಗಳಿಗೆ ತಕ್ಕಂತೆ ಅವರೊಂದಿಗೆ ಜೋಡಿ ಆದವರು ನಾಲ್ವಡಿ ಕೃಷ್ಣರಾಜ ಒಡೆಯರು. ಇವರಿಬ್ಬರ ಜೋಡಿ ಹಲವು ಶಾಶ್ವತ ಯೋಜನೆಗಳಿಗೆ ಅಡಿಪಾಯ ಹಾಕಿದ್ದು, ಕನ್ನಂಬಾಡಿ ಕಟ್ಟಿದರು ಮಾತ್ರ ವಲ್ಲದೇ ಮೈಸೂರು ಬ್ಯಾಂಕ್, ಕಬ್ಬಿಣದ ಕಾರ್ಖಾನೆ, ಮೈಸೂರು ಶುಗರ್ ಕಾರ್ಖಾನೆ, ಎಂಜಿನಿಯರಿಂಗ್ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸಿಲ್ಕ್ ಹೀಗೆ ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿ ಮೈಸೂರು ಪ್ರಾಂತ್ಯವನ್ನು ಒಂದು ಉತ್ತುಂಗ ಸ್ಥಿತಿಗೆ ಏರಲು ಕಾರಣರಾದವರು ಸರ್. ಎಂ. ವಿಶ್ವೇಶ್ವರಯ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ತಿಳಿಸಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಕರ್ತವ್ಯ ಏನು ಎಂಬುದು ನಾವು ಅಂದುಕೊಂಡಂತೆ ಇಲ್ಲದಿದ್ದರೂ ರಾಮರಾಜ್ಯದ ಬಯಕೆ ಇದೆ. ರಾಮರಾಜ್ಯ ಎಂದರೆ ಬೇರೇನು ಅಲ್ಲ, ಪ್ರಶ್ನಿಸುವಂತಹ ಪ್ರಜಾಪ್ರಭುತ್ವ ಗಟ್ಟಿಯಾಗಲಿ, ಉತ್ತಮ ಪ್ರಜಾ ಪ್ರಭುತ್ವದ ಕಡೆಗೆ ಸಮಾಜ ಕೊಂಡೊಯ್ಯಲು ಸ್ವಾಮಿ ವಿವೇಕಾನಂದ, ಸರ್.ಎಂ. ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಬದುಕಿನ ಆದರ್ಶಗಳು ಪ್ರೇರಣೆಯಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರು ಕೊಟ್ಟಿರುವ ಹಲವಾರು ಯೋಜನೆಗಳು ಹಾಗೂ ಅವರಿಗಿದ್ದ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದ್ದು, ಈ ಯೋಜನೆಗಳು ವ್ಯತಿರಿಕ್ತವಾಗದಂತೆ ಪ್ರಜಾಪ್ರಭುತ್ವದ ನೆಲೆಯಲ್ಲಿ ನಡೆಯುತ್ತಿವೆ ಅಂತಾದರೆ ಎಲ್ಲರೂ ಕೂಡ ವಿಶ್ವೇಶ್ವರಯ್ಯ ಅಗಬಹುದು. ಇಂತಹ ಮಹನೀಯರ ಹಾದಿಯಲ್ಲಿ ನಡೆದಾಗ ಮಾತ್ರ ಸ್ವಾಸ್ಥ್ಯ ಸಮಾಜ ಕಟ್ಟಲು ಸಾಧ್ಯ ಎಂದರು.ಚಿಕ್ಕಮಗಳೂರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಎಸ್. ಶಾಂತೇಗೌಡ, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಶಿವಪ್ರಕಾಶ್ ಮಾತನಾಡಿದರು. ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಸಂಘದ ಅಧ್ಯಕ್ಷ ಜಿ. ಎಲ್. ಶಶಿಧರ್ ಸ್ವಾಗತಿಸಿ, ಕಾರ್ಯದರ್ಶಿ ವಿರೂಪಾಕ್ಷ ವಂದಿಸಿದರು. ಸಿವಿಲ್ ಇಂಜಿನಿಯರ್ ಸಂಘದ ಮಾಜಿ ಅಧ್ಯಕ್ಷ ಜಿ. ರಮೇಶ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಡಿಎಸಿಜಿ ಕಾಲೇಜಿನಿಂದ ಆರಂಭವಾದ ಸರ್.ಎಂ. ವಿಶ್ವೇಶ್ವರಯ್ಯನವರ ಭಾವಚಿತ್ರ ಹೊತ್ತ ಮೆರವಣಿಗೆಗೆ ಕಾಲೇಜಿನ ಪ್ರಾಂಶುಪಾಲ ಶ್ರೀಧರ್‌ಮೂರ್ತಿ ಚಾಲನೆ ನೀಡಿದರು. ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆ ಯಲ್ಲಿ ಪಾಲ್ಗೊಂಡಿದ್ದರು. ಸಿವಿಲ್ ಎಂಜಿನಿಯರ್ ಸಂಘದ ಖಜಾಂಚಿ ಎಚ್.ಎಸ್. ಕಿರಣ್, ಕಾರ್ಯಕ್ರಮ ಸಂಯೋಜಕ ಎ.ಎನ್. ಸತ್ಯನಾರಾಯಣ ಸೇರಿದಂತೆ ಸಂಘದ ಎಲ್ಲಾ ಎಂಜಿನಿಯರ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ನೌಕರರು ಉಪಸ್ಥಿತರಿದ್ದರು. 15 ಕೆಸಿಕೆಎಂ 1ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆ ಮುಂಭಾಗದ ನಿರ್ಮಿಸಿರುವ ಸರ್. ಎಂ. ವಿಶ್ವೇಶ್ವರಯ್ಯ ಪುತ್ಥಳಿಗೆ ಸೋಮವಾರ ಮಾಲಾರ್ಪಣೆ ಮಾಡಿ ಜನ್ಮ ದಿನ ಆಚರಿಸಲಾಯಿತು. ಸಿ.ಟಿ. ರವಿ, ಎಸ್.ಎಲ್. ಭೋಜೇಗೌಡ, ಜಿ.ಎಲ್. ಶಶಿಧರ್, ಶಿವಪ್ರಕಾಶ್ ಇದ್ದರು.