ಮಂಗಳೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ಶನಿವಾರ ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ ಎಂಬ ಶೀರ್ಷಿಕೆಯಡಿ ಸಂಘಟನೆಯ ಸವಾಲುಗಳು ಸಂಘಟಕ -ಕಲಾವಿದ- ಪ್ರೇಕ್ಷಕ- ಪೋಷಕ ಸಮಭಾಗಿಗಳು (ಕರ್ತಾ- ಕಾರಯಿತಾ- ಪ್ರೇರಕಃ- ಅನುಮೋದಕಃ ಸಮಭಾಗಿನಃ)ಎಂಬ ವಿಶೇಷ ಚಿಂತನ ಮಂಥನ ಕಾರ್ಯಕ್ರಮ ನಡೆಯಿತು.
ಹಿರಿಯ ಸಂಘಟಕ ಭುಜಬಲಿ ಧರ್ಮಸ್ಥಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟಕರಲ್ಲಿ ಪಾರದರ್ಶಕತೆ - ಕರ್ತವ್ಯ ಪ್ರಜ್ಞೆ- ಕಲಾನಿಷ್ಠೆ ಇದ್ದಲ್ಲಿ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.ಯಕ್ಷಗಾನದ ವಿದ್ವಾಂಸ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್.ಸಾಮಗ ಉದ್ಘಾಟಿಸಿದರು.
ಉಜಿರೆ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಮಾತನಾಡಿ, ಸಂಘಟಕರು ತಮ್ಮ ಸಂಘಟನೆ ಯಶಸ್ವಿಯಾಗಿಸುವಲ್ಲಿ ಪ್ರಾಯೋಜಕರ ವಿಶ್ವಾಸ ಗಳಿಸಬೇಕು. ಪ್ರದರ್ಶನ ನಡೆಯುವ ಪ್ರದೇಶದ ಸ್ಥಳೀಯರನ್ನೂ, ಯುವ ಕಲಾವಿದರನ್ನು, ಮಹಿಳೆಯರನ್ನೂ ಜತೆ ಕರೆಸಿ ಹೊಸ ತಲೆಮಾರಿನ ಕಲಾವಿದರನ್ನು ಯಕ್ಷಗಾನಕ್ಕೆ ಸೆಳೆಯುವ ಪ್ರಯತ್ನ ಮಾಡಬೇಕು ಎಂದರು.ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಮಾತನಾಡಿ, ಯಕ್ಷಗಾನದ ಭವಿಷ್ಯವನ್ನು ನಿರ್ಧರಿಸುವುದು ಉತ್ತಮ ಕಲಾವಿದರಷ್ಟೇ ಅಲ್ಲ, ಸಮರ್ಥ ಸಂಘಟಕರ ನಿರ್ಮಾಣವೂ ಆಗಿದೆ ಎಂದರು.ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್, ಎಂ.ಶಾಂತಾರಾಮ ಕುಡ್ವ ಮೂಡುಬಿದರೆ ಮುಖ್ಯ ಅತಿಥಿಗಳಾಗಿದ್ದರು.
ಪ್ರಮುಖರಾದ ಚಂದ್ರಶೇಖರ್ ಭಟ್ ಕೊಂಕಣಾಜೆ, ಜನಾರ್ಧನ ಅಮ್ಮುಂಜೆ, ಗಣೇಶ್ ಪಾಲೆಚಾರ್, ವಿನಯ ಆಚಾರ್ ಹೊಸಬೆಟ್ಟು, ಸುಬ್ರಹ್ಮಣ್ಯ ಬೈಪಡಿತ್ತಾಯ ನಂದಳಿಕೆ, ದಿವಾಕರ ಆಚಾರ್ಯ ಗೇರುಕಟ್ಟೆ, ಸದಾಶಿವ ನೆಲ್ಲಿಮಾರು, ವಸಂತ ಮಾಸ್ಟರ್ ಬಾಯಾರು, ಜಯರಾಮ ದೇವಸ್ಯ, ಕುಮಾರ ಶಂಕರ ಭಟ್ ತಲೆಂಗಳ, ತಲ್ಪಣಾಜೆ ವೆಂಕಟ್ರಮಣ ಭಟ್, ಜಯಲಕ್ಷ್ಮಿ ಆರ್.ಹೊಳ್ಳ, ಗಣೇಶ ನಾವಡ ಮೀಯಪದವು, ನಾರಾಯಣ ತುಂಗ ಮಧೂರು, ಪೆರುವಡಿ ಸುಬ್ರಹ್ಮಣ್ಯ ಭಟ್, ಜಯಲಕ್ಷ್ಮಿ ಕಾರಂತ, ರಾಜಾರಾಮ ಹೊಳ್ಳ ಕೈರಂಗಳ, ರಾಧಾಕೃಷ್ಣ ಕೆ ಉಳಿಯತ್ತಡ್ಕ, ರಮೇಶ್ ಕೆ.ವಿ., ಪ್ರೊ.ಶ್ರೀನಾಥ್ ಕಾಸರಗೋಡು, ಜಗದೀಶ ಕೂಡ್ಲು, ಅನುಪಮಾ ರಾಘವೇಂದ್ರ ಭಟ್ ಉಡುಪಮೂಲೆ ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸ್ವಾಗತಿಸಿದರು. ಸುಮಿತ್ರಾ ಮಯ್ಯ ಸಿರಿಬಾಗಿಲು ವಂದಿಸಿದರು. ರಾಜಾರಾಮ ರಾವ್ ಮೀಯಪದವು ನಿರೂಪಿಸಿದರು.