ಪ್ರಯಾಣಿಕರಿಗೆ ಸ್ಪಂದಿಸದ ಹೆದ್ದಾರಿ ಪ್ರಾಧಿಕಾರ ಮತ್ತು ಆಡಳಿತ ವರ್ಗ
ಕನ್ನಡಪ್ರಭ ವಾರ್ತೆ ಶಿರಸಿಗೊಂದಲದ ಗೂಡಾದ ಶಿರಸಿ ಹುಬ್ಬಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಜೀವಭಯದಲ್ಲೇ ಸಂಚರಿಸುವಂತಾಗಿದೆ.ಈ ಹೆದ್ದಾರಿ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಜನತೆ ಈ ಹೆದ್ದಾರಿಯಲ್ಲಿ ಹಿಡಿಶಾಪ ಹಾಕುತ್ತಲೇ ಸಾಗಬೇಕಾಗಿದೆ. ನಗರಕ್ಕೆ ಸಂಪರ್ಕ ಕಲ್ಪಿಸುವ ನಗರ ಮತ್ತು ಗ್ರಾಮೀಣ ರಸ್ತೆ ಸಾರಿಗೆ ಮಾರ್ಗಗಳು ಬಹುತೇಕ ಹಾಳಾಗಿವೆ.ಇಲ್ಲಿ ಪ್ರತಿ ದಿನ ಹುಬ್ಬಳ್ಳಿಯಿಂದ ತಡಸ, ಮುಂಡಗೋಡದಿಂದ ಮತ್ತು ಹಾವೇರಿಯಿಂದ ಬರುವ ಬಸ್‌ಗಳು ಶಿರಸಿ ಮಾರ್ಗವಾಗಿಯೇ ಸಂಚರಿಸಬೇಕು. ಈ ನೂರಾರು ಬಸ್‌ಗಳು ಹಾವೇರಿ ಶಿರಸಿ ರಾಷ್ಟ್ರೀಯ ಹೆದ್ದಾರಿ ಮತ್ತು ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿ ತಲುಪ ಬೇಕಾದರೆ ಶಿರಸಿಯೇ ಅವುಗಳಿಗೆ ಕೇಂದ್ರ ಸ್ಥಾನವಾಗಿದೆ.ಶಿರಸಿಯಿಂದ ಅಂಕೋಲಾ, ಕಾರವಾರ, ಗೋವಾಕ್ಕೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಅನೇಕ ಪುಣ್ಯ ಕ್ಷೇತ್ರಗಳಿಗೆ, ಉದ್ಯೋಗದ ನಿಮಿತ್ತ, ಪ್ರವಾಸಿಗರು, ನೌಕರರು ದಿನ ನಿತ್ಯ ಪ್ರಯಾಣ ಮಾಡುತ್ತಾರೆ. ಹೆದ್ದಾರಿಯ ಆಧ್ವಾನಗಳಿಂದ ಜೀವ ಕೈಯಲ್ಲಿ ಹಿಡಿದೆ ಜನತೆ ಪ್ರಯಾಣಿಸಬೇಕಾಗಿದೆ.ಈ ರಸ್ತೆಯು ಸಂಪೂರ್ಣವಾಗಿ ಕಲ್ಲು ಮತ್ತು ದೂಳಿನಿಂದ ಅವೃತವಾಗಿ ಎದುರಿಗೆ ಬರುವ ವಾಹನ ಕೂಡ ಕಾಣಿಸುತ್ತಿಲ್ಲ. ಇದರಿಂದ ಸಣ್ಣ ಪುಟ್ಟ ಅಪಘಾತಗಳಿಗೆ ಈಗಾಗಲೇ ಹಲವಾರು ಜನ ತುತ್ತಾಗಿದ್ದಾರೆ. ಇನ್ನು ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸುವುದು ತೀರಾ ಅಪಾಯಕಾರಿಯಾಗಿದ್ದು, ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಪ್ರಯಾಣಿಕರಿಗೆ ಅಗತ್ಯವಾದ ಸೂಚನಾ ಫಲಕಗಳನ್ನು ಸಹ ಅಳವಡಿಸಿಲ್ಲಪ್ರಯಾಣಿಕರು ಪ್ರತಿದಿನ ಸಂಚಾರಕ್ಕೆ ಪರಿತಪಿಸುತ್ತಿದ್ದರೂ ಕೂಡ ಜನಪ್ರತಿನಿಧಿಗಳು ಮತ್ತು ರಾಷ್ಟೀಯ ಹೆದ್ದಾರಿ ಪ್ರಾಧಿಕಾರದವರು ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಇಲ್ಲದಿದ್ದರೆ ಹೆದ್ದಾರಿ ನಿರ್ಮಾಣ ಕಾಮಗಾರಿ ಮುಗಿದು ಕೆಲ ವರ್ಷಗಳೇ ಕಳೆದಿರುತ್ತಿತ್ತು.ಹಾವೇರಿ-ಶಿರಸಿ, ಹುಬ್ಬಳ್ಳಿ-ಶಿರಸಿ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣ ಹದಗೆಟ್ಟಿರುವುದರಿಂದ ಅಪಘಾತಕ್ಕೆ ಆಹ್ವಾನಿಸಿದಂತಿದೆ. ಮುಂದೆ ದೊಡ್ಡ ಅಪಘಾತ ಆಗುವ ಮುನ್ನವೇ ಆಡಳಿತ ವ್ಯವಸ್ಥೆ ಜಾಗೃತಗೊಳ್ಳಬೇಕು ಇಲ್ಲದಿದ್ದರೆ ಮುಂದಾಗುವ ಎಲ್ಲ ಅನಾಹುತಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜವಾಬ್ದಾರಿಯಾಗಲಿದೆ ಎನ್ನುತ್ತಾರೆ ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು.