ಸುಶಿಕ್ಷಿತ ಮಹಿಳೆಯರಿಂದ ಸಮಾಜ ಅಭಿವೃದ್ಧಿ

| Published : Mar 10 2024, 01:30 AM IST

ಸಾರಾಂಶ

ಮಹಿಳೆಯರು ಸುಶಿಕ್ಷಿತರಾದರೆ ಇಡೀ ಸಮಾಜವೇ ಅಭಿವೃದ್ಧಿ ಹೊಂದಲಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಕೆ. ಸೋಮಶೇಖರ್ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ಮಹಿಳೆಯರು ಸುಶಿಕ್ಷಿತರಾದರೆ ಇಡೀ ಸಮಾಜವೇ ಅಭಿವೃದ್ಧಿ ಹೊಂದಲಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಕೆ. ಸೋಮಶೇಖರ್ ಅವರು ತಿಳಿಸಿದರು.

ಮಲೆ ಮಹದೇಶ್ವರ ಬೆಟ್ಟದ ರಂಗಮಂದಿರದಲ್ಲಿಂದು ಕರ್ನಾಟಕ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಕೊಳ್ಳೇಗಾಲ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘ, ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ತೊಟ್ಟಿಲು ತೂಗುವ ಕೈ ಇಡೀ ದೇಶವನ್ನು ತೂಗೀತು ನಾಣ್ನುಡಿಯಂತೆ ಕುಟುಂಬವನ್ನು ಸಮಾನ ಮನಸ್ಕಳಾಗಿ ನಿಭಾಯಿಸುವ ಮಹಿಳೆಯರು ಪ್ರಸ್ತುತ ದಿನಗಳಲ್ಲಿ ಆಡಳಿತ ಸೇವೆಯಲ್ಲಿಯೂ ಪರಿಪೂರ್ಣ ಹೆಜ್ಜೆಯನ್ನಿಡುತ್ತಿರುವುದು ಆರೋಗ್ಯಕಾರಿ ಬೆಳವಣಿಗೆಯಾಗಿದೆ. ಸುಶಿಕ್ಷಿತ ಮಹಿಳೆಯರಿಂದ ಆಡಳಿತ ಅಭಿವೃದ್ದಿ ವೇಗ ಪಡೆಯಲಿದ್ದು, ಇದರಿಂದ ಇಡೀ ಸಮಾಜ, ಜಿಲ್ಲೆ, ರಾಜ್ಯ ಹಾಗೂ ದೇಶ ಪ್ರಗತಿ ಪಥದತ್ತ ಸಾಗಲಿದೆ ಎಂದರು.ಸಾಮಾಜಿಕವಾಗಿ ಮಹಿಳೆಯರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಮಹಿಳೆಯರ ದಿನ ಆಚರಣೆಯನ್ನು ೧೯೦೮ ರಿಂದಲೂ ಹಮ್ಮಿಕೊಳ್ಳಲಾಗುತ್ತಿದೆ. ೧೨ನೇ ಶತಮಾನದಲ್ಲಿ ಬಸವಣ್ಣ ಅನುಭವ ಮಂಟಪದಲ್ಲಿ ಹಾಗೂ ೧೬ನೇ ಶತಮಾನದಲ್ಲಿ ಮಹದೇಶ್ವರರು ಸಹ ಮಹಿಳೆಯರ ಪರವಾಗಿ ಕೆಲಸ ಮಾಡಿದ್ದಾರೆ. ಅಂಬೇಡ್ಕರ್ ಮಹಿಳೆಯರ ಅಭಿವೃದ್ಧಿಗಾಗಿ ನೀಡಿರುವ ಸಂವಿಧಾನಬದ್ಧ ಹಕ್ಕುಗಳನ್ನು ಸದ್ಭಳಕೆ ಮಾಡಿಕೊಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಅವರು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಚಾಮರಾಜನಗರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್ ಅವರು ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿರುವ ಸರ್ಕಾರವು ಹಲವಾರು ಸೌಲಭ್ಯಗಳನ್ನು ನೀಡಿದೆ. ಮಹಿಳೆಯರು ಇಂದು ದೇಶದ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದಡಿ ಇಡುತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸೈನ್ಯದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚಿನ ಸಾಧನೆಗೆ ಮುಂದಾಗಬೇಕು ಎಂದರು. ಎಡಿಸಿ ಗೀತಾ ಹುಡೇದ ಮಾತನಾಡಿ ದೇಶಾದ್ಯಂತ ಇಂದು ಮಹಿಳೆಯರ ದಿನ ಆಚರಿಸಲಾಗುತ್ತಿದ್ದು, ಮಹಿಳೆಯರ ಸ್ವಾವಲಂಬನೆ ಸರ್ಕಾರ ಆದ್ಯತೆ ನೀಡಿದೆ. ಬಸವಣ್ಣನವರು ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಗೌರವ ನೀಡಿದ್ದರು. ಮಹಿಳಾ ವಚನಗಾರ್ತಿಯರು ಅಂದಿನ ಸಮಾಜದಲ್ಲಿದ್ದ ಮೌಢ್ಯತೆ, ಕಂದಚಾರಗಳ ವಿರುದ್ಧ ಜನರನ್ನು ಎಚ್ಚರಿಸಿದ್ದರು. ಸಂವಿಧಾನದಲ್ಲಿ ಅಂಬೇಡ್ಕರ್ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ ಜನರು ನೆಮ್ಮದಿಯಾಗಿ ಬದುಕಲು ದೇಶದ ಸಂವಿಧಾನದಲ್ಲಿ ೩ ಸಾವಿರಕ್ಕೂ ಹೆಚ್ಚಿನ ಕಾನೂನುಗಳಿವೆ. ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಕಾನೂನುಗಳಿವೆ. ಆದರೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ವಿಚ್ಛೇದನ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಗಂಡು ಹೆಣ್ಣು ಒಬ್ಬರಿಗೊಬ್ಬರು ಗೌರವ ನೀಡಬೇಕು. ಸಂಸಾರದಲ್ಲಿ ಹೊಂದಾಣಿಕೆ, ಸಾಮರಸ್ಯ, ಅನ್ಯೋನ್ಯತೆ ಇರಬೇಕು. ಮಹಿಳೆ, ಪುರುಷರಿಗೆ ಸಮಾನತೆ ನೀಡಿದ ಬಸವಣ್ಣ ಹಾಗೂ ಅಂಬೇಡ್ಕರ್ ಸ್ಮರಣೆ ಎಲ್ಲರಿಗೂ ಅವಶ್ಯವಾಗಿದೆ ಎಂದರು. ವಕೀಲ ರವಿ, ಮಹದೇಶ್ವರಸ್ವಾಮಿ ಕ್ಚೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ಮಾತನಾಡಿದರು. ಬಳಿಕ ಅವ್ವನ ನೆನಪು ಕುರಿತ ಸ್ವರಚಿತ ಕವನವನ್ನು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದರು. ಪ್ರಧಾನ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಬಿ.ಎಸ್. ಭಾರತಿ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈ ಶಂಕರ್, ಉಪಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಸಾರ್ವಜನಿಕ ಸಂಪಕಾದಿಕಾರಿ ಬಾಲಸುಬ್ರಮಣಿ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಶ್ರೀಧರ, ಹೆಚ್ಚುವರಿ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶ ಎನ್.ಆರ್. ಲೋಕಪ್ಪ, ಕೊಳ್ಳೇಗಾಲ ಪೊಲೀಸ್ ಉಪಾಧೀಕ್ಷಕ ಧರ್ಮೇಂದ್ರ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.